ಸ್ಯಾನ್ ಫ್ರಾನ್ಸಿಸ್ಕೋ : ಬೂಟ್ ಲೂಪ್ ಸಮಸ್ಯೆ ಕಾಣಿಸಿಕೊಂಡ ಕಾರಣದಿಂದ ಆಪಲ್ ಐಒಎಸ್ 17.3 ಮತ್ತು ಐಪ್ಯಾಡ್ ಒಎಸ್ 17.3 ಅಪ್ ಡೇಟ್ ಗಳ ಎರಡನೇ ಬೀಟಾಗಳನ್ನು ಎರಡೇ ಗಂಟೆಗಳಲ್ಲಿ ಡೆವಲಪರ್ ಸೆಂಟರ್ ನಿಂದ ಹಿಂತೆಗೆದುಕೊಂಡಿದೆ. ಅಂದರೆ ಆಪಲ್ ಐಒಎಸ್ 17.3 ಮತ್ತು ಐಪ್ಯಾಡ್ ಒಎಸ್ 17.3 ಈ ಎರಡನ್ನೂ ಇನ್ನು ಮುಂದೆ ಡೌನ್ ಲೋಡ್ ಮಾಡಲು ಮತ್ತು ಇನ್ಸ್ಟಾಲ್ ಮಾಡಲು ಸಾಧ್ಯವಿಲ್ಲ.
ಹೊಸ ಅಪ್ಡೇಟ್ ಇನ್ಸ್ಟಾಲ್ ಮಾಡಿದ ನಂತರ ಮೊಬೈಲ್ ಸಾಧನಗಳಲ್ಲಿ ದೋಷ ಕಾಣಿಸಿಕೊಂಡಿದೆ ಎಂದು ಹಲವಾರು ಬಳಕೆದಾರರು ದೂರು ನೀಡಿದ ಕೂಡಲೇ ಕಂಪನಿ ಹೊಸ ಬೀಟಾ ಅಪ್ಡೇಟ್ಗಳನ್ನು ಹಿಂಪಡೆಯಿತು. ಹೊಸ ಅಪ್ಡೇಟ್ ಇನ್ಸ್ಟಾಲ್ ಮಾಡಿದ ನಂತರ ತಮ್ಮ ಫೋನ್ ಬೂಟ್ ಲೂಪ್ನಲ್ಲಿ ಸಿಲುಕಿದೆ ಮತ್ತು ಪೋನ್ ಆರಂಭವಾಗುತ್ತಿಲ್ಲ ಎಂದು ಹೇಳಿದ್ದಾರೆ.
ದೋಷ ಪರಿಹರಿಸಿದ ನಂತರ ಆಪಲ್ ಬೀಟಾ ಅಪ್ಡೇಟ್ ಅನ್ನು ಮತ್ತೆ ಬಿಡುಗಡೆ ಮಾಡಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ವರದಿಗಳ ಪ್ರಕಾರ, ಐಒಎಸ್ 17.3 ಬೂಟ್ ಲೂಪ್ ದೋಷವು ಬ್ಯಾಕ್ ಟ್ಯಾಪ್ ಸೆಟ್ಟಿಂಗ್ಗೆ ಸಂಬಂಧಿಸಿದೆ.
ಏತನ್ಮಧ್ಯೆ, ಇತ್ತೀಚಿನ ಐಒಎಸ್ 17.2.1 ಆವೃತ್ತಿಗೆ ಅಪ್ಡೇಟ್ ಮಾಡಿದ ನಂತರ ತಮ್ಮ ಐಫೋನ್ಗಳಲ್ಲಿ ನೆಟ್ವರ್ಕ್ ಕನೆಕ್ಷನ್ ಸಮಸ್ಯೆ ಕಾಣಿಸಿಕೊಂಡಿದೆ ಎಂದು ಜಾಗತಿಕವಾಗಿ ಹಲವಾರು ಬಳಕೆದಾರರು ದೂರಿದ್ದಾರೆ. ಆಪಲ್ ಇತ್ತೀಚೆಗೆ ಐಒಎಸ್ 17.2.1 ಅನ್ನು ಬಿಡುಗಡೆ ಮಾಡಿತ್ತು. ಇದು ಐಫೋನ್ಗಳಿಗೆ ಯಾವುದೇ ಹೊಸ ವೈಶಿಷ್ಟ್ಯವನ್ನು ನೀಡಿರಲಿಲ್ಲ. ಆದರೆ ಕೆಲ ಸಮಯದಿಂದ ಬಳಕೆದಾರರನ್ನು ಕಾಡುತ್ತಿದ್ದ ಬ್ಯಾಟರಿ ಡ್ರೈನ್ ಸಮಸ್ಯೆಯನ್ನು ಇದು ಪರಿಹರಿಸಿತು.
ಆಪಲ್ನ ಸಪೋರ್ಟ್ ಕಮ್ಯುನಿಟಿ ವೆಬ್ಸೈಟ್ನಲ್ಲಿ ಐಫೋನ್ ಬಳಕೆದಾರರು ಐಒಎಸ್ 17.1.2 ಅನ್ನು ಇನ್ಸ್ಟಾಲ್ ಮಾಡಿದ ನಂತರ ತಮ್ಮ ಇತ್ತೀಚಿನ ತೊಂದರೆಗಳ ಬಗ್ಗೆ ಬರೆದಿದ್ದಾರೆ ಎಂದು ಫೋನ್ ಅರೆನಾ ವರದಿ ಮಾಡಿದೆ.
"ಕಳೆದ ರಾತ್ರಿ ನನ್ನ ಐಫೋನ್ ಅನ್ನು 17.2.1 ಗೆ ಅಪ್ಡೇಟ್ ಮಾಡಿದ ನಂತರ ಫೋನ್ ನೆಟ್ವರ್ಕ್ಗೆ ಕನೆಕ್ಟ್ ಆಗುತ್ತಿಲ್ಲ. ಸೆಟಿಂಗ್ಗಳನ್ನು ಸರಿ ಮಾಡಿದರೂ ಫೋನ್ ಕೆಲಸ ಮಾಡುತ್ತಿಲ್ಲ. ಹಲವು ವರ್ಷಗಳಿಂದ ಆಪಲ್ ಮತ್ತು ಐಫೋನ್ ಅನ್ನು ನಂಬಿದ್ದೆ, ಆದರೆ ಈಗ ಆ ನಂಬಿಕೆ ಕಡಿಮೆಯಾಗಿದೆ" ಎಂದು ಬಳಕೆದಾರರೊಬ್ಬರು ಆಪಲ್ನ ಸಪೋರ್ಟ್ ಕಮ್ಯುನಿಟಿ ವೆಬ್ಸೈಟ್ನಲ್ಲಿ ಬರೆದಿದ್ದಾರೆ.
ಇದನ್ನೂ ಓದಿ : 2024ರಲ್ಲಿ ಉದ್ಯೋಗ ನೇಮಕಾತಿ ಶೇ 8.3ರಷ್ಟು ಹೆಚ್ಚಳ: ಅಧ್ಯಯನ ವರದಿ