ವಾಷಿಂಗ್ಟನ್: ಸಂಪರ್ಕ ತಂತ್ರಜ್ಞಾನ ಪ್ರತಿಯೊಂದು ಪೀಳಿಗೆಯೊಂದಿಗೆ (Generation) ತನ್ನ ನೆಟ್ವರ್ಕ್ ಬದಲಾವಣೆಯ ಮೇಲೆ ಗಮನ ಹರಿಸುತ್ತದೆ. ಅದರಂತೆ 2G ಮತ್ತು 3G ತಂತಜ್ಞಾನ ವ್ಯಕ್ತಿಯಿಂದ ವ್ಯಕ್ತಿಗೆ ಧ್ವನಿ ಮತ್ತು ಟೆಕ್ಸ್ಟ್ ಸೌಲಭ್ಯವನ್ನು ಕಲ್ಪಿಸುವಲ್ಲಿ ನೆರವಾಯಿತು. ಇನ್ನು 4G ಕಾಲ ಸಂಪೂರ್ಣವಾಗಿ ಡಾಟಾ ಬಳಕೆಗೆ ಮುಂದಾಯಿತು. ಇದೀಗ 5G ಯುಗ ನಡೆಯುತ್ತಿದ್ದು, ಇದು ಗರಿಷ್ಠ ವೇಗದ ಡೇಟಾವನ್ನು ಒದಗಿಸುತ್ತಿದೆ.
ಸದ್ಯ ಭಾರತದಲ್ಲಿ ಇದೀಗ 5G ಸೇವೆ ಬಹುತೇಕ ನಗರಗಳಲ್ಲಿ ಲಭ್ಯವಾಗಿದೆಯಾದರೂ, ದೇಶದೆಲ್ಲೆಡೆ ಪೂರ್ಣ ಪ್ರಮಾಣದಲ್ಲಿ ಇನ್ನು ಈ ಸೇವೆ ಗ್ರಾಹಕರಿಗೆ ಲಭ್ಯವಿಲ್ಲ. ಹೀಗಿರುವಾಗಲೇ ಅಮೆರಿಕ 6G ಮೇಲೆ ಕಣ್ಣಿಟ್ಟಿದ್ದು, ಈ ನೆಟ್ವರ್ಕ್ ಬಳಕೆಗೆ ಯೋಜನೆ ರೂಪಿಸುತ್ತಿದೆ. ಇದಕ್ಕೆ ಕಾರಣ ಬೀಜಿಂಗ್.
ಚೀನಾದ ಬೆಳವಣಿಗೆ: ಚೀನಾದ ಬೀಜಿಂಗ್ನಲ್ಲಿ ನೆಟ್ವರ್ಕ್ನ ಕ್ಷಿಪ್ರ ಪ್ರಗತಿ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಅಮೆರಿಕ, ಇದೀಗ 6G ಸೇವೆ ಬಳಕೆಗೆ ಯೋಜನೆ ರೂಪಿಸುತ್ತಿದೆ. ಈ ಹಿನ್ನೆಲೆ 6ಜಿ ನೆಟ್ವರ್ಕ್ಗಳ ಕಾರ್ಯತಂತ್ರ ಅಭಿವೃದ್ಧಿಗೆ ಕಾರ್ಪೋರೇಟ್ ನಾಯಕರು, ತಂತ್ರಜ್ಞಾನ ಅಧಿಕಾರಿಗಳು ಮತ್ತು ಅಕಾಡೆಮಿ ತಜ್ಞರು ಮುಂದಾಗಿದ್ದು, ಈ ಸಂಬಂಧ ಶ್ವೇತಭವನದಲ್ಲಿ ಬೆಳವಣಿಗೆ ನಡೆದಿದೆ. ಈ ಮೂಲಕ ಇಂಟರ್ನೆಟ್ ವಲಯದಲ್ಲಿ ತಮ್ಮ ನಾಯಕತ್ವ ಮರುಸ್ಥಾಪಿಸಲು ಮುಂದಾಗಿದೆ.
5ಜಿ ನೆಟ್ವರ್ಕ್ನಿಂದ ಕಲಿತ ಪಾಠಗಳನ್ನು ತೆಗೆದುಕೊಂಡು ಕಾರ್ಯಕ್ಷಮತೆ, ಪ್ರವೇಶ ಮತ್ತು ಭದ್ರತೆ ಉತ್ತಮಗೊಳಿಸುವ ಮೂಲಕ 6ಜಿ ಸೇವೆ ಅಭಿವೃದ್ಧಿಗೆ ಮುಂದಾಗಿರುವುದಾಗಿ ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ. 6ಜಿ ತಂತ್ರಜ್ಞಾನ ಇನ್ನು ಆರಂಭದಲ್ಲಿದ್ದು, ಇದು ಮುಂದಿನ ವರ್ಷಕ್ಕೆ ಸಾಮಾನ್ಯ ಜನರ ಬಳಕೆಗೆ ಸಿಗಲಿದೆ. 5ಜಿಗಿಂತ ಹೆಚ್ಚಿನ ವೇಗದ ನೆಟ್ವರ್ಕ್ ಇದು ಹೊಂದಿರಲಿದೆ. ಅಲ್ಲದೇ, ಜಾಗತಿಕವಾಗಿ ಅತಿ ವೇಗದ ಇಂಟರ್ನೆಟ್ ಸೇವೆ ವಿಸ್ತರಿಸಲಿದೆ ಎಂದು ವರದಿ ಆಗಿದೆ.
2020ರಲ್ಲಿ ಚೀನಾ 6G ಫ್ರಿಕ್ವೆನ್ಸಿ ಬ್ಯಾಂಡ್ನ ಕಾರ್ಯಕ್ಷಮತೆ ಪರಿಶೀಲಿಸಲು ಪ್ರಾಯೋಗಿಕ ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. ಚೀನಾ 5G ಬಿಡುಗಡೆ ಬಳಿಕ ದಿನಗಳಲ್ಲಿ ತಾಂತ್ರಿಕ ಲಾಭ ಪಡೆದಿತು. ಸುಧಾರಿತ ರಾಷ್ಟ್ರೀಯ ರಕ್ಷಣಾ ಗುರಿ ಮತ್ತು ಜಾಗತಿಕ ಮಾರುಕಟ್ಟೆ ಬೆಳವಣಿಗೆ ಹೆಚ್ಚಿಸಲು ತಂತ್ರಜ್ಞಾನವನ್ನು ಬಳಸಿತು. ಚೀನಾದ ಹುವಾಯಿ ಈಗಾಗಲೇ ತನ್ನದೇ ಆದ 6G ತಂತ್ರಜ್ಞಾನ ಅಭಿವೃದ್ಧಿಗೆ ತಯಾರಿ ನಡೆಸಿದೆ. 2030ರ ವೇಳೆಗೆ ಇದು ಅಲ್ಟ್ರಾ-ಫಾಸ್ಟ್ ನೆಟ್ವರ್ಕ್ ಅನ್ನು ಪರಿಚಯಿಸುವ ಭರವಸೆ ಹೊಂದಿದೆ.
ಹೇಗಿರಲಿದೆ 6G: 6G ನೆಟ್ವರ್ಕ್ 5ಜಿ ನೆಟ್‌ವರ್ಕ್‌ಗಳಿಗಿಂತ ಅನೇಕ ಪಟ್ಟು ವೇಗದಲ್ಲಿ ಕೆಲಸ ಮಾಡುತ್ತದೆ. ಜೊತೆಗೆ ಇದು ವೇಗದ ಸಂವಹನವನ್ನು ಒದಗಿಸಲು ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನಗಳನ್ನು ಬಳಸಿಕೊಳ್ಳುತ್ತದೆ. 5G ಗಿಂತ ಇದು 20 ಪಟ್ಟು ಹೆಚ್ಚಿನ ವಿಶಾಲ - ಪ್ರದೇಶ ಸಾಮರ್ಥ್ಯವನ್ನು ಹೊಂದಿರುತ್ತದೆ. 6ಜಿ ಬಳಕೆದಾರರು 1 ಸಾವಿರ ಎಂಬಿಪಿಎಸ್ಗಿಂತ ಹೆಚ್ಚಿನ ಡೇಟಾ ದರ ಹೊಂದಿರುತ್ತಾರೆ. ಇದು 5ಜಿ ಗಿಂತ 10 ಪಟ್ಟು ಹೆಚ್ಚರಲಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಅನೇಕ ದೇಶಗಳು ಈ 6Gಯತ್ತ ದೃಷ್ಟಿ ನೆಟ್ಟಿದೆ
ಇದನ್ನೂ ಓದಿ: ಉದ್ಯೋಗ ವಜಾದ ನಡುವೆಯೂ 1854 ಕೋಟಿ ರೂ ವೇತನ ಪಡೆದ ಗೂಗಲ್ ಸಿಇಒ