ಬೆಂಗಳೂರು: ಹಿಂದೊಮ್ಮೆ ಭಾರತ ಬಾಹ್ಯಾಕಾಶ ಯಾನಕ್ಕೆ ರಾಕೆಟ್ಗಳನ್ನು ಸೈಕಲ್ ಮೇಲೆ ತಂದಾಗ ನಕ್ಕು ವ್ಯಂಗ್ಯ ಮಾಡಿದವರೆಷ್ಟೋ. ಚಂದ್ರನ ಮೇಲೆ ಅದಾಗಲೇ ಅಮೆರಿಕದ ನಾಸಾ, ರಷ್ಯಾದ ಬಾಹ್ಯಾಕಾಶ ಸಂಸ್ಥೆಯಾದ ರೋಸ್ಕೋಸ್ಮಾಸ್, ಚೀನಾ ತಮ್ಮ ನೌಕೆಗಳನ್ನು ಇಳಿಸಿ ಬೀಗುತ್ತಿದ್ದವು. ಆದರೆ, ಇವರ್ಯಾರಿಗೂ ಈಗ ಭಾರತ ಹೋದ ಜಾಗದಲ್ಲಿ ಹೆಜ್ಜೆಯೂರಲು ಸಾಧ್ಯವಾಗಿಲ್ಲ. ಚಂದ್ರನ ಅತಿ ಕ್ಲಿಷ್ಟ, ಕಷ್ಟದ ಪ್ರದೇಶವಾಗಿರುವ ದಕ್ಷಿಣಕ್ಕೆ ಇಂದು ದೇಶದ ಹೆಮ್ಮೆಯ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಇಳಿದು ಎಲ್ಲ ಅಸಾಧ್ಯಗಳನ್ನೂ ಸಾಧಿಸಿ 'ವಿಕ್ರಮ' ಮೆರೆಯಿತು.
ಇಸ್ರೋ ವಿಜ್ಞಾನಿಗಳ ಸತತ ನಾಲ್ಕು ವರ್ಷಗಳ ಶ್ರಮ ಇಂದು ಚಂದಮಾಮನನ್ನು ತಲುಪಿದೆ. ಚಂದ್ರಯಾನ-2 ವಿಫಲವಾದಾಗ ಕಣ್ಣೀರು ಸುರಿಸಿದ್ದ ಅಂದಿನ ಅಧ್ಯಕ್ಷರಾಗಿದ್ದ ಕೆ.ಶಿವನ್ ಅವರು ಇಂದು ಮನದುಂಬಿ ನಕ್ಕಿರಬೇಕು. ಸಂಜೆ 5:20 ನಿಮಿಷದಿಂದ ಆರಂಭವಾದ ಲ್ಯಾಂಡರ್ ಇಳಿಸುವ ಪ್ರಕ್ರಿಯೆಯನ್ನು ಅಷ್ಟೇ ಚಾಕಚಕ್ಯತೆ, ಕಷ್ಟದಲ್ಲೂ ಸುಲಲಿತವಾಗಿ ನಿಭಾಯಿಸಿದ ಇಸ್ರೋ ವಿಜ್ಞಾನಿಗಳನ್ನು ಜಗತ್ತೇ ಕೊಂಡಾಡುತ್ತಿದೆ.
ಇಸ್ರೋ ಚಂದ್ರೋದಯ: ಆಗಸ್ಟ್ 23, ಬಾಹ್ಯಾಕಾಶ ಚರಿತ್ರೆಯಲ್ಲಿ ಅಚ್ಚಳಿಯದೇ ಉಳಿಯುವ ದಿನ. ವಿಕ್ರಮ್ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಇಳಿದು 140 ಕೋಟಿ ಭಾರತೀಯರ ನಿರೀಕ್ಷೆ ಸಫಲವಾದ ಸುದಿನ. ವಿಶ್ವವೇ ಇಸ್ರೋದತ್ತ ಕಣ್ಣರಳಿಸಿ ನೋಡುವಂತೆ ಮಾಡಿದ ಐತಿಹಾಸಿಕ ದಿನ. ಜುಲೈ 14 ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾ ಉಡಾವಣಾ ಕೇಂದ್ರದಿಂದ ಹಾರಿಬಿಡಲಾದ ನೌಕೆ ಸತತ 41 ದಿನಗಳ ಕಾಲ ಪ್ರಯಾಣಿಸಿ ಇಂದು ಸಂಜೆ 6:04 ನಿಮಿಷಕ್ಕೆ ನಿಗದಿಯಂತೆ ಯಶಸ್ವಿಯಾಗಿ ಇಳಿಯಿತು.
ವಿಫಲವಾದ ರಷ್ಯಾ ಲೂನಾ-25: ಭಾರತಕ್ಕೂ ಮೊದಲೇ ಚಂದ್ರನ ದಕ್ಷಿಣ ಧ್ರುವದಲ್ಲಿ ಉಪಗ್ರಹ ಇಳಿಸಲು ಹೊರಟಿದ್ದ ರಷ್ಯಾ ಕೊನೆ ಕ್ಷಣದಲ್ಲಿ ವಿಫಲವಾಗಿತ್ತು. ಚಂದ್ರನಲ್ಲಿಗೆ ಹಾರಿಬಿಡಲಾಗಿದ್ದ ಲೂನಾ-25 ಬಾಹ್ಯಾಕಾಶ ನೌಕೆಯು ತಾಂತ್ರಿಕ ಸಮಸ್ಯೆಗೆ ತುತ್ತಾಗಿ ಆಗಸ್ಟ್ 21 ರಂದು ಚಂದ್ರನ ಮೇಲೆ ಅಪ್ಪಳಿಸಿ ಪತನವಾಗಿತ್ತು.
ಆಗಸ್ಟ್ 11ರಂದು ರಷ್ಯಾ ಬಾಹ್ಯಾಕಾಶ ಸಂಸ್ಥೆ ರೋಸ್ಕೋಸ್ಮಾಸ್ ಚಂದ್ರನ ಅಧ್ಯಯನಕ್ಕಾಗಿ ಲೂನಾ- 25 ರಾಕೆಟ್ ಉಡಾವಣೆ ಮಾಡಿತ್ತು. ಕೇವಲ ಹತ್ತೇ ದಿನದಲ್ಲಿ ಚಂದ್ರನ ದಕ್ಷಿಣ ಧ್ರುವ ಮುಟ್ಟುವ ಸಾಹಸ ಮಾಡಿದ್ದ ರಷ್ಯಾ ವೈಫಲ್ಯ ಕಂಡರೆ, 41 ದಿನಗಳ ಯಾನ ನಡೆಸಿದ ಭಾರತ ವಿಕ್ರಮ್ ಲ್ಯಾಂಡರ್ ಅನ್ನು ಗುರಿ ಮುಟ್ಟಿಸಿದೆ.
ವಿಶ್ವದ ಮೊದಲ ದೇಶ ಭಾರತ: ಚಂದ್ರನಲ್ಲಿಗೆ ಈಗಾಗಲೇ ಸೋವಿಯತ್ ಒಕ್ಕೂಟ (ರಷ್ಯಾ), ಅಮೆರಿಕ, ಚೀನಾ ತನ್ನ ನೌಕೆಗಳನ್ನು ಇಳಿಸಿದೆ. ಅದಾದ ಬಳಿಕ ಭಾರತ ಇದೀಗ ವಿಕ್ರಮ ಮೆರೆದಿದೆ. ಈ ಮೂಲಕ ಚಂದ್ರನ ಮೇಲೆ ನೌಕೆ ಇಳಿಸಿದ ನಾಲ್ಕನೇ ದೇಶ ಎಂಬ ಗರಿಮೆಗೆ ಪಾತ್ರವಾಗಿದೆ. ವಿಶೇಷವೆಂದರೆ ಚಂದ್ರನ ದಕ್ಷಿಣ ಧ್ರುವದಲ್ಲಿ ಉಪಗ್ರಹವೊಂದನ್ನು ಇಳಿಸಿದ ವಿಶ್ವದ ಮೊದಲ ರಾಷ್ಟ್ರವಾಗಿ ಭಾರತ ಹೊರಹೊಮ್ಮಿದೆ.
ವಿಕ್ರಮ್ ಲ್ಯಾಂಡರ್ನಲ್ಲಿರುವ ರೋವರ್ ಹೊರಬಂದ ನಂತರ ಒಂದು ಚಂದ್ರನ ದಿನದಷ್ಟು ಕಾರ್ಯನಿರ್ವಹಿಸುತ್ತದೆ. ಅಂದರೆ ಸುಮಾರು 14 ದಿನಗಳು. ಚಂದ್ರನ ಒಂದು ದಿನವು ಭೂಮಿಯ ಮೇಲೆ 14 ದಿನಗಳಿಗೆ ಸಮಾನವಾಗಿರುತ್ತದೆ.
ಇದನ್ನೂ ಓದಿ: ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್ ಇಳಿಸಿದ ಮೊದಲ ದೇಶ ಭಾರತ! ಇತಿಹಾಸ ಸೃಷ್ಟಿಸಿದ ಇಸ್ರೋ!