ಸ್ಯಾನ್ಫ್ರಾನ್ಸಿಸ್ಕೊ: ಜಗತ್ತನ್ನು ಆಳುತ್ತಿರುವ ಎರಡು ಪ್ರಮುಖ ಸಾಮಾಜಿಕ ಜಾಲತಾಣದ ಮುಖ್ಯಸ್ಥರ ನಡುವೆ ಇದೀಗ ಯುದ್ಧ ಆರಂಭವಾಗಿದೆ. ಈ ಯುದ್ಧದ ಬೆನ್ನಲ್ಲೇ ಇಬ್ಬರು ಪಂಥಾಹ್ವಾನವನ್ನು ಕೂಡ ನೀಡಿದ್ದಾರೆ. ಇದೆಲ್ಲಾ ಆರಂಭವಾಗಿದ್ದು, ವಿಶ್ವದ ಅಗ್ರ ಶ್ರೀಮಂತ ಮಸ್ಕ್, ಫೇಸ್ಬುಕ್ ಸಂಸ್ಥಾಪಕನನ್ನು ಕೆಣಕಿದ್ದಕ್ಕೆ. ಫೇಸ್ಬುಕ್ ಪಾರುಪತ್ಯದ ಕುರಿತು ಬಳಕೆದಾರರ ಟ್ವೀಟ್ಗೆ ಪ್ರತಿಕ್ರಿಯಿಸಿದ ಮಸ್ಕ್, "ಕೇಜ್ ಮ್ಯಾಚ್"ಗೆ ಮಾರ್ಕ್ ಜುಗರ್ ಬರ್ಗ್ ಅನ್ನು ಆಹ್ವಾನಿಸಿದರು. ಇದರ ಬೆನ್ನಲ್ಲೇ ಸುಮ್ಮನಿರದ ಮೆಟಾ ಸಿಇಒ, ಮಸ್ಕ್ಗೆ ನಿಮ್ಮ ವಿಳಾಸವನ್ನು ಕಳುಹಿಸಿ ಎಂದು ಪೋಸ್ಟ್ ಮಾಡಿದ್ದಾರೆ.
ಮೆಟಾ ಶೀಘ್ರದಲ್ಲೇ ಟ್ವಿಟರ್ಗೆ ಪ್ರತಿಸ್ಪರ್ಧಿ ನೀಡಲಿದೆ ಎಂಬ ವಿಷಯದಿಂದ ಟೆಕ್ ದಿಗ್ಗಜರ ನಡುವೆ ಈ ಸಮರ ಆರಂಭವಾಗಿದೆ. ಮಾರ್ಕ್ ಜುಕರ್ಬರ್ಗ್ ಟ್ವಿಟರ್ಗೆ ಪರ್ಯಾಯವಾಗಿ ಹೊಸ ತಾಣ ಸೃಷ್ಟಿಸಲು ಮುಂದಾಗುತ್ತಿದ್ದಾರೆ ಎಂಬ ಸುದ್ದಿ ಕೇಳಿದೊಡನೆಯೇ, ಕಡೆ ಪಕ್ಷ ಇದು ವಿವೇಕಯುತವಾಗಿದೆ. ಕೆಲವು ಕ್ಷಣಗಳು ಚಿಂತೆಯಾಯಿತು ಎಂದು ಮಸ್ಕ್ ತಿಳಿಸಿದ್ದರು.
ಇದಕ್ಕೆ ಬಳಕೆದಾರರು ಒಬ್ಬರು ಪ್ರತಿಕ್ರಿಯಿಸಿ, "ಎಲೋನ್ ಮಸ್ಕ್ ಎಚ್ಚರವಾಗಿರಿ. ಅವರು ಇದೀಗ ಜು ಜಿಟ್ಸು ಮಾಡುತ್ತಿದ್ದಾರೆ" ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಮಸ್ಕ್, "ನಾನು ಕೇಜ್ ಮ್ಯಾಚ್ಗೆ ಸಿದ್ಧ" ಎಂದಿದ್ದಾರೆ. ಗುರುವಾರ ಮಸ್ಕ್ ಅವರ ಈ ಸಂಭಾಷಣೆಯ ಸ್ಕ್ರೀನ್ಶಾಟ್ ಪೋಸ್ಟ್ ಅನ್ನು ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಹಂಚಿಕೊಂಡಿರುವ ಜುಕರ್ಬರ್ಗ್, "ನಿಮ್ಮ ವಿಳಾಸ ಕಳುಹಿಸಿ" ಎಂದು ಅಡಿಬರಹ ಬರೆದಿದ್ದಾರೆ.
ಈ ಘಟನೆ ಬೆನ್ನಲ್ಲೇ ಬಳಕೆದಾರರೊಬ್ಬರು ಜುಕರ್ಬರ್ಗ್ ಇನ್ಸ್ಟಾ ಸ್ಟೇಟಸ್ ಸ್ಕ್ರೀನ್ಶಾಟ್ ಅನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ಗಮನಿಸಿದ, ಟೆಸ್ಲಾ ಸಿಇಒ, ಇದು ಸತ್ಯವಾದರೆ, ನಾನು ಮಾಡುತ್ತೇನೆ ಎಂದು ಹಾಸ್ಯಾಸ್ಪದವಾಗಿ ತಿಳಿಸಿದ್ದಾರೆ.
ದೈತ್ಯ ಸಾಮಾಜಿಕ ಜಾಲತಾಣ ಕಂಪನಿಗಳ ಇಬ್ಬರು ಸಿಇಒ ನಡುವೆ ಈ ಯುದ್ಧ ತಿಂಗಳುಗಳ ಹಿಂದೆಯೇ ಆರಂಭವಾಗಿದ್ದರೂ, ಇದು ಈಗ ಸ್ಫೋಟಗೊಂಡಿದೆ. ಕಾರಣ, ಈ ತಿಂಗಳ ಆರಂಭದಲ್ಲಿ ಮಾರ್ಕ್ ಜುಕರ್ಬರ್ಗ್, ಟ್ವಿಟರ್ ರೀತಿಯಲ್ಲೇ ಸಾಮಾಜಿಕ ಮಾಧ್ಯಮದ ಅಪ್ಲಿಕೇಷನ್ ಅನ್ನು ಮಾಡುವ ಯೋಜನೆ ಕುರಿತು ತಿಳಿಸಿದ್ದರು. ಈ ಕುರಿತು ಆಲೋಚನೆ ಬಗ್ಗೆ ಮೆಟಾ ಸಂಸ್ಥೆಯ ಆಂತರಿಕ ಸಭೆಯಲ್ಲೂ ಕೂಡ ಚರ್ಚೆಯಾಗಿತ್ತು. ಈ ವಿಚಾರ ತಿಳಿದು ಟ್ವಿಟರ್ನಲ್ಲಿ ಪ್ರತಿಕ್ರಿಯಿಸಿದ ಮಸ್ಕ್, 'ಜುಗ್ ಎಂದು ಬರೆದು ನಾಲಿಗೆ ಎಮೋಜಿ' ಹಾಕಿ ಕಿಂಡಲ್ ಮಾಡಿದ್ದರು.
2017ರಲ್ಲೂ ಮಾರ್ಕ್ ಜುಕರ್ಬರ್ಗ್ಗೆ ತಿರುಗೇಟು ನೀಡಿದ್ದ ಮಸ್ಕ್, ಮೆಟಾ ಸಿಇಒ ಕೃತಕ ಬುದ್ಧಿಮತ್ತೆ ಎಂಬುದು ಸೀಮಿತ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ ಎಂದು ಕೆಣಕಿದ್ದರು.
ಅಧಿಪತ್ಯ ಸಾಧಿಸಿರುವ ದಿಗ್ಗಜರು: ಮೆಟಾ ಸಂಸ್ಥೆಯ ಮಾಲೀಕ ಸಿಇಒ ಮಾರ್ಕ್ ಜುಕರ್ಬರ್ಗ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂ ಮೂಲಕ ಈಗಾಗಲೇ ಅಧಿಪತ್ಯ ಸಾಧಿಸಿದ್ದು, ಇದೀಗ ಟ್ವಿಟರ್ ರೀತಿ ಮತ್ತೊಂದು ಅಪ್ಲಿಕೇಷನ್ ಹುಟ್ಟು ಹಾಕುವ ಚಿಂತನೆಯಲ್ಲಿರುವುದು ಇವರ ನಡುವಿನ ಶೀತಲ ಸಮರಕ್ಕೆ ಕಾರಣವಾಗಿದೆ. ಟ್ವಿಟರ್ ಜನಪ್ರಿಯತೆ ಬೆನ್ನಲ್ಲೇ ಕಳೆದ ವರ್ಷ ಲಕ್ಷಾಂತರ ಕೋಟಿ ಹೂಡಿಕೆ ಮಾಡಿ ಮಸ್ಕ್ ಟ್ವಿಟರ್ ಖರೀದಿಸಿದ್ದರು. ಇದರ ಬೆನ್ನಲ್ಲೇ ಹಲವು ಮಾರ್ಪಡುಗಳನ್ನು ಮಾಡಿ ಟೀಕೆಗೆ ಕೂಡ ಮಸ್ಕ್ ಗುರಿಯಾಗಿದ್ದರು.
ಇದನ್ನೂ ಓದಿ: ಟೆಸ್ಲಾ ಕಾರ್ನಲ್ಲಿ ಹ್ಯಾಂಡ್ಸ್ ಫ್ರೀ ಡ್ರೈವಿಂಗ್‌ಗಾಗಿ ಎಲೋನ್ ಮೋಡ್... ಏನಿದು ಹೊಸ ವೈಶಿಷ್ಟ್ಯ