1990ರ ಏಪ್ರಿಲ್ 24 ರಂದು ನಾಸಾ ಆಕಾಶಕ್ಕೆ ಹಾರಿಬಿಟ್ಟ ಹಬಲ್ ಟೆಲಿಸ್ಕೋಪ್ಗೆ 30 ವರ್ಷ ತುಂಬುತ್ತಿವೆ. ಕಳೆದ 30 ವರ್ಷಗಳಲ್ಲಿ ಭೂಮಿ, ಬಾಹ್ಯಾಕಾಶಗಳ ಕುರಿತು ಹಬಲ್ ನೀಡಿದ ಮಾಹಿತಿ ಅನನ್ಯ ಹಾಗೂ ಅಪೂರ್ವ. ಆಕಾಶದಲ್ಲೇ ಇದ್ದು ಭೂಮಿಯನ್ನು ಸುತ್ತುತ್ತ ಭೂಮಿಗೆ ಮಾಹಿತಿ ಕಳುಹಿಸುವ ಹಬಲ್ ಟೆಲಿಸ್ಕೋಪ್ ಯೋಜನೆಯ ಉದ್ದೇಶ ಹಾಗೂ ಅದರ ಸಾಧನೆಯ ಬಗ್ಗೆ ಕಿರುನೋಟ ಇಲ್ಲಿದೆ.
ಅಮೆರಿಕದ ಬಾಹ್ಯಾಕಾಶ ವಿಜ್ಞಾನಿ ಎಡ್ವಿನ್ ಪಿ. ಹಬಲ್ (1889-1953) ಅವರ ಹೆಸರನ್ನೇ ನಾಸಾ ತನ್ನ ಮೊದಲ ಆಕಾಶ ಆಧರಿತ ಆಪ್ಟಿಕಲ್ ಟೆಲಿಸ್ಕೋಪ್ಗೆ ಇಟ್ಟಿತ್ತು. ಬ್ರಹ್ಮಾಂಡ ಉಗಮಕ್ಕೆ ಕಾರಣವಾದ ಮಹಾಸ್ಫೋಟ (ಬಿಗ್ ಬ್ಯಾಂಗ್ ಥಿಯರಿ) ಕುರಿತಾದ ಹಲವಾರು ವಿಷಯ ತಿಳಿಯಲು ಡಾ. ಹಬಲ್ ಅವರ ಸಂಶೋಧನೆಗಳು ನೆರವಾಗಿವೆ.
1990ರ ಏಪ್ರಿಲ್ 24 ರಂದು ಡಿಸ್ಕವರಿ ಬಾಹ್ಯಾಕಾಶ ನೌಕೆಯ (STS-31) ಮೂಲಕ ಹಬಲ್ ಟೆಲಿಸ್ಕೋಪ್ ಅನ್ನು ಹಾರಿಬಿಡಲಾಗಿತ್ತು. ನಾಸಾ ಹಾಗೂ ಯುರೋಪಿಯನ್ ಸ್ಪೇಸ್ ಏಜೆನ್ಸಿಗಳ ಜಂಟಿ ಪಾಲುದಾರಿಕೆಯಲ್ಲಿ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲಾಗಿತ್ತು.
ಹಬಲ್ ಟೆಲಿಸ್ಕೋಪ್ ಗಾತ್ರ
ಉದ್ದ: 43.5 ಅಡಿ (13.2 ಮೀಟರ್)
ತೂಕ: 24,500 ಪೌಂಡ್ (11,110 ಕೆಜಿ)
ಗರಿಷ್ಠ ವ್ಯಾಸ: 14 ಅಡಿ (4.2 ಮೀಟರ್)
ಹಬಲ್ ಮಿಷನ್ ನಡೆದು ಬಂದ ದಾರಿ
ಹಾರಿಬಿಟ್ಟ ದಿನಾಂಕ: 1990ರ ಏಪ್ರಿಲ್ 24
ಕಾರ್ಯಾರಂಭ: 1990ರ ಏಪ್ರಿಲ್ 25
ಸರ್ವಿಸಿಂಗ್ ಮಿಷನ್ 1: ಡಿಸೆಂಬರ್ 1993
ಸರ್ವಿಸಿಂಗ್ ಮಿಷನ್ 2: ಫೆಬ್ರವರಿ 1997
ಸರ್ವಿಸಿಂಗ್ ಮಿಷನ್ 3ಎ: ಡಿಸೆಂಬರ್ 1999
ಸರ್ವಿಸಿಂಗ್ ಮಿಷನ್ 3ಬಿ: ಫೆಬ್ರವರಿ 2002
ಸರ್ವಿಸಿಂಗ್ ಮಿಷನ್ 4: ಮೇ 2009
ಬಾಹ್ಯಾಕಾಶ ಹಾರಾಟದ ಅಂಕಿಅಂಶಗಳು
ಕಕ್ಷೆ: ಸರಾಸರಿ ಎತ್ತರ 307 ನಾಟಿಕಲ್ ಮೈಲುಗಳು (569 ಕಿಮೀ ಅಥವಾ 353 ಮೈಲಿಗಳು), ಸಮಭಾಜಕಕ್ಕೆ 28.5 ಡಿಗ್ರಿ ಅಂತರ
ಒಂದು ಕಕ್ಷೆಯನ್ನು ಪೂರ್ಣಗೊಳಿಸುವ ಸಮಯ: 97 ನಿಮಿಷ
ವೇಗ: 17,500 ಮೈಲುಗಳು ಪ್ರತಿ ಗಂಟೆಗೆ (28,000 ಕಿಮೀ ಪ್ರತಿ ಗಂಟೆಗೆ)
ದತ್ತಾಂಶ (ಡೇಟಾ): ಪ್ರತಿವಾರ 120 ಜಿಬಿಗಳಷ್ಟು ವೈಜ್ಞಾನಿಕ ಮಾಹಿತಿಯನ್ನು ಹಬಲ್ ರವಾನಿಸುತ್ತದೆ. ಈ ಎಲ್ಲ ಮಾಹಿತಿಯನ್ನು ಮ್ಯಾಗ್ನೆಟೊ ಆಪ್ಟಿಕಲ್ ಡಿಸ್ಕ್ಗಳಲ್ಲಿ ಸಂಗ್ರಹಿಸಲಾಗುತ್ತದೆ.
ಆಪ್ಟಿಕ್ಸ್:
- ಪ್ರೈಮರಿ ಮಿರರ್ ವ್ಯಾಸ: 94.5 ಇಂಚು (2.4 ಮೀಟರ್)
- ಪ್ರೈಮರಿ ಮಿರರ್ ತೂಕ: 1,825 ಪೌಂಡ್ (828 ಕೆಜಿ)
- ಸೆಕೆಂಡರಿ ಮಿರರ್ ವ್ಯಾಸ: 12 ಇಂಚು (0.3 ಮೀಟರ್)
- ಸೆಕೆಂಡರಿ ಮಿರರ್ ತೂಕ: 27.4 ಪೌಂಡ್ (12.3 ಕೆಜಿ)
ಯೋಜನಾ ವೆಚ್ಚ
ಹಬಲ್ ಯೋಜನೆಗೆ ಒಟ್ಟು 1.5 ಬಿಲಿಯನ್ ಡಾಲರ್ ಖರ್ಚು ಮಾಡಲಾಗಿದೆ. ಆದರೂ ನಿಯಮಿತ ನಿರ್ವಹಣಾ ವೆಚ್ಚ ಹಾಗೂ ಇನ್ನಿತರ ವೆಚ್ಚಗಳು ನಡೆಯುತ್ತಲೇ ಇರುತ್ತವೆ.
ಹಬಲ್ ನೋಟದ ನಿಖರತೆ
ಅದೆಷ್ಟೋ ದೂರದ, ಅಸ್ಪಷ್ಟ ಆಕೃತಿಗಳನ್ನು ಸಹ ಹಬಲ್ ಸ್ಪಷ್ಟವಾಗಿ ನೋಡಬಲ್ಲದು. ನಿರ್ದಿಷ್ಟ ವಸ್ತುವಿನ ಮೇಲೆ ಒಂಚೂರು ಅಲುಗಾಡದಂತೆ ಒಂದು ಆರ್ಕ್ ಸೆಕೆಂಡ್ನ 1/1000 ದಷ್ಟು ಸೂಕ್ಷ್ಮತೆಯಿಂದ ಇದು ಗುರಿ ಇಡಬಲ್ಲದು. ಒಂದು ಮೈಲು ದೂರದಿಂದ ಒಂದೆಳೆ ಕೂದಲನ್ನು ಇದು ನೋಡಬಲ್ಲದು ಎಂದರೆ ಇದರ ಅಗಾಧ ಸಾಮರ್ಥ್ಯ ಅರಿವಿಗೆ ಬರುತ್ತದೆ.
ಇಂಧನ ಅಗತ್ಯತೆಗಳು
- ಇಂಧನ ಮೂಲ: ಸೂರ್ಯನ ಬೆಳಕು
- ತಂತ್ರಜ್ಞಾನ: 25 ಅಡಿ ಅಗಲದ ಎರಡು ಸೋಲಾರ್ ಪ್ಯಾನೆಲ್ಗಳು
- ಸೂರ್ಯನ ಬೆಳಕಿನಲ್ಲಿ ಶಕ್ತಿ ಉತ್ಪಾದನೆ: ಸುಮಾರು 5,500 ವ್ಯಾಟ್
- ಶಕ್ತಿಯ ಬಳಕೆ (ಸರಾಸರಿ): 2,100 ವ್ಯಾಟ್
ಶಕ್ತಿಯ ಸಂಗ್ರಹ
- ಬ್ಯಾಟರಿ: 6 ನಿಕೆಲ್ ಹೈಡ್ರೋಜನ್ ಬ್ಯಾಟರಿಗಳು
- ಸಂಗ್ರಹ ಸಾಮರ್ಥ್ಯ: 22 ಕಾರ್ ಬ್ಯಾಟರಿಗಳ ಸಮಾನ ಶಕ್ತಿ ಸಂಗ್ರಹ
ಹಬಲ್ನ ವಿಸ್ಮಯಕಾರಿ ಕಾರ್ಯಗಳು
- 1990 ರಿಂದ ಇಲ್ಲಿಯವರೆಗೆ ಹಬಲ್ 1.3 ಮಿಲಿಯನ್ಗೂ ಅಧಿಕ ಅವಲೋಕನಗಳನ್ನು ಮಾಡಿದೆ.
- ಹಬಲ್ ನೀಡಿದ ಮಾಹಿತಿ ಆಧರಿಸಿ ಖಗೋಳಶಾಸ್ತ್ರಜ್ಞರು 1500ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ. ಹೀಗಾಗಿ ಅತಿ ಹೆಚ್ಚು ವೈಜ್ಞಾನಿಕ ಮಾಹಿತಿ ಪೂರೈಸಿದ ವಿಜ್ಞಾನ ಉಪಕರಣಗಳಲ್ಲೊಂದಾಗಿ ಹಬಲ್ ಟೆಲಿಸ್ಕೋಪ್ ಗುರುತಿಸಿಕೊಂಡಿದೆ.
- ಹಬಲ್ ನಕ್ಷತ್ರ, ಗ್ರಹ ಅಥವಾ ಗ್ಯಾಲಕ್ಸಿಗಳತ್ತ ಹಬಲ್ ಪಯಣಿಸುವುದಿಲ್ಲ. ಆದರೆ 17 ಸಾವಿರ ಮೈಲುಗಳ ವೇಗದಲ್ಲಿ ಭೂಮಿಯ ಸುತ್ತ ಸುತ್ತುತ್ತಲೇ ಹಬಲ್ ಅವೆಲ್ಲದರ ಚಿತ್ರಗಳನ್ನು ಸೆರೆಹಿಡಿಯುತ್ತದೆ.
- ಹಬಲ್ಗೆ ದಿಕ್ಕು ಬದಲಾವಣೆ ಉಪಕರಣ ಅಳವಡಿಸಲಾಗಿಲ್ಲ. ಆದರೆ ನ್ಯೂಟನ್ನ ಮೂರನೇ ನಿಯಮದ ಪ್ರಕಾರ ತನ್ನ ಚಕ್ರಗಳನ್ನು ವಿರುದ್ಧ ದಿಕ್ಕಿನಲ್ಲಿ ತಿರುಗಿಸುವ ಮೂಲಕ ಕೋನ ಬದಲಾಯಿಸುತ್ತದೆ.
- ಭೂಮಿಯ ವಾತಾವರಣದ ಹೊರಗೆ ಸುತ್ತುತ್ತಿರುವ 0.05 ಆರ್ಕ್ ಸೆಕೆಂಡ್ ಅಳತೆಯ ಕಣಗಳನ್ನು ಹಬಲ್ ಗುರುತಿಸಬಲ್ಲದು. ಇದನ್ನು ಸರಳವಾಗಿ ಹೇಳಬೇಕೆಂದರೆ, ವಾಶಿಂಗ್ಟನ್ ಡಿಸಿಯಿಂದ ಟೋಕಿಯೋದಲ್ಲಿ ಹಾರಾಡುತ್ತಿರುವ ಎರಡು ಮಿಂಚು ಹುಳುಗಳನ್ನು ಹಬಲ್ ಸ್ಪಷ್ಟವಾಗಿ ಗ್ರಹಿಸಬಲ್ಲದು.
- ಭೂಮಿಯಿಂದ 13.4 ಬಿಲಿಯನ್ ಜ್ಯೋತಿರ್ಷರ್ಷಗಳಷ್ಟು ದೂರ ಕ್ರಮಿಸಿ ವಾಪಸ್ ಬಂದಿದೆ ಹಬಲ್.
ಹಬಲ್ ಟೆಲಿಸ್ಕೋಪ್ ಸಾಧನೆಗಳು
ಭೂಮಿಯ ಆಯಸ್ಸು: ಭೂಮಿಯ ಆಯಸ್ಸು 13.7 ಬಿಲಿಯನ್ ವರ್ಷಗಳೆಂದು ಲೆಕ್ಕ ಹಾಕುವುದರಲ್ಲಿ ಹಬಲ್ ಪಾತ್ರ ಪ್ರಮುಖವಾಗಿದೆ.
ಗ್ಯಾಲಕ್ಸಿಗಳ ಬಗ್ಗೆ: ಬಹುತೇಕ ಎಲ್ಲ ಗ್ಯಾಲಕ್ಸಿಗಳ ಬಳಿ ಬೃಹತ್ತಾದ ಬ್ಲ್ಯಾಕ್ ಹೋಲ್ಗಳಿವೆ ಎಂಬುದನ್ನು ಹಬಲ್ ಪತ್ತೆ ಮಾಡಿದೆ.
ಗ್ರಹಗಳ ರಚನೆ: ಗ್ರಹಗಳು ಹೇಗೆ ಹುಟ್ಟಿಕೊಂಡಿವೆ ಎಂಬುದನ್ನು ನಿಖರವಾಗಿ ಅಧ್ಯಯನ ಮಾಡಲು ಹಬಲ್ ವಿಜ್ಞಾನಿಗಳಿಗೆ ಬಹಳಷ್ಟು ಮಾಹಿತಿ ಒದಗಿಸಿದೆ.
ಪ್ಲೂಟೋ ಬಳಿಯ ಚಂದ್ರ: ಚಿಕ್ಕ ಗ್ರಹ ಪ್ಲೂಟೋ ಸುತ್ತಲೂ ನಾಲ್ಕು ಚಂದ್ರಗಳಿವೆ ಎಂದು ಹಬಲ್ ಪತ್ತೆ ಮಾಡಿದೆ.
ಕಪ್ಪು ಕುಳಿಗಳು (ಬ್ಲ್ಯಾಕ್ ಹೋಲ್): ಪ್ರತಿಯೊಂದು ಗ್ಯಾಲಕ್ಸಿಯಲ್ಲಿಯೂ ಅತಿ ಬೃಹತ್ತಾದ ಕಪ್ಪು ಕುಳಿಗಳಿದ್ದು, ಇವುಗಳ ಮಧ್ಯೆ ನಕ್ಷತ್ರಪುಂಜಗಳಿವೆ ಎಂಬುದನ್ನು ಹಬಲ್ ಪತ್ತೆ ಹಚ್ಚಿದೆ.
ಹಬಲ್ನ ಇತ್ತೀಚಿನ ಮಹತ್ತರ ಸಾಧನೆಗಳು
2020: ತನ್ನ 30ನೇ ವರ್ಷಾಚರಣೆಯ ಸಂದರ್ಭದಲ್ಲಿ ಹಬಲ್ ಮಹತ್ವದ ಸಂಗತಿಯನ್ನು ಜಗತ್ತಿಗೆ ತಿಳಿಸಿದೆ. ದೂರದ ಮತ್ತೊಂದು ಗ್ಯಾಲಕ್ಸಿಯ ಬಳಿ ನಕ್ಷತ್ರಗಳನ್ನೇ ನುಂಗುವ ಕಪ್ಪು ಕುಳಿ ಇರುವುದನ್ನು ಹಬಲ್ ನಮಗೆ ತಿಳಿಸಿದೆ.
2019: ಸುರುಳಿಯಾಕಾರದ ಗ್ಯಾಲಕ್ಸಿಯೊಂದನ್ನು ಪತ್ತೆ ಮಾಡಿರುವ ಹಬಲ್ ಕಪ್ಪು ಕುಳಿಗಳ ರಹಸ್ಯ ಬೇಧಿಸುವಲ್ಲಿ ಸಾಕಷ್ಟು ಮಾಹಿತಿಗಳನ್ನು ನೀಡಿತು. ಬೊರಿಸೊವ್ ಧೂಮಕೇತುವಿನ ಸುಂದರವಾದ ಚಿತ್ರಗಳನ್ನು ಭೂಮಿಗೆ ಹಬಲ್ ರವಾನಿಸಿತ್ತು.