ನವದೆಹಲಿ : ಭಾರತದ ಪಂಚ ರಾಜ್ಯಗಳಲ್ಲಿ ಚುನಾವಣೆಯ ಸಮಯದಲ್ಲಿ ತಪ್ಪು ಮಾಹಿತಿಯ ಹರಡುವಿಕೆಯನ್ನು ತಡೆಯುವ ಪ್ರಯತ್ನದ ಭಾಗವಾಗಿ ಫೇಸ್‌ಬುಕ್ ದ್ವೇಷದ ಮಾತು ಎಂದು ಪರಿಗಣಿಸಲಾದ ವಿಷಯದ ವಿತರಣೆಯನ್ನು ಕಡಿಮೆ ಮಾಡುವುದು ಸೇರಿ ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.
ಕಂಪನಿಯ ನೀತಿಗಳನ್ನು ಇತ್ತೀಚೆಗೆ ಮತ್ತು ಪದೇಪದೆ ಉಲ್ಲಂಘಿಸಿರುವ ಖಾತೆಗಳಿಂದ ವಿಷಯದ ವಿತರಣೆಯನ್ನು ಫೇಸ್‌ಬುಕ್ ತಾತ್ಕಾಲಿಕವಾಗಿ ಕಡಿಮೆ ಮಾಡುತ್ತದೆ ಎಂದು ತನ್ನ ಬ್ಲಾಗ್‌ಪೋಸ್ಟ್‌ನಲ್ಲಿ ಸಂಸ್ಥೆ ತಿಳಿಸಿದೆ.
"ದ್ವೇಷದ ಭಾಷಣದಂತಹ ಕೆಲ ರೀತಿಯ ವಿಷಯಗಳನ್ನು ನಾವು ಗುರುತಿಸುತ್ತೇವೆ. ಅದು ಸಮಾಜದ ಶಾಂತಿಗೆ ಹಾನಿಗೆ ಕಾರಣವಾಗಬಹುದು. ಚುನಾವಣೆ ನಡೆಯುವ ರಾಜ್ಯಗಳಲ್ಲಿ ವೈರಲ್ ಆಗುವ ಮತ್ತು ಚುನಾವಣೆಗೆ ಮುಂಚಿತವಾಗಿ ಅಥವಾ ಹಿಂಸಾಚಾರ ಪ್ರಚೋದಿಸುವ ಅಪಾಯಕಾರಿ ವಿಷಯವನ್ನು ಕಡಿಮೆ ಮಾಡಲು ನಾವು ಕ್ರಮ ಕೈಗೊಳ್ಳುತ್ತೇವೆ" ಎಂದು ಫೇಸ್‌ಬುಕ್ ಹೇಳಿದೆ.
ಫೇಸ್‌ಬುಕ್ ಮತ್ತು ಅದರ ಕಂಪನಿಗಳಾದ ವಾಟ್ಸ್‌ಆ್ಯಪ್ ಮತ್ತು ಇನ್‌ಸ್ಟಾಗ್ರಾಮ್‌ಗೆ ಭಾರತ ಅತಿದೊಡ್ಡ ಮಾರುಕಟ್ಟೆಯಾಗಿದೆ. ಸರ್ಕಾರದ ಅಂಕಿ-ಅಂಶಗಳ ಪ್ರಕಾರ, ಭಾರತವು 53 ಕೋಟಿ ವಾಟ್ಸ್‌ಆ್ಯಪ್ ಬಳಕೆದಾರರನ್ನು 41 ಕೋಟಿ ಫೇಸ್‌ಬುಕ್ ಬಳಕೆದಾರರನ್ನು ಮತ್ತ 21 ಕೋಟಿ ಇನ್‌ಸ್ಟಾಗ್ರಾಮ್ ಬಳಕೆದಾರರನ್ನು ಹೊಂದಿದೆ.