ಬೆಂಗಳೂರು: ಅಲ್ಫಾಬೆಟ್ನ ಗೂಗಲ್ ಜೆಮಿನಿ ಹೆಸರಿನ ಹೊಸ ಸಂಭಾಷಣಾತ್ಮಕ ಎಐ ಸಾಫ್ಟವೇರ್ ತಯಾರಿಸಿದ್ದು, ಸದ್ಯ ಇದನ್ನು ಪರೀಕ್ಷಿಸಲು ಆಯ್ದ ಕೆಲ ಕಂಪನಿಗಳಿಗೆ ಬಳಸಲು ನೀಡಲಾಗಿದೆ ಎಂದು ವರದಿಯಾಗಿದೆ. ಇದನ್ನು ಪ್ರಮುಖವಾಗಿ ಓಪನ್ಎಐ ನ ಚಾಟ್ ಜಿಪಿಟಿ -4 ಎಐ ಸಾಫ್ಟವೇರ್ಗೆ ಪೈಪೋಟಿ ನೀಡಲೆಂದೇ ತಯಾರಿಸಲಾಗಿದೆ. ಜನರೇಟಿವ್ ಎಐ ಸಾಫ್ಟವೇರ್ಗಳನ್ನು ತಯಾರಿಸಲು ಗೂಗಲ್ ಈ ವರ್ಷ ಗಣನೀಯ ಹೂಡಿಕೆ ಮಾಡಿದ್ದು, ಜೆಮಿನಿಯ ಬಿಡುಗಡೆ ಬಹಳ ಪ್ರಾಮುಖ್ಯತೆ ಪಡೆದಿದೆ.
ಕಳೆದ ವರ್ಷ ಲಾಂಚ್ ಆದಾಗ ಓಪನ್ ಎಐನ ಚಾಟ್ ಜಿಪಿಟಿ ಇಡೀ ವಿಶ್ವದ ಗಮನವನ್ನು ತನ್ನತ್ತ ಸೆಳೆದಿತ್ತು. ಈಗ ಅದೇ ಮಾದರಿಯಲ್ಲಿ ಗೂಗಲ್ ತನ್ನ ಹೊಸ ಜೆಮಿನಿ ಸಾಫ್ಟವೇರ್ ಅನ್ನು ಜಗತ್ತಿಗೆ ಪರಿಚಯಿಸಲು ನೋಡುತ್ತಿದೆ. ಜೆಮಿನಿ ಇದು ಚಾಟ್ಬಾಟ್ಗಳಿಂದ ಹಿಡಿದು ಮೂಲ ಪಠ್ಯವನ್ನು ಸಂಕ್ಷಿಪ್ತಗೊಳಿಸುವ ಅಥವಾ ಉತ್ಪಾದಿಸುವ ವೈಶಿಷ್ಟ್ಯಗಳವರೆಗೆ ವಿವಿಧ ಅಪ್ಲಿಕೇಶನ್ಗಳಿಗೆ ಕೆಲಸ ಮಾಡುವ ದೊಡ್ಡ ಭಾಷಾ ಮಾದರಿಗಳನ್ನು ಒಳಗೊಂಡಿದೆ.
ಇಮೇಲ್ಗಳನ್ನು ರಚಿಸುವುದರಿಂದ ಹಿಡಿದು ಸಂಗೀತ ಸಾಹಿತ್ಯ ಅಥವಾ ಸುದ್ದಿ ಲೇಖನಗಳನ್ನು ರಚಿಸುವ ಅಪ್ಲಿಕೇಶನ್ಗಳನ್ನು ಜೆಮಿನಿ ಹೊಂದಿರಲಿದೆ. ಇದಲ್ಲದೆ, ಜೆಮಿನಿ ಸಾಫ್ಟವೇರ್ ಎಂಜಿನಿಯರುಗಳಿಗೆ ಕೋಡ್ ಬರೆಯಲು ಮತ್ತು ಬಳಕೆದಾರರ ವಿನಂತಿಗಳ ಆಧಾರದ ಮೇಲೆ ಅನನ್ಯ ಚಿತ್ರಗಳನ್ನು ರಚಿಸಲು ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಗೂಗಲ್ ತನ್ನ ಕ್ಲೌಡ್ ವರ್ಟೆಕ್ಸ್ ಎಐ ಸೇವೆಯ ಮೂಲಕ ಕಂಪನಿಗಳಿಗೆ ಜೆಮಿನಿಯನ್ನು ನೀಡಲು ಉದ್ದೇಶಿಸಿದೆ. ಆದರೆ ಈ ಬಗ್ಗೆ ಗೂಗಲ್ ಈವರೆಗೂ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.
ಕಳೆದ ತಿಂಗಳು, ಗೂಗಲ್ ತನ್ನ ಭಾರತ ಮತ್ತು ಜಪಾನ್ ಬಳಕೆದಾರರಿಗಾಗಿ ಸರ್ಚ್ ಟೂಲ್ನಲ್ಲಿ ಜನರೇಟಿವ್ ಎಐ ಅನ್ನು ಅಳವಡಿಸಿದೆ. ಈ ವೈಶಿಷ್ಟ್ಯವು ಸಾರಾಂಶಗಳನ್ನು ಒಳಗೊಂಡಂತೆ ಪ್ರಾಂಪ್ಟ್ ಗಳಿಗೆ ಪ್ರತಿಕ್ರಿಯೆಯಾಗಿ ಪಠ್ಯ ಅಥವಾ ದೃಶ್ಯ ಫಲಿತಾಂಶಗಳನ್ನು ಒದಗಿಸುತ್ತದೆ. ಹೆಚ್ಚುವರಿಯಾಗಿ, ಗೂಗಲ್ ತನ್ನ ಎಐ-ಚಾಲಿತ ಸಾಧನಗಳನ್ನು ಬಳಸಲು ಎಂಟರ್ಪ್ರೈಸ್ ಗ್ರಾಹಕರಿಗೆ ಪ್ರತಿ ಬಳಕೆದಾರರಿಗೆ ಮಾಸಿಕ $ 30 ದರ ನಿಗದಿ ಪಡಿಸಿದೆ.
ಇದಲ್ಲದೆ, ಕಂಪನಿಯು ಇತ್ತೀಚೆಗೆ ಡಿಜಿಟಲ್ ಫ್ಯೂಚರ್ಸ್ ಹೆಸರಿನ ಹೊಸ ಪ್ರಾಜೆಕ್ಟ್ ಒಂದನ್ನು ಸಹ ಪರಿಚಯಿಸಿದೆ. ಇದು ಕೃತಕ ಬುದ್ಧಿಮತ್ತೆ (ಎಐ)ಯಿಂದ ಸೃಷ್ಟಿಯಾಗಿರುವ ಅವಕಾಶಗಳು ಮತ್ತು ಸವಾಲುಗಳನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಲು ಮತ್ತು ನಿಭಾಯಿಸಲು ವೈವಿಧ್ಯಮಯ ದೃಷ್ಟಿಕೋನಗಳನ್ನು ಒಟ್ಟುಗೂಡಿಸುವ ಪ್ರಯತ್ನವಾಗಿದೆ. ಈ ಉಪಕ್ರಮದ ಮೂಲಕ ಸಂಶೋಧಕರನ್ನು ಬೆಂಬಲಿಸಲು, ಸಭೆಗಳನ್ನು ಆಯೋಜಿಸಲು ಮತ್ತು ಎಐನ ಜವಾಬ್ದಾರಿಯುತ ಪ್ರಗತಿಯನ್ನು ಉತ್ತೇಜಿಸುವ ಸಾರ್ವಜನಿಕ ನೀತಿಗಳ ಬಗ್ಗೆ ಚರ್ಚೆಗಳನ್ನು ಪ್ರೋತ್ಸಾಹಿಸಲು ಗೂಗಲ್ ಯೋಜಿಸುತ್ತಿದೆ.
ಇದನ್ನೂ ಓದಿ : ಹೊಸ ಕೋವಿಡ್ ತಳಿಗೆ ಲಸಿಕೆ ತಯಾರಿಸಲು ಭಾರತ ಸಮರ್ಥ: ICMR