ನವದೆಹಲಿ : ಅಲೆಕ್ಸಾದಲ್ಲಿ ಸೆಲೆಬ್ರಿಟಿಗಳ ಧ್ವನಿ ಕೇಳಿಸುವುದನ್ನು ನಿಲ್ಲಿಸಲಾಗಿದೆ ಎಂದು ಅಮೆಜಾನ್ ಹೇಳಿದೆ. ಅಂದರೆ ಮೆಗಾಸ್ಟಾರ್ ಅಮಿತಾಬ್ ಬಚ್ಚನ್, ಅಮೆರಿಕನ್ ನಟ ಸ್ಯಾಮ್ಯುಯೆಲ್ ಎಲ್. ಜಾಕ್ಸನ್, ಅಮೆರಿಕದ ಮಾಜಿ ವೃತ್ತಿಪರ ಬಾಸ್ಕೆಟ್‌ಬಾಲ್ ಆಟಗಾರ ಶಾಕಿಲ್ ಓ'ನೀಲ್ ಮುಂತಾದ ಸೆಲೆಬ್ರಿಟಿಗಳ ಧ್ವನಿಗಳು ಇನ್ನು ಮುಂದೆ ಅಲೆಕ್ಸಾದಲ್ಲಿ ಖರೀದಿಸಲು ಲಭ್ಯವಿರುವುದಿಲ್ಲ. ಈ ವೈಶಿಷ್ಟ್ಯವು ಜಾಗತಿಕವಾಗಿ ಕಣ್ಮರೆಯಾಗುತ್ತಿದೆ. ಜೊತೆಗೆ ಮುಂಬರುವ ದಿನಗಳಲ್ಲಿ ಅಮೆಜಾನ್ ಅಲೆಕ್ಸಾ ಚಾಲಿತ ಸಾಧನಗಳಲ್ಲಿ ಸೆಲೆಬ್ರಿಟಿಗಳ ಧ್ವನಿಗಳು ಕೇಳಿ ಬರುವುದಿಲ್ಲ.
ಅಲೆಕ್ಸಾದಲ್ಲಿ ಬಚ್ಚನ್ ಅವರ ಧ್ವನಿಯನ್ನು ಖರೀದಿಸಲು ನೀವು ಪ್ರಯತ್ನಿಸಿದರೆ ಈ ಸಂದೇಶ ಕಾಣಿಸುತ್ತದೆ- "ಈ ಸ್ಕಿಲ್ ಇನ್ನು ಮುಂದೆ ಖರೀದಿಗೆ ಲಭ್ಯವಿಲ್ಲ. ಈ ಹಿಂದೆ ಈ ವೈಶಿಷ್ಟ್ಯವನ್ನು ಖರೀದಿಸಿದ ಗ್ರಾಹಕರು ಖರೀದಿಸಿದ ದಿನಾಂಕದಿಂದ ಒಂದು ವರ್ಷದವರೆಗೆ ಅದನ್ನು ಬಳಸಬಹುದು". ಅಲೆಕ್ಸಾದಲ್ಲಿ ಜಾಕ್ಸನ್ ಅವರ ಧ್ವನಿಯನ್ನು ಖರೀದಿಸಲು ಪ್ರಯತ್ನಿಸಿದರೆ, ಅಲೆಕ್ಸಾದಲ್ಲಿ ವ್ಯಕ್ತಿಗಳ ಧ್ವನಿಯು ಇನ್ನು ಮುಂದೆ ಖರೀದಿಗೆ ಲಭ್ಯವಿಲ್ಲ ಎಂದು ಉಲ್ಲೇಖಿಸಲಾಗಿದೆ ಮತ್ತು ಈ ಹಿಂದೆ ವೈಶಿಷ್ಟ್ಯವನ್ನು ಖರೀದಿಸಿದ ಗ್ರಾಹಕರು ಏಪ್ರಿಲ್ 30, 2023 ರವರೆಗೆ ಈ ಸ್ಕಿಲ್ ಅನ್ನು ಬಳಸುವುದನ್ನು ಮುಂದುವರಿಸಬಹುದು.
ಅಲೆಕ್ಸಾದಲ್ಲಿ ಮೊಟ್ಟ ಮೊದಲಿಗೆ ಜಾಕ್ಸನ್ ಅವರ ಧ್ವನಿಯನ್ನು ಪರಿಚಯಿಸಲಾಗಿತ್ತು ಮತ್ತು ಆ ಧ್ವನಿಯು ಬಳಕೆದಾರರಿಗೆ ಜೋಕ್ ಮತ್ತು ಕಥೆಗಳನ್ನು ಹೇಳುತ್ತಿತ್ತು ಅಥವಾ ಪ್ರಶ್ನೆಗಳಿಗೆ ಉತ್ತರಿಸುತ್ತಿತ್ತು. 2019 ರಲ್ಲಿ ಆರಂಭವಾದ ಸೆಲೆಬ್ರಿಟಿ ಧ್ವನಿ ಫೀಚರ್ ಅಮೆಜಾನ್‌ನ ನ್ಯೂರಲ್ ಟೆಕ್ಸ್ಟ್-ಟು-ಸ್ಪೀಚ್ ಮಾದರಿಯನ್ನು ಬಳಸುತ್ತದೆ. ಇದು ಯಂತ್ರ ಕಲಿಕೆಯನ್ನು ಬಳಸಿಕೊಳ್ಳುತ್ತದೆ ಮತ್ತು ವಾಸ್ತವಕ್ಕೆ ಅತಿ ನಿಕಟವಾದ ಜೀವನಶೈಲಿಯನ್ನು ಧ್ವನಿಸುವ ಉದ್ದೇಶವನ್ನು ಹೊಂದಿದೆ. ಪೂರ್ವ ದಾಖಲಿತ ಪ್ರತಿಕ್ರಿಯೆಗಳನ್ನು ಬಳಸುವುದಕ್ಕಿಂತ ಹೆಚ್ಚಾಗಿ, ಮಾದರಿಯು ಮನರಂಜನಾ ವ್ಯಕ್ತಿತ್ವಗಳೊಂದಿಗೆ ಧ್ವನಿಗಳನ್ನು ಉತ್ಪಾದಿಸುತ್ತದೆ. 2020 ರಲ್ಲಿ, ಈ ವೈಶಿಷ್ಟ್ಯವು ಭಾರತಕ್ಕೆ ಬಂದಿತು ಮತ್ತು ಬಚ್ಚನ್ ಅಲೆಕ್ಸಾಗಾಗಿ ದೇಶದಲ್ಲಿ ಮೊದಲ ಸೆಲೆಬ್ರಿಟಿ ಧ್ವನಿಯಾದರು.
ಅಲೆಕ್ಸಾ ಅಮೆಜಾನ್‌ನ ಸಂವಾದಾತ್ಮಕ ಧ್ವನಿ ಸಹಾಯಕವಾಗಿದ್ದು (ವಾಯ್ಸ್ ಅಸಿಸ್ಟಂಟ್) ಅದು ನೀವು ಬಯಸಿದ್ದನ್ನು ಮಾಡಬಹುದು. ನಿಮ್ಮ ಕ್ಯಾಲೆಂಡರ್ ಅನ್ನು ಪರಿಶೀಲಿಸಲು, ನಿಮ್ಮ ಮೆಚ್ಚಿನ ಪ್ಲೇ ಲಿಸ್ಟ್ನ ಹಾಡು ಆರಂಭಿಸಲು, ಹವಾಮಾನವನ್ನು ಪರೀಕ್ಷಿಸಲು ಅಥವಾ ನಿಮ್ಮ ಸ್ಥಳೀಯ ಕ್ರೀಡಾ ತಂಡಗಳ ಬಗ್ಗೆ ಇತ್ತೀಚಿನ ಮಾಹಿತಿ ಪಡೆಯಲು ಬಯಸುವಿರಾದರೆ ಅದೆಲ್ಲವನ್ನೂ ಅಲೆಕ್ಸಾ ಮಾಡಬಲ್ಲದು.
ಇದು ಎಕೋ ಸ್ಪೀಕರ್‌ಗಳು, ಸ್ಮಾರ್ಟ್ ಥರ್ಮೋಸ್ಟಾಟ್‌ಗಳು, ಸೌಂಡ್‌ಬಾರ್‌ಗಳು, ಲ್ಯಾಂಪ್‌ಗಳು ಮತ್ತು ಲೈಟ್‌ಗಳಲ್ಲಿ ಲಭ್ಯವಿದೆ. ನಿಮ್ಮ ಫೋನ್‌ನಲ್ಲಿ ಅಲೆಕ್ಸಾ ಅಪ್ಲಿಕೇಶನ್ ಮೂಲಕ ನೀವಿದನ್ನು ಬಳಸಬಹುದು.
ಅಲೆಕ್ಸಾವನ್ನು ನಿಮ್ಮ ಡಿಜಿಟಲ್ ಸಹಾಯಕವನ್ನಾಗಿ ಮಾಡಲು, ನಿಮಗೆ ಅಲೆಕ್ಸಾ ಸಕ್ರಿಯಗೊಳಿಸಿದ ಸಾಧನದ ಅಗತ್ಯವಿದೆ. ಅದರಲ್ಲಿ ನೀವು ನಿಮ್ಮ ವಾಯ್ಸ್ ಕಮಾಂಡ್ ನೀಡಬಹುದು. ಅಮೆಜಾನ್ ಸ್ವತಃ ತಯಾರಿಸಿದ ಎಕೋ ಸಾಧನಗಳಂಥ ಸ್ಮಾರ್ಟ್ ಸ್ಪೀಕರ್ಗಳಲ್ಲಿ ಅಲೆಕ್ಸಾವನ್ನು ಹೆಚ್ಚಾಗಿ ಜನ ಬಳಸುತ್ತಿದ್ದಾರೆ. ಆಪಲ್, ಗೂಗಲ್ ಪ್ಲೇ ಮತ್ತು ಅಮೆಜಾನ್ ಆಪ್ ಸ್ಟೋರ್‌ಗಳಲ್ಲಿ ಲಭ್ಯವಿರುವ ಕಂಪ್ಯಾನಿಯನ್ ಅಪ್ಲಿಕೇಶನ್‌ನಲ್ಲಿ ಅಲೆಕ್ಸಾವನ್ನು ಕಾನ್ಫಿಗರ್ ಮಾಡಿ, ವೈಯಕ್ತೀಕರಿಸಿ ಬಳಸಬಹುದು.
ಇದನ್ನೂ ಓದಿ : ಚಾಟ್ ಜಿಪಿಟಿ ರಚಿತ ಮಾಹಿತಿಯನ್ನು ಕೋರ್ಟ್ ಮುಂದೆ ತರಕೂಡದು: ನ್ಯಾಯಾಲಯದ ಆದೇಶ