ಹೊಸದಿಲ್ಲಿ: ಭಾರತದ ಅನೇಕ ಪ್ರದೇಶಗಳಲ್ಲಿ ಅತಿ ಹೆಚ್ಚು ಪ್ರಮಾಣದ ಕೋವಿಡ್ ಪ್ರಕರಣಗಳು ವರದಿಯಾಗುತ್ತಿರುವ ಬೆನ್ನಲ್ಲೇ, ಭಾರತದಲ್ಲಿ ಕೋವಿಡ್ ಸೋಂಕು ಸಮುದಾಯ ಪ್ರಸರಣ ಹಂತ ತಲುಪಿರಬಹುದು ಎಂದು ಕೆಲ ತಜ್ಞರು ಆತಂಕ ವ್ಯಕ್ತಪಡಿಸಿದ್ದರು. ಆದರೆ ವಿಶ್ವ ಆರೋಗ್ಯ ಸಂಸ್ಥೆಯ ಪ್ರಾದೇಶಿಕ ನಿರ್ದೇಶಕಿ ಪೂನಂ ಖೇತ್ರಪಾಲ್ ಸಿಂಗ್ ಈ ವಾದವನ್ನು ಅಲ್ಲಗಳೆದಿದ್ದಾರೆ. ಸದ್ಯ ಭಾರತದಲ್ಲಿ ವರದಿಯಾಗುತ್ತಿರುವ ಕೋವಿಡ್ ಪ್ರಕರಣಗಳ ಮೂಲ ಪತ್ತೆಯಾಗುತ್ತಿರುವುದರಿಂದ ಸಮುದಾಯ ಪ್ರಸರಣ ಹಂತ ತಲುಪಿಲ್ಲ ಎಂದು ಅವರು ಹೇಳಿದ್ದಾರೆ.
ಭಾರತದಲ್ಲಿ ಕೋವಿಡ್-19 ಪರಿಸ್ಥಿತಿ, ಕೋವಿಡ್ ಹೋರಾಟದಲ್ಲಿ ಭಾರತ ಕೈಗೊಂಡ ಕ್ರಮಗಳು, ಟೆಸ್ಟಿಂಗ್ ಹಾಗೂ ಲಾಕ್ಡೌನ್ ಸೇರಿದಂತೆ ಹಲವಾರು ವಿಷಯಗಳ ಕುರಿತು ಪೂನಂ ಖೇತ್ರಪಾಲ್ ಸಿಂಗ್ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
ಪ್ರಶ್ನೆ: ಹೊಸ ವೈರಸ್ನ ನಡವಳಿಕೆ ಹಾಗೂ ಅದರ ಸ್ವರೂಪಗಳ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಕಂಡುಕೊಂಡಿರುವುದೇನು? ನೋವೆಲ್ ವೈರಸ್ ಕುರಿತು ಯಾವೆಲ್ಲ ಮಾಹಿತಿಗಳು ಬರುತ್ತಿವೆ? ಇದರ ಹರಡುವಿಕೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಉತ್ತರ: ಸದ್ಯ ಲಭ್ಯವಿರುವ ಮಾಹಿತಿಯಂತೆ ಕೊರೊನಾ ವೈರಸ್ ವ್ಯಕ್ತಿಯಿಂದ ವ್ಯಕ್ತಿಗೆ ಹರಡುತ್ತಿದೆ. ಆರಂಭಿಕ ಮಾಹಿತಿಗಳ ಪ್ರಕಾರ ಸೋಂಕು ತಗುಲಿದ ವ್ಯಕ್ತಿಗೆ ಸೋಂಕಿನ ಲಕ್ಷಣಗಳು ಕಾಣುತ್ತಿರುವ ಸಮಯದಲ್ಲಿ ಮತ್ತೊಬ್ಬರಿಗೆ ವೈರಸ್ ಹರಡುವ ಅಪಾಯ ಹೆಚ್ಚು. ಸೋಂಕಿನ ಲಕ್ಷಣಗಳು ಕಾಣಿಸುವ ಮುಂಚಿನ ಹಂತದ ಸೋಂಕು ಹರಡುವಿಕೆ ಹಾಗೂ ಆಯಾ ನಿರ್ದಿಷ್ಟ ಅವಧಿಯಲ್ಲಿ ಸೋಂಕು ಹರಡುವ ಕುರಿತಾಗಿ ತಿಳಿಯಲು ಮಾಹಿತಿ ಸಂಗ್ರಹಿಸಲಾಗುತ್ತಿದೆ.
ಲ್ಯಾಬ್ ಟೆಸ್ಟಿಂಗ್ಗಳಲ್ಲಿ ಕೊರೊನಾ ಇರುವುದು ದೃಢಪಟ್ಟಾಗಲೂ ಅಂಥ ವ್ಯಕ್ತಿಗಳಿಗೆ ಸೋಂಕಿನ ಯಾವುದೇ ಲಕ್ಷಣಗಳು ಕಾಣಿಸದ ಪ್ರಕರಣಗಳೂ ನಮ್ಮ ಮುಂದಿವೆ. ಸೋಂಕಿನ ಲಕ್ಷಣಗಳಿಲ್ಲದಿರುವಾಗಲೂ ಆ ವ್ಯಕ್ತಿಯಿಂದ ಸೋಂಕು ಹರಡುತ್ತದೆ ಎಂಬ ಕುರಿತು ಪ್ರಸ್ತುತ ನಮ್ಮ ಬಳಿ ಯಾವುದೇ ಆಧಾರಗಳಿಲ್ಲ. ಲಕ್ಷಣಗಳು ಕಾಣಿಸದಿದ್ದರೂ ಮೆರ್ಸ್ ಸೋಂಕು ಇನ್ನೊಬ್ಬರಿಗೆ ತಗುಲುತ್ತಿತ್ತು. ಆದರೆ ಕೋವಿಡ್ ವೈರಸ್ ಆ ರೀತಿ ಹರಡುವುದು ತುಂಬಾ ವಿರಳ. ಸೋಂಕಿನ ಲಕ್ಷಣಗಳಿರುವವರು ಉಸಿರು ಹೊರಬಿಟ್ಟಾಗ ಅಥವಾ ಸೀನಿದಾಗ ಬಹು ವೇಗವಾಗಿ ವೈರಸ್ ಹರಡುತ್ತದೆ. ಈ ಮುಖ್ಯ ವಿಷಯ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ಕಲೆ ಹಾಕುತ್ತಿದ್ದು, ಸತತ ನಿಗಾ ವಹಿಸಿದೆ.
ಲಭ್ಯವಾಗುತ್ತಿರುವ ಸಾಕ್ಷಿಗಳ ಪ್ರಕಾರ, ಕೋವಿಡ್-19 ಹಾಗೂ ಬಾವಲಿಗಳ ಉಪಪ್ರಭೇದವಾದ ರಿನೊಲೋಫಸ್ ಬಾವಲಿಗಳಲ್ಲಿ ಹರಡುತ್ತಿರುವ ಕೊರೊನಾವೈರಸ್ಗಳಲ್ಲಿ ಸಾಮ್ಯತೆ ಕಂಡು ಬರುತ್ತಿದೆ. ಆದಾಗ್ಯೂ ಚೀನಾದಲ್ಲಿ ಪ್ರಥಮ ಬಾರಿಗೆ ಈ ವೈರಸ್ ಮಾನವನಿಗೆ ಎಲ್ಲಿಂದ ಹರಡಿತು ಎಂಬುದನ್ನು ಈಗಲೇ ನಿಖರವಾಗಿ ಹೇಳಲಾಗುತ್ತಿಲ್ಲ.
ಒಟ್ಟಾರೆಯಾಗಿ ಯಾವುದೋ ಒಂದು ಪ್ರಾಣಿಯಿಂದ ಮಾನವನಿಗೆ ವೈರಸ್ ತಗುಲಿದೆ ಎಂಬುದನ್ನು ಮಾತ್ರ ಹೇಳಬಹುದು. ಸಾಕು ಪ್ರಾಣಿ, ವನ್ಯ ಜೀವಿ, ಮನೆಯಲ್ಲಿ ಸಾಕಿದ ವನ್ಯ ಜೀವಿ ಹೀಗೆ ಯಾವುದಾದರೂ ಆಗಿರಬಹುದು.
ಸೋಂಕು ತಗುಲಿದ ರೋಗಿಗಳಿಗೆ ಕಂಡು ಬರುವ ಲಕ್ಷಣಗಳು ಹೀಗಿವೆ: ಜ್ವರ (ಶೇ. 83-98) ಕೆಮ್ಮು (ಶೇ.68) ಮತ್ತು ಉಸಿರಾಟದ ತೊಂದರೆ (ಶೇ. 19-35). ಶೇ.40 ರಷ್ಟು ಪ್ರಕರಣಗಳಲ್ಲಿ ಸೌಮ್ಯ ಸ್ವರೂಪದ, ಶೇ.40 ರಷ್ಟು ಪ್ರಕರಣಗಳಲ್ಲಿ ಮಧ್ಯಮ ಹಾಗೂ ಶೇ.14 ರಷ್ಟು ಪ್ರಕರಣಗಳಲ್ಲಿ ತೀವ್ರತರದ ಮತ್ತು ಶೇ.5 ರಷ್ಟು ಪ್ರಕರಣಗಳಲ್ಲಿ ಅತಿ ಗಂಭೀರ ಸ್ವರೂಪದಲ್ಲಿ ಕಾಯಿಲೆ ಕಾಣಿಸಿಕೊಳ್ಳುತ್ತಿದೆ. ವಯಸ್ಸಾದವರಿಗೆ ಇದರಿಂದ ಹೆಚ್ಚಿನ ಅಪಾಯವಿದೆ. ಆದಾಗ್ಯೂ ಈ ವಿಷಯದಲ್ಲಿ ನಮ್ಮ ಅಭಿಪ್ರಾಯಗಳು ಅತಿ ವೇಗವಾಗಿ ಬದಲಾಗುತ್ತಿವೆ.
ಪ್ರಶ್ನೆ: ಕೊರೊನಾ ವೈರಸ್ ಭಿನ್ನ ಮೇಲ್ಮೈಗಳಲ್ಲಿ ಬದುಕುಳಿಯುವ ಅವಧಿಯ ಕುರಿತಾಗಿ ಹಲವಾರು ಪೋಸ್ಟ್ಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. (ಏರೋಸಾಲ್ ಮೇಲೆ 3 ತಾಸು, ತಾಮ್ರದ ಮೇಲೆ 4 ತಾಸು, ಕಟ್ಟಿಗೆಯ ಮೇಲೆ 24 ಗಂಟೆ ಮತ್ತು ಸ್ಟೀಲ್ ಹಾಗೂ ಪ್ಲಾಸ್ಟಿಕ್ ಮೇಲೆ 2 ರಿಂದ 3 ದಿನ). ಈ ಕುರಿತು ನಿಮ್ಮ ಅಭಿಪ್ರಾಯವೇನು?
ಉತ್ತರ: ಮುಖ್ಯವಾಗಿ ಸೋಂಕಿತ ವ್ಯಕ್ತಿ ಕೆಮ್ಮಿದಾಗ, ಸೀನಿದಾಗ ಅಥವಾ ಮಾತನಾಡಿದಾಗ ಹೊರಬೀಳುವ ಡ್ರಾಪ್ಲೆಟ್ಸ್ಗಳಿಂದ ಸೋಂಕು ಹರಡುತ್ತದೆ. ಇವು ತೂಕದಲ್ಲಿ ಭಾರವಾಗಿರುವುದರಿಂದ ಗಾಳಿಯಲ್ಲಿ ತೇಲಲಾರವು. ಹೀಗಾಗಿ ತಕ್ಷಣ ಕೆಳಗೆ ಬೀಳುತ್ತವೆ.
ಕೋವಿಡ್ ಸೋಂಕಿತ ವ್ಯಕ್ತಿಯಿಂದ 1 ಮೀಟರ್ ಅಂತರದೊಳಗಿದ್ದಲ್ಲಿ ಅಥವಾ ಸೋಂಕಿತ ವಸ್ತು ಮುಟ್ಟುವುದರಿಂದ ಹಾಗೂ ನಂತರ ಬಾಯಿ, ಮೂಗು ಮುಟ್ಟಿಕೊಳ್ಳುವುದರಿಂದ ನಿಮಗೆ ಸೋಂಕು ಹರಡಬಹುದು. ಹಲವಾರು ವಸ್ತುಗಳ ಮೇಲ್ಮೈಗಳಲ್ಲಿ ವೈರಸ್ ಸೋಂಕು ಇರಬಹುದು. ವೈರಸ್ ಬದುಕಬಹುದಾದ ಅವಧಿಯು ಉಷ್ಣತೆ, ತೇವಾಂಶ ಮತ್ತು ಬೆಳಕು ಮುಂತಾದ ಅಂಶಗಳನ್ನು ಆಧರಿಸಿದೆ. ಹೀಗಾಗಿ ಆಗಾಗ ಕೈತೊಳೆಯುವುದು ಹಾಗೂ ಮೇಲ್ಮೈಗಳನ್ನು ಸ್ವಚ್ಛಗೊಳಿಸುವಿಕೆಯನ್ನು ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು ಮಾಡಿದೆ.
ಪ್ರಶ್ನೆ: ಕಡಿಮೆ ಅಥವಾ ಹೆಚ್ಚು ಉಷ್ಣತಾಮಾನ ಹಾಗೂ ಕೋವಿಡ್ ವೈರಸ್ ನಡುವಿನ ಸಂಬಂಧ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಹೇಳುವುದೇನು?
ಉತ್ತರ: ಈ ವಾದಕ್ಕೆ ಇನ್ನೂ ಹೆಚ್ಚಿನ ಪುರಾವೆಗಳು ಸಿಕ್ಕಿಲ್ಲ. ಒಟ್ಟಾರೆಯಾಗಿ ಎಲ್ಲರೂ ಆಗಾಗ ಕೈತೊಳೆದು ಶುಚಿತ್ವ ಕಾಪಾಡಿಕೊಳ್ಳಬೇಕು. ವೈರಸ್ ನಿರೋಧಕದಿಂದ ವಸ್ತುಗಳ ಮೇಲ್ಮೈಗಳನ್ನು ಸ್ವಚ್ಛ ಮಾಡುತ್ತಿರಬೇಕು. ನೀವು 60 ವರ್ಷ ಮೇಲ್ಪಟ್ಟವರಾಗಿದ್ದಲ್ಲಿ ಅಥವಾ ಈಗಾಗಲೇ ಹೃದಯ ಕಾಯಿಲೆ, ಡಯಾಬಿಟೀಸ್, ಕ್ಯಾನ್ಸರ್ ಮುಂತಾದ ದೀರ್ಘಕಾಲದ ರೋಗಗಳಿಂದ ಬಳಲುತ್ತಿದ್ದರೆ ಜನಜಂಗುಳಿಯ ಪ್ರದೇಶದಲ್ಲಿ ಹೋಗಲೇಬಾರದು.
ಪ್ರಶ್ನೆ: ಕೋವಿಡ್-19 ಗೆ ನಿವಾರಣೆಗೆ ನಿಖರ ಔಷಧಿ ಕಂಡುಹಿಡಿಯಲು ಇನ್ನೂ ಎಷ್ಟು ಸಮಯ ಹಿಡಿಯಬಹುದು?
ಉತ್ತರ: ಪ್ರಸ್ತುತ ಪರಿಸ್ಥಿತಿಯಲ್ಲಿ ಕೋವಿಡ್-19 ಚಿಕಿತ್ಸೆಗೆ ನಿಖರ ಹಾಗೂ ಪರಿಣಾಮಕಾರಿ ಔಷಧಿಯನ್ನು ಕಂಡುಹಿಡಿಯಲಾಗಿಲ್ಲ. ಆದಾಗ್ಯೂ ಕೆಲ ಔಷಧಿಗಳ ಕುರಿತಾಗಿ ಜಾಗತಿಕ ಮಟ್ಟದಲ್ಲಿ ಒಗ್ಗಟ್ಟಿನ ಪ್ರಯೋಗಗಳು ನಡೆದಿವೆ. ಸದ್ಯ ಈ ಪ್ರಯೋಗದಲ್ಲಿ 74 ದೇಶಗಳು ಭಾಗವಹಿಸಿದ್ದು, 200 ರೋಗಿಗಳ ಮೇಲೆ ಸಂಶೋಧನೆ ಕೈಗೊಳ್ಳಲಾಗುತ್ತಿದೆ. ವೈರಸ್ ನಿರೋಧಕಗಳು ಹಾಗೂ ಸ್ಟೆರಾಯಿಡ್ಗಳ ಕುರಿತು ಸಂಶೋಧನೆಗಳು ಮುಂದುವರೆದಿವೆ.
ಪ್ರಶ್ನೆ: ಭಾರತದಲ್ಲಿ ಸಮುದಾಯ ಪ್ರಸರಣ ಹಂತ ಇನ್ನೂ ಬಂದಿಲ್ಲವೇ? ನಿಮ್ಮ ಅಭಿಪ್ರಾಯವೇನು?
ಉತ್ತರ: ವೈರಸ್ ಹರಡಿದ ಮೂಲ ಕಂಡು ಹಿಡಿಯಲಾಗದಿದ್ದರೆ ಮಾತ್ರ ಅದನ್ನು ಸಮುದಾಯ ಪ್ರಸರಣ ಹಂತ ಎನ್ನುತ್ತಾರೆ. ಸದ್ಯ ಭಾರತದಲ್ಲಿ ವರದಿಯಾಗುತ್ತಿರುವ ಪ್ರಕರಣಗಳ ಮೂಲ ಪತ್ತೆಯಾಗುತ್ತಿದೆ. ಭಾರತದಲ್ಲಿ ಈಗ ಹಂತ ಯಾವುದಾಗಿದೆ ಎಂಬುದರ ಬಗ್ಗೆ ಗಮನಿಸದೆ ಸೋಂಕಿತರ ಮೇಲೆ ಗಮನವಿಟ್ಟು, ಅವರ ಸಂಪರ್ಕಕ್ಕೆ ಬಂದವರನ್ನೆಲ್ಲ ಹುಡುಕಿ, ಐಸೋಲೇಟ್ ಮಾಡಬೇಕು. ಆಸ್ಪತ್ರೆಗಳನ್ನು ಸಿದ್ಧವಾಗಿರಿಸಿಕೊಳ್ಳಬೇಕು. ಆರೋಗ್ಯ ಕಾರ್ಯಕರ್ತರಿಗೆ ಸೂಕ್ತ ತರಬೇತಿ ನೀಡಬೇಕು ಹಾಗೂ ಅವರಿಗೆ ಸೋಂಕು ತಗುಲದಂತೆ ಎಚ್ಚರ ವಹಿಸಬೇಕು. ಕೋವಿಡ್ ವಿರುದ್ಧ ಹೋರಾಡಲು ಸದ್ಯ ಇದೊಂದೇ ಮಾರ್ಗವಾಗಿದೆ.
ಪ್ರಶ್ನೆ: ಭಾರತದಲ್ಲಿ ಕಡಿಮೆ ಪ್ರಮಾಣದ ಟೆಸ್ಟಿಂಗ್ ಮಾಡಲಾಗುತ್ತಿದೆಯಾ?
ಉತ್ತರ: ಕೋವಿಡ್ ಹರಡುತ್ತಿರುವ ವೇಗ ಹಾಗೂ ಅಗತ್ಯಗಳಿಗೆ ತಕ್ಕಂತೆ ಭಾರತದಲ್ಲಿ ಟೆಸ್ಟಿಂಗ್ ಕೈಗೊಳ್ಳಲಾಗುತ್ತಿದೆ.