ನವದೆಹಲಿ: ನಕ್ಷತ್ರಗಳಿಗೂ ಹುಟ್ಟು- ಸಾವು ಇದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಹುಟ್ಟು ಸಾವು ಇದ್ದ ಮೇಲೆ ನಕ್ಷತ್ರಗಳಲ್ಲೂ ಬಾಲ್ಯಾವಸ್ಥೆ, ಯೌವ್ವನಾವಸ್ಥೆ ಇರುತ್ತದೆ. ಭಾರತೀಯ ಬಾಹ್ಯಾಕಾಶ ವಿಜ್ಞಾನಿಗಳು ಅತ್ಯಂತ ಅಪರೂಪದ ಯುವ ನಕ್ಷತ್ರಗಳ ಸಮೂಹವನ್ನು ಗುರುತಿಸಿದ್ದಾರೆ. ಗುರುತ್ವಾಕರ್ಷಣೆಯ ಪ್ರಭಾವದ ಅಡಿಯಲ್ಲಿ ಬಾಹ್ಯಾಕಾಶದಲ್ಲಿನ ವಸ್ತುಗಳನ್ನು ಸೆಳೆಯುವ ಮೂಲಕ ಮತ್ತು ಒಂದು ನಕ್ಷತ್ರ ಮತ್ತೊಂದು ನಕ್ಷತ್ರದೊಂದಿಗೆ ಬೆರೆತುಕೊಳ್ಳುವ ಮುಖಾಂತರ ಈ ನಕ್ಷತ್ರಗಳು ದೊಡ್ಡದಾಗಿ ಬೆಳೆಯುತ್ತಿವೆ. ಈ ಅಪರೂಪದ ನಕ್ಷತ್ರಗಳು ಇತ್ತೀಚಿನ ದಿನಗಳಲ್ಲಿ ಬಾಹ್ಯಾಕಾಶ ವಿಜ್ಞಾನಗಳ ಆಸಕ್ತಿಯನ್ನು ಗಳಿಸಿವೆ. ಯುವ ನಕ್ಷತ್ರಗಳೆಂದೇ ಹೆಸರಾದ ಈ ನಕ್ಷತ್ರಗಳ ಅಧ್ಯಯನವನ್ನು ಭಾರತೀಯ ಬಾಹ್ಯಾಕಾಶ ವಿಜ್ಞಾನಿಗಳು ಮಾಡುತ್ತಿದ್ದಾರೆ.
ಸಾಮಾನ್ಯವಾಗಿ ನಕ್ಷತ್ರಗಳು ಹೊಳೆಯಬೇಕೆಂದರೆ ಅಥವಾ ಶಾಖ ಶಕ್ತಿಯನ್ನು ಬಿಡುಗಡೆ ಮಾಡಬೇಕೆಂದರೆ, ಬೈಜಿಕ ಸಮ್ಮಿಲನ ಕ್ರಿಯೆ ನಡೆಯಬೇಕು. ಅಂದರೆ ನಕ್ಷತ್ರದಲ್ಲಿರುವ ಹೈಡ್ರೋಜನ್ ಮತ್ತು ಹೀಲಿಯಂ ಹೊತ್ತಿ ಉರಿಯಬೇಕು. ಆದರೆ ಈ ಯುವ ನಕ್ಷತ್ರಗಳಲ್ಲಿ ಡ್ಯುಟೇರಿಯಂ ಸಮ್ಮಿಲನ ಕ್ರಿಯೆ ಮತ್ತು ಗುರುತ್ವಾಕರ್ಷಣೆಯ ಸಂಕೋಚನದಿಂದ ಬೆಳಕು ಅಥವಾ ಶಾಖ ಬಿಡುಗಡೆಯಾಗುತ್ತದೆ. ನಕ್ಷತ್ರಗಳ ಮಧ್ಯದಲ್ಲಿ ಇನ್ನೂ ಹೈಡ್ರೋಜನ್ ಸಮ್ಮಿಲನ ಆರಂಭವಾಗಿಲ್ಲ. ಡ್ಯುಟೇರಿಯಂ ಸಮ್ಮಿಲನ ಕ್ರಿಯೆಯ ಮೂಲಕ ನಕ್ಷತ್ರ ಹೊಳೆಯುವುದು ಯಾವುದಾದರೋ ಒಂದು ನಕ್ಷತ್ರದ ಉಗಮದ ಮೊದಲ ಮತ್ತು ಪ್ರಮುಖ ಹಂತವಾಗಿದೆ. ಈ ನಕ್ಷತ್ರಗಳಲ್ಲಿ ಸುತ್ತಲೂ ಡಿಸ್ಕ್ ರೀತಿಯ ರಚನೆಯನ್ನು ಹೊಂದಿವೆ. ಈ ರಚನೆಗಳು ಕೆಲವು ವಸ್ತುಗಳನ್ನು ನಕ್ಷತ್ರದೊಳಗೆ ಸೇರಿಸುತ್ತವೆ. ಇದರಿಂದಾಗಿ ನಕ್ಷತ್ರಗಳು ದೊಡ್ಡದಾಗುತ್ತಿವೆ.
Gaia 20eae ಎಂಬ ನಕ್ಷತ್ರವನ್ನು ವಿಜ್ಞಾನಿಗಳು ಗುರ್ತಿಸಿದ್ದಾರೆ. ಈ ನಕ್ಷತ್ರ ಯುವ ನಕ್ಷತ್ರಗಳ ಸಮೂಹದಲ್ಲಿದೆ. ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ (ಟಿಐಎಫ್‌ಆರ್) ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ (ಐಐಎ) ವಿಜ್ಞಾನಿಗಳನ್ನು ಒಳಗೊಂಡಂತೆ ಆರ್ಯಭಟ್ಟ ರಿಸರ್ಚ್ ಇನ್‌ಸ್ಟಿಟ್ಯೂಟ್ ಆಫ್ ಅಬ್ಸರ್ವೇಶನಲ್ ಸೈನ್ಸಸ್‌ನ (ಎಆರ್‌ಐಇಎಸ್) ಭಾರತೀಯ ಖಗೋಳಶಾಸ್ತ್ರಜ್ಞರು ಈ ನಕ್ಷತ್ರವನ್ನು ಸಂಶೋಧನೆ ಮಾಡಿದ್ದು, ಹೆಚ್ಚಿನ ಸಂಶೋಧನೆ ಕೈಗೊಂಡಿದ್ದಾರೆ. ಆರ್ಯಭಟ್ಟ ಸಂಶೋಧನಾ ಸಂಸ್ಥೆಯು ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುವ ಸಂಸ್ಥೆಯಾಗಿದೆ.
ಪಿಹೆಚ್ಡಿ ವಿದ್ಯಾರ್ಥಿಯಾದ ಅರ್ಪಣ್ ಘೋಷ್ ನೇತೃತ್ವದ ಭಾರತೀಯ ವಿಜ್ಞಾನಿಗಳ ತಂಡದಲ್ಲಿರುವ ಡಾ. ಸೌರಭ್ ಶರ್ಮಾ, ಯುಎಸ್‌ಎಯ ಪೆನ್ಸಿಲ್ವೇನಿಯಾ ಸ್ಟೇಟ್ ಯೂನಿವರ್ಸಿಟಿಯ ಪಿ. ನಿನನ್, ಮುಂಬೈನ ಟಿಐಎಫ್‌ಆರ್‌ನ ಡಾ.ಡಿ.ಕೆ.ಓಜಾ, ಬೆಂಗಳೂರಿನ ಐಐಎಯಿಂದ ಡಾ.ಬಿ.ಸಿಭಟ್ ಮತ್ತು ಇತರರು Gaia 20eae ನಕ್ಷತ್ರದ ಮೇಲೆ ಸಂಶೋಧನೆ ಆರಂಭಿಸಿದ್ದಾರೆ. ಇದಷ್ಟು ಮಾತ್ರವಲ್ಲದೇ ಪ್ರಿನ್ಸ್‌ಟನ್ ವಿಶ್ವವಿದ್ಯಾಲಯ, ಒಕ್ಲಹೋಮ ವಿಶ್ವವಿದ್ಯಾಲಯ, ಜಾನ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯ, ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ಮತ್ತು ಬಾಹ್ಯಾಕಾಶ ದೂರದರ್ಶಕ ವಿಜ್ಞಾನ ಸಂಸ್ಥೆ, ಥೈಲ್ಯಾಂಡ್‌ನ ರಾಷ್ಟ್ರೀಯ ಖಗೋಳ ಸಂಶೋಧನಾ ಸಂಸ್ಥೆ ಮತ್ತು ಆಸ್ಟ್ರೇಲಿಯಾದ ಮ್ಯಾಕ್ವಾರಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಮತ್ತು ಸಂಶೋಧಕರು ಈ ಸಂಶೋಧನೆಯಲ್ಲಿ ತೊಡಗಿಕೊಂಡಿದ್ದಾರೆ.
ಖಗೋಳಶಾಸ್ತ್ರಜ್ಞರ ತಂಡವು ಉತ್ತರಾಖಂಡದಲ್ಲಿರುವ 1.3ಎಂ ದೇವಸ್ಥಲ್ ಫಾಸ್ಟ್ ಆಪ್ಟಿಕಲ್ ಟೆಲಿಸ್ಕೋಪ್, 3.6ಎಂ ದೇವಸ್ಥಲ್ ಆಪ್ಟಿಕಲ್ ಟೆಲಿಸ್ಕೋಪ್, ಲಡಾಖ್ನಲ್ಲಿರುವ 2ಎಂ ಹಿಮಾಲಯನ್ ಚಂದ್ರ ಟೆಲಿಸ್ಕೋಪ್ ಮತ್ತು ಬೇರೆ ದೇಶಗಳಲ್ಲಿರುವ ದೂರದರ್ಶಕಗಳನ್ನು ಬಳಸಿಕೊಂಡಿದೆ. ಟೆಕ್ಸಾಸ್ನಲ್ಲಿರುವ 10ಎಂ ಹೆಚ್ಇಟಿ ಟೆಲಿಸ್ಕೋಪ್ ಮುಂತಾದ ಸೌಲಭ್ಯವನ್ನೂ ಬಳಸಿಕೊಳ್ಳಲಾಗಿದೆ. ಈ ಟೆಲಿಸ್ಕೋಪ್ಗಳ ಮೂಲಕ ಎಷ್ಟು ಬೆಳಕನ್ನು ನಕ್ಷತ್ರ ಹೊರಹಾಕಬಲ್ಲದು ಎಂಬುದನ್ನು ಅವಲೋಕನ ಮಾಡಲಾಗುತ್ತಿದೆ. Gaia 20eae ನಕ್ಷತ್ರ ಕೇವಲ 34 ದಿನಗಳಲ್ಲಿ ಹೊಳಪನ್ನು ಹೆಚ್ಚಿಸಿಕೊಂಡಿದೆ ಎಂದು ತಿಳಿದುಬಂದಿದ್ದು, ಆದರೆ, ಈಗ Gaia 20eae ಹೊಳಪನ್ನು ಕಳೆದುಕೊಳ್ಳಲು ಆರಂಭಿಸಿದೆ. ಹೆಚ್ಚಿನ ವಸ್ತುಗಳು ಸೇರ್ಪಡೆಯಾದ ಕಾರಣದಿಂದಾಗಿ ಮತ್ತು ನಕ್ಷತ್ರದ ಸುತ್ತಲೂ ಪ್ರಕ್ಷುಬ್ದತೆ ಏರ್ಪಟ್ಟಿದೆ ಎಂದು ವಿಜ್ಞಾನಿಗಳು ಹೇಳಿದ್ದು, ಸಂಶೋಧನೆ ಮುಂದುವರೆದಿದೆ.
ಇದನ್ನೂ ಓದಿ: ಬಾಹ್ಯಾಕಾಶಕ್ಕೆ ತೆರಳಿದ್ದ ಖಾಸಗಿ ಮಿಷನ್ ಸುರಕ್ಷಿತವಾಗಿ ಭೂಮಿಗೆ ವಾಪಸ್!