ಚೆನ್ನೈ, ತಮಿಳುನಾಡು: ಸಂವಹನ ಸೇವೆಗೆ ಅನುವಾಗುವ ನೆಟ್‌ವರ್ಕ್ ಆಕ್ಸೆಸ್ ಅಸೋಸಿಯೇಟೆಡ್ ಲಿಮಿಟೆಡ್ನ(ಒನ್‌ವೆಬ್) 36 ಉಪಗ್ರಹಗಳನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಇದೇ 23 ರಂದು ನಭಕ್ಕೆ ಹಾರಿಬಿಡಲಿದೆ.
6 ಟನ್ ಭಾರವಿರುವ ಒನ್‌ವೆಬ್‌ನ 36 ಉಪಗ್ರಹಗಳನ್ನು ಜಿಎಸ್ಎಲ್ವಿ- ಮಾರ್ಕ್ III ರಾಕೆಟ್ನಿಂದ ಉಡ್ಡಯನ ಮಾಡಲು ಅಂತಿಮ ಸಿದ್ಧತೆ ನಡೆಯುತ್ತಿದೆ. ಅಕ್ಟೋಬರ್ 23 ರಂದು ಮಧ್ಯಾಹ್ನ 12.07 ಕ್ಕೆ ಸರಿಯಾಗಿ ರಾಕೆಟ್ ನಭಕ್ಕೆ ಚಿಮ್ಮಲಿದೆ ಎಂದು ಇಸ್ರೋ ತಿಳಿಸಿದೆ. ಕ್ರಯೋಜೆನಿಕ್ ಇಂಜಿನ್ ಸಿದ್ಧತೆ ಮತ್ತು ಸಲಕರಣೆಗಳ ಜೋಡಣೆ ಪೂರ್ಣಗೊಂಡಿದೆ. ಉಪಗ್ರಹಗಳನ್ನು ರಾಕೆಟ್‌ನಲ್ಲಿ ಜೋಡಿಸಲಾಗಿದೆ. ಅಂತಿಮ ಪರಿಶೀಲನೆಗಳು ನಡೆಸಲಾಗುತ್ತಿದೆ ಎಂದು ಹೇಳಿದೆ.
ಇಸ್ರೋದ ವಾಣಿಜ್ಯ ವಿಭಾಗವಾದ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ (ಎನ್‌ಎಸ್‌ಐಎಲ್), ನೆಟ್‌ವರ್ಕ್ ಆಕ್ಸೆಸ್ ಅಸೋಸಿಯೇಟೆಡ್ ಲಿಮಿಟೆಡ್ (ಒನ್‌ವೆಬ್) ನೊಂದಿಗೆ ಬ್ರಾಡ್‌ಬ್ಯಾಂಡ್ ಸಂವಹನಕ್ಕಾಗಿ ಕಡಿಮೆ ಭೂ ಕಕ್ಷೆಯಲ್ಲಿ ಉಪಗ್ರಹಗಳನ್ನು ಉಡಾವಣೆ ಮಾಡುವ ಒಪ್ಪಂದಗಳಿಗೆ ಸಹಿ ಹಾಕಿದೆ.
ಈಗ ಉಡಾಯಿಸುವ ಉಪಗ್ರಹಗಳು 6 ಟನ್ ತೂಕವಿದ್ದು, 2023 ರ ಜನವರಿಯಲ್ಲಿ ಮತ್ತಷ್ಟು ಉಪಗ್ರಹಗಳು ಕಕ್ಷೆಗೆ ಬಿಡುವ ಯೋಜನೆ ಇದೆ. ಇದಲ್ಲದೇ ಮೂರು ಬಾರಿ ಇಂತಹ ಯೋಜನೆ ರೂಪಿಸಲಾಗುತ್ತಿದೆ. ಇವೆಲ್ಲವೂ ಸಂವಹನಕ್ಕಾಗಿ ಉಡಾವಣೆ ಮಾಡಲಾಗುತ್ತಿರುವ ಸ್ಯಾಟಲೈಟ್ಗಳು ಎಂದು ಒನ್‌ವೆಬ್ ಹೇಳಿದೆ.
ಭಾರತದ ಭಾರ್ತಿ ಗ್ಲೋಬಲ್ ಮತ್ತು ಬ್ರಿಟನ್ ಸರ್ಕಾರದ ಜೊತೆಗೆ ಒನ್‌ವೆಬ್ ಸಂಸ್ಥೆ ಜಂಟಿ ಉದ್ಯಮವನ್ನು ಹೊಂದಿದೆ. ಈ ಉಪಗ್ರಹ ಕಂಪನಿಯು ಸಂವಹನ ಸೇವೆಗಳಿಗಾಗಿ ಕಡಿಮೆ ಭೂಕಕ್ಷದಲ್ಲಿ 650 ಉಪಗ್ರಹಗಳ ಸಮೂಹವನ್ನು ಹೊಂದಲು ಇದು ಯೋಜಿಸಿದೆ.
ಓದಿ: ಪರೋಟಾಕ್ಕಾಗಿ ಕಾಂಗ್ರೆಸ್ ಬಿಜೆಪಿ ಕಿತ್ತಾಟ.. ತಿನ್ನುವ ಪದಾರ್ಥ ಮೇಲೇಕೆ ಶೇ18ರ ಜಿಎಸ್ಟಿ?