ನವದೆಹಲಿ : ಗೂಗಲ್ ಆಂಡ್ರಾಯ್ಡ್ನಲ್ಲಿ ಜಿಮೇಲ್ಗೆ "Select all" ಬಟನ್ ಅನ್ನು ಸೇರಿಸುತ್ತಿದೆ. ಈ Select all ಬಟನ್ ಅನ್ನು ಬಹಳ ಕಾಲದಿಂದ ನಿರೀಕ್ಷಿಸಲಾಗುತ್ತಿತ್ತು. ಸದ್ಯ ಕೊನೆಗೂ ಈ ಆಪ್ಷನ್ ಜಿಮೇಲ್ನಲ್ಲಿ ಲಭ್ಯವಾಗಿದೆ. ಈ Select all ಆಪ್ಷನ್ ಮೂಲಕ ಇನ್ಬಾಕ್ಸ್ನಲ್ಲಿರುವ 50 ಮೇಲ್ಗಳನ್ನು ಒಂದೇ ಬಾರಿಗೆ ಸೆಲೆಕ್ಟ್ ಮಾಡಬಹುದಾಗಿದ್ದು, ಆ ಎಲ್ಲವನ್ನೂ ಒಮ್ಮೆಲೇ ಡಿಲೀಟ್ ಮಾಡಬಹುದು.
ಈ ಆಪ್ಷನ್ ಕಳೆದ ಹಲವಾರು ವರ್ಷಗಳಿಂದ ವೆಬ್ ವರ್ಷನ್ನಲ್ಲಿ ಲಭ್ಯವಿದೆ. ಆದರೆ ಆಂಡ್ರಾಯ್ಡ್ನಲ್ಲಿ ಇರಲಿಲ್ಲ. ಆಂಡ್ರಾಯ್ಡ್ ಡಿವೈಸ್ ಮೂಲಕ ಜಿಮೇಲ್ಗಳನ್ನು ಡಿಲೀಟ್ ಮಾಡಬೇಕಾದರೆ ಒಂದೊಂದೇ ಮೇಲ್ಗಳನ್ನು ಸೆಲೆಕ್ಟ್ ಮಾಡಬೇಕಿತ್ತು. ಇದು ತುಂಬಾ ಸಮಯ ಹಿಡಿಯುವ ಕೆಲಸವಾಗಿತ್ತು. ಸದ್ಯ 50 ಜಿಮೇಲ್ಗಳನ್ನು ಒಮ್ಮೆಲೇ ಸೆಲೆಕ್ಟ್ ಮಾಡುವ ಆಪ್ಷನ್ ಲಭ್ಯವಾಗುತ್ತಿರುವುದು ಬಳಕೆದಾರರಿಗೆ ಅನುಕೂಲವಾಗಲಿದೆ. ಇದು ಗೂಗಲ್ನ ಸರ್ವರ್ ಸೈಡ್ ಬದಲಾವಣೆಯಾಗಿರುವುದರಿಂದ ಬಳಕೆದಾರರಿಗೆ ತಲುಪಲು ಕೆಲ ಸಮಯ ಹಿಡಿಯಬಹುದು.
ಜಿಮೇಲ್ ಖಾತೆ ಫುಲ್ ಆದಾಗ ಅದರಲ್ಲಿನ ಮೇಲ್ಗಳನ್ನು ಡಿಲೀಟ್ ಮಾಡುವುದು ಅನಿವಾರ್ಯ. ಇಲ್ಲದಿದ್ದರೆ ನಿಮಗೆ ಹೊಸ ಮೇಲ್ಗಳು ಬರುವುದಿಲ್ಲ. ಇಂಥ ಸಂದರ್ಭದಲ್ಲಿ ಅನೇಕ ಬಾರಿ ಮೊಬೈಲ್ ಮೂಲಕವೇ ಮೇಲ್ಗಳನ್ನು ಡಿಲೀಟ್ ಮಾಡಬೇಕಾಗುತ್ತದೆ. ಆದರೆ ಹೀಗೆ ಮಾಡುವಾಗ ಒಂದೊಂದೇ ಮೇಲ್ ಅನ್ನು ಪ್ರತ್ಯೇಕವಾಗಿ ಸೆಲೆಕ್ಟ್ ಮಾಡಬೇಕಿತ್ತು. ಈಗ ಹೊಸ ವೈಶಿಷ್ಟ್ಯ ಜಾರಿಯಾದ ನಂತರ ನೀವು ಒಮ್ಮೆಲೇ 50 ಮೇಲ್ಗಳನ್ನು ಸೆಲೆಕ್ಟ್ ಮಾಡಿಕೊಂಡು ಏಕಕಾಲಕ್ಕೆ ಅವನ್ನು ಡಿಲೀಟ್ ಮಾಡಬಹುದು.
ಏತನ್ಮಧ್ಯೆ, ಗೂಗಲ್ ತನ್ನ ಎಐ ಚಾಲಿತ ಕೋಡಿಂಗ್ ಅಸಿಸ್ಟೆಂಟ್ ಸ್ಟುಡಿಯೋ ಬಾಟ್ ಅನ್ನು ಭಾರತ ಸೇರಿದಂತೆ ಮತ್ತಷ್ಟು ದೇಶಗಳಲ್ಲಿ ಜಾರಿಗೊಳಿಸಿದೆ. ಈ ವರ್ಷದ ಮೇ ತಿಂಗಳಲ್ಲಿ ಯುಎಸ್ ನ ಆಂಡ್ರಾಯ್ಡ್ ಡೆವಲಪರ್ ಗಳಿಗಾಗಿ ಪ್ರಥಮ ಬಾರಿಗೆ ಸ್ಟುಡಿಯೋ ಬಾಟ್ ಪರಿಚಯಿಸಲಾಗಿತ್ತು. "ಸ್ಟುಡಿಯೋ ಬಾಟ್ ಇಂಗ್ಲಿಷ್ ಭಾಷೆಯಲ್ಲಿ 170 ಕ್ಕೂ ಹೆಚ್ಚು ದೇಶಗಳು ಮತ್ತು ಪ್ರದೇಶಗಳಲ್ಲಿ ಲಭ್ಯವಿದೆ." ಎಂದು ಕಂಪನಿ ನವೀಕರಣದಲ್ಲಿ ತಿಳಿಸಿದೆ. ಸ್ಟುಡಿಯೋ ಬಾಟ್ ಕೋಡ್ ಅನ್ನು ರಚಿಸುವ, ದೋಷಗಳನ್ನು ಸರಿಪಡಿಸುವ ಮೂಲಕ ಮತ್ತು ಆಂಡ್ರಾಯ್ಡ್ ಬಗ್ಗೆ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಅಪ್ಲಿಕೇಶನ್ಗಳನ್ನು ನಿರ್ಮಿಸಲು ಡೆವಲಪರ್ಗಳಿಗೆ ಸಹಾಯ ಮಾಡುತ್ತದೆ.
ಗೂಗಲ್ ಮಂಗಳವಾರ ತನ್ನ ಜನರೇಟಿವ್ ಎಐ ಚಾಟ್ಬಾಟ್ ಬಾರ್ಡ್ನಲ್ಲಿ ಹೊಸ ವೈಶಿಷ್ಟ್ಯಗಳನ್ನು ಘೋಷಿಸಿದೆ. ಸೂಕ್ತವಾದ ಪ್ರತಿಕ್ರಿಯೆ ರಚಿಸುವುದು, ಬಾರ್ಡ್ ಎಕ್ಸ್ಟೆನ್ಸಷನ್ಗಳು ಮತ್ತು ಸುಧಾರಿತ ಗೂಗಲ್ ಇಟ್ ಬಟನ್ ಹೊಸ ವೈಶಿಷ್ಟ್ಯಗಳಾಗಿವೆ. ಇವೆಲ್ಲವನ್ನು ಗೂಗಲ್ ಅಪ್ಲಿಕೇಶನ್ಗಳು ಮತ್ತು ಸೇವೆಗಳೊಂದಿಗೆ ಬಾರ್ಡ್ನ ಏಕೀಕರಣವನ್ನು ಸುಧಾರಿಸಲು ವಿನ್ಯಾಸಗೊಳಿಸಲಾಗಿದೆ.
ಇದನ್ನೂ ಓದಿ : ಇವಿಎಂ ಸೋರ್ಸ್ ಕೋಡ್ ಆಡಿಟ್ ಕೋರಿದ್ದ ಪಿಐಎಲ್ ವಜಾ