ಬೆಂಗಳೂರು: ದೇಶದಲ್ಲಿ ಬಳಕೆಯಾಗುತ್ತಿರುವ ಶೇ 99.2ಕ್ಕೂ ಹೆಚ್ಚು ಮೊಬೈಲ್ ಫೋನ್ಗಳನ್ನು ಸ್ಥಳೀಯವಾಗಿಯೇ ಉತ್ಪಾದಿಸಲಾಗಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. ಭಾರತದಲ್ಲಿ ಮೊಬೈಲ್ ಉತ್ಪಾದಕ ಉದ್ಯಮ 44 ಬಿಲಿಯನ್ ಡಾಲರ್ಗೂ ಮೀರಿದೆ ಎಂದು ಅವರು ಮಾಹಿತಿ ಒದಗಿಸಿದರು.
ಹೊಸೂರಿನಲ್ಲಿರುವ ಟಾಟಾ ಐಫೋನ್ ಸ್ಥಾವರಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಅನೇಕರು ತಾವು ಆಮದಾಗಿರುವ ಮೊಬೈಲ್ಗಳನ್ನೇ ಬಳಕೆ ಮಾಡುತ್ತಿದ್ದೇವೆ ಎಂದು ಭಾವಿಸಿದ್ದಾರೆ ಎಂದು ವಿಪಕ್ಷ ನಾಯಕರಿಗೆ ತಿರುಗೇಟು ಕೊಟ್ಟರು. ಅವರಿಗೆ ತಾವು ಬಳಸುತ್ತಿರುವ ಮೊಬೈಲ್ಗಳನ್ನು ಸ್ಥಳೀಯವಾಗಿ ಉತ್ಪಾದಿಸಲಾಗಿದೆ ಎಂಬುದು ತಿಳಿದಿಲ್ಲ. ಪ್ರಸ್ತುತ ಭಾರತದಲ್ಲಿ ಅನೇಕ ಸೇಲ್ ಫೋನ್ ಉತ್ಪಾದಕರ ಘಟಕಗಳಿವೆ. ಭಾರತ 2025-26ರ ವೇಳೆಗೆ 300 ಬಿಲಿಯನ್ ಡಾಲರ್ ಮೌಲ್ಯದ ಎಲೆಕ್ಟ್ರಾನಿಕ್ ಸರಕುಗಳನ್ನು ಉತ್ಪಾದಿಸುವ ಗುರಿ ಹೊಂದಿದೆ. ಸಬ್ಸಿಡಿ ಮೂಲಕ ಉತ್ಪಾದಕರಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ದೇಶವು ಮೊಬೈಲ್ ಉತ್ಪಾದನೆಯಲ್ಲಿ ಚೀನಾ ಹಿಂದಿಕ್ಕಿ ಮುಂದೆ ಸಾಗುತ್ತಿದೆ ಎಂದು ಮಾಹಿತಿ ಒದಗಿಸಿದರು.
ಭಾರತದಲ್ಲಿ ಕಳೆದ ವರ್ಷ ಆ್ಯಪಲ್ ಫೋನ್ ಉತ್ಪಾದನೆಯಲ್ಲಿ ಗಣನೀಯ ಏರಿಕೆ ದಾಖಲಾಗಿದೆ. ಕಳೆದ ಬಂಭತ್ತುವರೆ ವರ್ಷದಲ್ಲಿ ನಾವು ಎಲೆಕ್ಟ್ರಾನಿಕ್ ಸರಕುಗಳ ರಫ್ತಿನ ಪ್ರಮುಖ ತಾಣವಾಗಿ ಹೊರಹೊಮ್ಮಿದ್ದೇವೆ. ಅಲ್ಲದೇ ಸೆಮಿಕಂಡಕ್ಟರ್ ವಲಯದಲ್ಲೂ ಗಮನಾರ್ಹ ಪ್ರಗತಿ ಕಾಣುತ್ತಿದ್ದೇವೆ. ಗೂಗಲ್ ಕೂಡ ತಮ್ಮ ಪಿಕ್ಸೆಲ್ ಸ್ಮಾರ್ಟ್ಫೋನ್ ಅನ್ನು ಇಲ್ಲಿಯೇ ಉತ್ಪಾದಿಸಲು ಆರಂಭಿಸುವುದಾಗಿ ತಿಳಿಸಿದೆ. ಇದು ಜಾಗತಿಕ ಉತ್ಪಾದನಾ ಹಬ್ ಆಗುವ ಭಾರತದ ಕನಸಿಗೆ ಸಾಕ್ಷಿ ಎಂದು ಸಂತಸ ವ್ಯಕ್ತಪಡಿಸಿದರು.
ಮೊಬೈಲ್ ರಫ್ತಿನಲ್ಲೂ ಮುಂದು: ಪ್ರಸ್ತುತ ಆರ್ಥಿಕ ವರ್ಷದ 7 ತಿಂಗಳಲ್ಲಿ ಮೊಬೈಲ್ ರಫ್ತು ವಹಿವಾಟು 8 ಬಿಲಿಯನ್ ಡಾಲರ್ ತಲುಪಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಕೆ ಮಾಡಿದಾಗ 4.97 ಬಿಲಿಯನ್ ಹೆಚ್ಚಿದ್ದು ಸರಾಸರಿ 1 ಬಿಲಿಯನ್ಗೂ ಹೆಚ್ಚಿನ ಮೊಬೈಲ್ ಈ ತಿಂಗಳಲ್ಲಿ ರಫ್ತಾಗಿದೆ ಎಂದು ಇತ್ತೀಚಿಗೆ ಸಚಿವರು ತಿಳಿಸಿದ್ದರು.
ಈ ವರ್ಷಾರಂಭದಲ್ಲಿ ಮಾತನಾಡಿದ್ದ ಅಶ್ವಿನ್ ವೈಷ್ಣವ್, ಭಾರತದಲ್ಲಿನ ಟೆಲಿಕಾಂ ಉದ್ಯಮ ಬಂಡವಾಳ ಆಧಾರಿತವಾಗುತ್ತಿದೆ. ಇದರಿಂದ ಹೆಚ್ಚೆಚ್ಚು ಉದ್ಯೋಗ ಸೃಷ್ಟಿಯಾಗುತ್ತಿದೆ. 2022-23ರ ಆರ್ಥಿಕ ವರ್ಷದಲ್ಲಿ ಮೊಬೈಲ್ ರಫ್ತಿನ ಮಾರುಕಟ್ಟೆ 10 ಬಿಲಿಯನ್ ಅಮೆಕನ್ ಡಾಲರ್ ತಲುಪಲಿದೆ ಎಂದಿದ್ದರು. (ಐಎಎನ್ಎಸ್)
ಇದನ್ನೂ ಓದಿ: ಮೋದಿ ಸರ್ಕಾರ ಬಂದ ಮೇಲೆ ರೈಲ್ವೆ ಅಭಿವೃದ್ಧಿಗೆ ಹೆಚ್ಚಿನ ಒತ್ತು: ಸಚಿವ ಅಶ್ವಿನಿ ವೈಷ್ಣವ್