ನವದೆಹಲಿ: ಇತ್ತೀಚಿನ ದಿನಗಳಲ್ಲಿ ಕಂಪನಿಗಳು ಮತ್ತು ಜನತೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು (ಎಐ) ತಮ್ಮ ದೈನಂದಿನ ಕಾರ್ಯಗಳಲ್ಲಿ ಹೆಚ್ಚಾಗಿ ಅಳವಡಿಸಿಕೊಳ್ಳುತ್ತಿರುವುದರಿಂದ ನೌಕರಿ ಅಥವಾ ಉದ್ಯೋಗದ ಕಾರ್ಯವೈಖರಿಗಳು ಬದಲಾಗುವ ನಿರೀಕ್ಷೆಯಿದೆ. ಮುಂದಿನ 18 ತಿಂಗಳಲ್ಲಿ ಎಂಜಿನಿಯರಿಂಗ್, ಮಾರಾಟ ಮತ್ತು ಮಾರ್ಕೆಟಿಂಗ್ ಕ್ಷೇತ್ರಗಳು ಎಐನಿಂದ ಹೆಚ್ಚು ಪ್ರಯೋಜನ ಪಡೆಯುವ ಸಾಧ್ಯತೆಯಿದೆ ಎಂದು ಹೊಸ ವರದಿಯೊಂದು ಮಂಗಳವಾರ ತಿಳಿಸಿದೆ.
ಬೈನ್ & ಕಂಪನಿಯ ಹೊಸ ವರದಿಯ ಪ್ರಕಾರ, ಸಮೀಕ್ಷೆ ನಡೆಸಿದ 570 ಕ್ಕೂ ಹೆಚ್ಚು ಕಂಪನಿಗಳ ಕಾರ್ಯನಿರ್ವಾಹಕರ ಪೈಕಿ75 ಪ್ರತಿಶತದಷ್ಟು ಜನರು ಎಐ ಈಗಾಗಲೇ ತಮ್ಮ ನಿರೀಕ್ಷೆಗಳನ್ನು ಪೂರೈಸಿದೆ ಅಥವಾ ಮೀರಿದೆ ಎಂದು ಹೇಳಿದ್ದಾರೆ. ಉನ್ನತ ಶ್ರೇಣಿಯ ಬೆಳವಣಿಗೆ ಮತ್ತು ಗ್ರಾಹಕರನ್ನು ಹಿಡಿದಿಟ್ಟುಕೊಳ್ಳುವ ಸಾಧ್ಯತೆಗಳನ್ನು ಹೆಚ್ಚಿಸಲು ಎಐ ತಂತ್ರಜ್ಞಾನವು ಗಮನಾರ್ಹ ಅವಕಾಶಗಳನ್ನು ಸೃಷ್ಟಿಸುತ್ತಿದೆ ಎಂದು ಸಾಫ್ಟ್ವೇರ್ ದಿಗ್ಗಜರು ನಿರೀಕ್ಷಿಸಿದ್ದಾರೆ.
"ವೇಗವಾಗಿ ಬದಲಾಗುತ್ತಿರುವ ಈ ಪರಿಸರದಲ್ಲಿ ಎಐ ವಿಷಯದಲ್ಲಿ ಕಾದು ನೋಡುವ ವಿಧಾನವನ್ನು ಅಳವಡಿಸಿಕೊಳ್ಳುವ ಕಂಪನಿಗಳು ಹಿಂದೆ ಉಳಿಯುವ ಅಪಾಯವಿದೆ ಎಂದು ನಮ್ಮ ಸಂಶೋಧನೆ ತೋರಿಸುತ್ತದೆ" ಎಂದು ಬೈನ್ಸ್ ಟೆಕ್ನಾಲಜಿ ಪ್ರಾಕ್ಟೀಸ್ನ ಜಾಗತಿಕ ಮುಖ್ಯಸ್ಥ ಡೇವಿಡ್ ಕ್ರಾಫೋರ್ಡ್ ಹೇಳಿದರು. ಸುಮಾರು 89 ಪ್ರತಿಶತದಷ್ಟು ಸಾಫ್ಟ್ವೇರ್ ಕಂಪನಿಗಳು ಈಗಾಗಲೇ ತಮ್ಮ ಉತ್ಪನ್ನಗಳನ್ನು ಪ್ರತ್ಯೇಕಿಸಲು ಎಐ ಅನ್ನು ಬಳಸುತ್ತಿವೆ. ಇದು ಇತರ ಕ್ಷೇತ್ರಗಳಿಗಿಂತ ಶೇಕಡಾ 15 ರಷ್ಟು ಹೆಚ್ಚಾಗಿದೆ.
ಕಂಪನಿಗಳು ತಮ್ಮ ವ್ಯವಹಾರಗಳಿಗೆ ಎಐ ಅನ್ನು ಬಳಸಲು ಹೊಸ ಮಾರ್ಗಗಳನ್ನು ಅನ್ವೇಷಿಸುತ್ತಿರುವುದರಿಂದ ಎಐನ ಆರಂಭಿಕ ಅಳವಡಿಕೆದಾರರು ಈಗಾಗಲೇ ಫಲಿತಾಂಶಗಳಲ್ಲಿ ಮತ್ತು ಉತ್ಪಾದಕತೆಯಲ್ಲಿ ಹೆಚ್ಚಳ ಕಾಣೂತ್ತಿದ್ದಾರೆ ಎಂದು ವರದಿಯು ಕಂಡುಹಿಡಿದಿದೆ. ಕಂಪನಿಗಳ ಕಾರ್ಯಾಚರಣೆಯಲ್ಲಿ ಎಐ ತಂತ್ರಜ್ಞಾನವನ್ನು ಅಳವಡಿಸಲು ಈಗ ಕಂಪನಿಗಳಿಗೆ ಎಐ ಮತ್ತು ಎಂಎಲ್ ಕ್ಷೆತ್ರದಲ್ಲಿ ಪರಿಣತಿ ಹೊಂದಿರುವ ಎಂಜಿನಿಯರುಗಳ ಅಗತ್ಯ ಹೆಚ್ಚಾಗುತ್ತಿದೆ. ವಿಶೇಷವಾಗಿ ಎಲ್ಎಲ್ಎಂಗಳನ್ನು ನಿರ್ಮಿಸುವ ಅಥವಾ ಸಂಯೋಜಿಸುವ ಅನುಭವ ಹೊಂದಿರುವ ಎಂಜಿನಿಯರುಗಳಿಗೆ ಬೇಡಿಕೆ ಹೆಚ್ಚಾಗಿದೆ.
ವಸ್ತು ಅಥವಾ ಸೇವೆಯೊಂದನ್ನು ಗ್ರಾಹಕರಿಗೆ ತಲುಪಿಸುವ ಚಕ್ರದಲ್ಲಿ ಇನ್ನು ಮುಂದೆ ಎಐ ಬಹಳ ಮುಖ್ಯ ಪಾತ್ರ ವಹಿಸಲಿದೆ. ಎಐ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆಯ ಬಗ್ಗೆ ನೋಡುವುದಾದರೆ, ಎಐ ಇದು ತಂತ್ರಜ್ಞಾನ ಕ್ಷೇತ್ರದ ಮೇಲೆ ಗಮನಾರ್ಹ ಪರಿಣಾಮ ಬೀರಲಿದೆ ಎಂಬುದು ಬಹುತೇಕ ಹೂಡಿಕೆದಾರರ ಅಭಿಪ್ರಾಯವಾಗಿದೆ. ಹೀಗಾಗಿ ವಾಸ್ತವದಲ್ಲಿ ಎಐ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಉತ್ಸಾಹ ಹೆಚ್ಚಾಗುತ್ತಿದೆ. ಆದಾಗ್ಯೂ ಬರುವ ದಿನಗಳಲ್ಲಿ ಎಐ ಯಾವ ರೀತಿಯಲ್ಲಿ ಪರಿವರ್ತನೆ ತರಲಿದೆ ಎಂಬುದನ್ನು ಕಾದು ನೋಡಬೇಕಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.
ಇದನ್ನೂ ಓದಿ : ಯಾರಿಗೂ ಉಚಿತವಾಗಿರಲ್ಲ 'X'! ಮಸ್ಕ್ ಹೇಳಿದ್ದೇನು?