ನವದೆಹಲಿ : ಬ್ರಿಟನ್ ಮತ್ತು ಅಮೆರಿಕದ ನಂತರ ಈಗ ಗೂಗಲ್ ತನ್ನ ಎಐ ಚಾಟ್ ಬಾಟ್ 'ಬಾರ್ಡ್' ಅನ್ನು ಭಾರತ ಸೇರಿದಂತೆ 180 ದೇಶಗಳಲ್ಲಿ ಚಾಲನೆಗೊಳಿಸಿದೆ. ಇದು ಮಾತ್ರವಲ್ಲದೆ ವಿಶ್ವದ ಉಳಿದ ದೇಶಗಳಲ್ಲಿ ಶೀಘ್ರವೇ ಬಾರ್ಡ್ ಬಳಕೆದಾರರಿಗೆ ಸಿಗಲಿದೆ ಎಂದು ಗೂಗಲ್ ಹೇಳಿದೆ. ಇಂಗ್ಲಿಷ್ ಹೊರತುಪಡಿಸಿ, ಬಾರ್ಡ್ ಈಗ ಜಪಾನೀಸ್ ಮತ್ತು ಕೊರಿಯನ್ ಭಾಷೆಗಳಲ್ಲಿ ಲಭ್ಯವಿದೆ ಮತ್ತು ಶೀಘ್ರದಲ್ಲೇ 40 ಭಾಷೆಗಳನ್ನು ಬೆಂಬಲಿಸುವ ಹಾದಿಯಲ್ಲಿದೆ ಎಂದು ಕಂಪನಿ ಹೇಳಿದೆ.
ಬಾರ್ಡ್ ತನ್ನ ಪ್ರತಿಕ್ರಿಯೆಗಳು ಮತ್ತು ಬಳಕೆದಾರರ ಪ್ರಾಂಪ್ಟ್ ಈ ಎರಡೂ ವಿಷಯಗಳಲ್ಲಿ ಹೆಚ್ಚು ವಿಸಿಬಲ್ ಆಗಲಿದೆ ಎಂದು ಗೂಗಲ್ ಹೇಳಿದೆ. ಇದಕ್ಕಾಗಿ ಕಂಪನಿಯು ಗೂಗಲ್ ಲೆನ್ಸ್ ಅನ್ನು ಬಾರ್ಡ್‌ಗೆ ಅಳವಡಿಸಲಿದೆ. ಉದಾಹರಣೆಗೆ ನೋಡುವುದಾದರೆ- ನಿಮ್ಮ ನಾಯಿಗಳ ಫೋಟೋವನ್ನು ಬಳಸಿಕೊಂಡು ನೀವು ಸ್ವಲ್ಪ ಮೋಜು ಮಾಡಲು ಬಯಸುವಿರಿ ಎಂದುಕೊಳ್ಳೋಣ.
ಆಗ ನೀವು ನಾಯಿಯ ಫೋಟೊವನ್ನು ಬಾರ್ಡ್‌ಗೆ ಅಪ್‌ಲೋಡ್ ಮಾಡಬಹುದು ಮತ್ತು ಎರಡೂ ನಾಯಿಗಳ ಬಗ್ಗೆ ಒಂದು ತಮಾಷೆಯ ಕ್ಯಾಪ್ಷನ್ ಬರೆದುಕೊಡು ಎಂದು ಹೇಳಬಹುದು. ಆಗ ಗೂಗಲ್ ಲೆನ್ಸ್ ಬಳಸಿ ಬಾರ್ಡ್ ಫೋಟೋವನ್ನು ವಿಶ್ಲೇಷಿಸುತ್ತದೆ, ನಾಯಿಗಳ ತಳಿಗಳನ್ನು ಪತ್ತೆ ಮಾಡುತ್ತದೆ ಮತ್ತು ಕೆಲವು ಸೃಜನಾತ್ಮಕ ಶೀರ್ಷಿಕೆಗಳನ್ನು ರಚಿಸಿ ನಿಮ್ಮ ಮುಂದೆ ಇಡುತ್ತದೆ,. ಇದೆಲ್ಲವೂ ಕೆಲವೇ ಸೆಕೆಂಡುಗಳಲ್ಲಿ ಆಗುವುದು ಅದ್ಭುತ ಎಂದು ಗೂಗಲ್ ಬುಧವಾರ ಬ್ಲಾಗ್‌ಪೋಸ್ಟ್‌ನಲ್ಲಿ ಹೇಳಿದೆ.
ಇದಲ್ಲದೆ, ಬಳಕೆದಾರರು ತಾವು ಈಗಾಗಲೇ ಬಳಸುತ್ತಿರುವ ಗೂಗಲ್ ಆ್ಯಪ್ಗಳಾದ ಡಾಕ್ಸ್, ಡ್ರೈವ್, ಜಿಮೇಲ್, ಮ್ಯಾಪ್ಸ್ ಮತ್ತು ಇನ್ನಿತರೆ ಗೂಗಲ್ ಅಪ್ಲಿಕೇಶನ್‌ಗಳು ಮತ್ತು ಸೇವೆಗಳ ಸಾಮರ್ಥ್ಯಗಳನ್ನು ಬಾರ್ಡ್ ಒಳಗಡೆ ಸಂಯೋಜಿಸುವ ಮೂಲಕ ಬಳಕೆದಾರರ ಕಲ್ಪನೆ ಮತ್ತು ಕುತೂಹಲವನ್ನು ಹೆಚ್ಚಿಸುವ ಹೊಸ ಮಾರ್ಗಗಳನ್ನು ಪರಿಚಯಿಸುವುದಾಗಿ ಕಂಪನಿ ಹೇಳಿದೆ.
ಮುಂಬರುವ ತಿಂಗಳುಗಳಲ್ಲಿ ಅಡೋಬ್ ಫೈರ್‌ಫ್ಲೈ ಅನ್ನು ಗೂಗಲ್ ಬಾರ್ಡ್‌ಗೆ ಸಂಯೋಜಿಸಲಿದೆ. ಇದರಿಂದ ಬಳಕೆದಾರರು ಸುಲಭವಾಗಿ ಮತ್ತು ತ್ವರಿತವಾಗಿ ತಮ್ಮದೇ ಆದ ಸೃಜನಶೀಲ ಕಲ್ಪನೆಗಳನ್ನು ಉತ್ತಮ ಗುಣಮಟ್ಟದ ಚಿತ್ರಗಳಾಗಿ ಪರಿವರ್ತಿಸಬಹುದು. ನಂತರ ಆ ಚಿತ್ರಗಳನ್ನು ಬೇಕಾದಂತೆ ಎಡಿಟ್ ಮಾಡಬಹುದು ಅಥವಾ ಅಡೋಬ್ ಎಕ್ಸ್ಪ್ರೆಸ್ನಲ್ಲಿನ ತಮ್ಮ ಚಿತ್ರಗಳ ಸಂಗ್ರಹಕ್ಕೆ ಸೇರಿಸಬಹುದು.
ಬಾರ್ಡ್ ಎಂಬುದು ಗೂಗಲ್ನ ಪ್ರಾಯೋಗಿಕ, ಸಂವಾದಾತ್ಮಕ, AI ಚಾಟ್ ಸಾಧನವಾಗಿದೆ. ಇದನ್ನು ChatGPT ಯಂತೆಯೇ ಕಾರ್ಯನಿರ್ವಹಿಸಲು ತಯಾರಿಸಲಾಗಿದೆ. ಬಾರ್ಡ್ ತನಗೆ ಬೇಕಾದ ಮಾಹಿತಿಯನ್ನು ನೇರವಾಗಿ ಇಂಟರ್ನೆಟ್ನಿಂದ ಹುಡುಕಾಡಿ ಸೆಳೆದುಕೊಳ್ಳುತ್ತದೆ ಎಂಬುದು ಚಾಟ್ಜಿಪಿಟಿಗೂ ಮತ್ತು ಬಾರ್ಡ್ಗೂ ಇರುವ ಪ್ರಮುಖ ವ್ಯತ್ಯಾಸವಾಗಿದೆ. ಹೆಚ್ಚಿನ AI ಚಾಟ್‌ಬಾಟ್‌ಗಳಂತೆ ಬಾರ್ಡ್ ಕೋಡ್ ಬರೆಯಬಲ್ಲದು, ಗಣಿತದ ಸಮಸ್ಯೆಗಳಿಗೆ ಉತ್ತರಿಸಬಹುದು ಮತ್ತು ನಿಮ್ಮ ಬರವಣಿಗೆ ಅಗತ್ಯಗಳಿಗೆ ಸಹಾಯ ಮಾಡಬಹುದು.
ಬಾರ್ಡ್ ಅನ್ನು ಫೆಬ್ರವರಿ 6 ರಂದು ಗೂಗಲ್ ಮತ್ತು ಆಲ್ಫಾಬೆಟ್ ಸಿಇಒ ಸುಂದರ್ ಪಿಚೈ ಮೊದಲ ಬಾರಿಗೆ ಅನಾವರಣಗೊಳಿಸಿದ್ದರು. ಬಾರ್ಡ್ ಸಂಪೂರ್ಣವಾಗಿ ಹೊಸ ಪರಿಕಲ್ಪನೆಯಾಗಿದ್ದರೂ, ಪ್ರಾರಂಭದಲ್ಲಿ, AI ಚಾಟ್ ಸೇವೆಯು Google ನ ಲ್ಯಾಂಗ್ವೇಜ್ ಮಾಡೆಲ್ ಫಾರ್ ಡೈಲಾಗ್ ಅಪ್ಲಿಕೇಷನ್ಸ್ (LaMDA) ನಿಂದ ಚಾಲನೆಗೊಳಿಸಲ್ಪಟ್ಟಿದೆ. ಇದನ್ನು ಎರಡು ವರ್ಷಗಳ ಹಿಂದೆ ಅನಾವರಣಗೊಳಿಸಲಾಯಿತು.
ಇದನ್ನೂ ಓದಿ : ಗುಪ್ತವಾಗಿ ಮೈಕ್ರೊಫೋನ್ ಡೇಟಾ ಕದಿಯುತ್ತಿದೆಯಾ ವಾಟ್ಸ್ಆ್ಯಪ್? ತನಿಖೆ ನಡೆಸುತ್ತೇವೆ ಎಂದ ಕೇಂದ್ರ