ನವದೆಹಲಿ: ಜಾಗತಿಕವಾಗಿ ಸುಮಾರು ಶೇ 50ರಷ್ಟು ಉದ್ಯೋಗಿಗಳು ಇನ್ನು ಮುಂದೆ ಶಾಶ್ವತವಾಗಿ ಹೈಬ್ರಿಡ್ ಅಥವಾ ಸಂಪೂರ್ಣ ಮೊಬೈಲ್ ಶೈಲಿಯಲ್ಲಿ ಕೆಲಸ ಮಾಡುವ ನಿರೀಕ್ಷೆಯಿದೆ ಎಂದು ವರದಿಯೊಂದು ಮಂಗಳವಾರ ತಿಳಿಸಿದೆ. ಹೈಬ್ರಿಡ್ ಕೆಲಸವು ವೈವಿಧ್ಯತೆ, ಸಮಾನತೆ ಮತ್ತು ಒಳಗೊಳ್ಳುವಿಕೆ (ಡಿಇಐ)ಗಳ ಪ್ರಯೋಜನಗಳನ್ನು ನೀಡುತ್ತದೆ ಎಂಬುದು ಬಹುತೇಕ ಉದ್ಯಮಗಳ ಅಭಿಪ್ರಾಯವಾಗಿದೆ.
ನಿರ್ದಿಷ್ಟವಾಗಿ, ಹೈಬ್ರಿಡ್ ಕೆಲಸವು ವಿಭಿನ್ನ ಸಾಮರ್ಥ್ಯಗಳನ್ನು ಹೊಂದಿರುವ ಉದ್ಯೋಗಿಗಳಿಗೆ ಹೆಚ್ಚಿನ ಅವಕಾಶಗಳನ್ನು ಪಡೆಯಲು ಅನುವು ಮಾಡಿಕೊಡುತ್ತದೆ ಎಂದು ಸಂಶೋಧನಾ ಸಂಸ್ಥೆ ಒಮ್ಡಿಯಾ ವರದಿ ತಿಳಿಸಿದೆ. ಹೈಬ್ರಿಡ್ ಕೆಲಸವು ಉದ್ಯೋಗಿಗಳಿಗೆ ಸ್ಥಳದ ಅಡೆತಡೆಗಳನ್ನು ನಿವಾರಿಸಲು ಅನುವು ಮಾಡಿಕೊಡುತ್ತದೆ ಎಂದು 67 ಪ್ರತಿಶತದಷ್ಟು ಉದ್ಯಮಗಳ ಅಭಿಪ್ರಾಯವಾಗಿದೆ.
ಉದ್ಯೋಗಿಗಳು ಕೆಲಸದ ಸ್ಥಳದಲ್ಲಿ ತಮ್ಮನ್ನು ನಿರ್ಲಕ್ಷಿಸಲಾಗುತ್ತಿದೆ ಎಂಬ ಭಾವನೆಯನ್ನು ಹೈಬ್ರಿಡ್ ಮಾದರಿಯು ಕಡಿಮೆ ಮಾಡುತ್ತದೆ ಎಂಬುದು ಸುಮಾರು 61 ಪ್ರತಿಶತದಷ್ಟು ಜನರ ಅಭಿಪ್ರಾಯವಾಗಿದೆ. ಇನ್ನು ಕೆಲಸದ ನೇಮಕಾತಿಗಳಲ್ಲಿ ಲಿಂಗ ತಾರತಮ್ಯ ಕಡಿಮೆ ಮಾಡಲು ಕೂಡ ಇದು ಸಹಾಯಕವಾಗಿದೆ ಎಂದು 59 ಪ್ರತಿಶತದಷ್ಟು ಜನರ ಅಭಿಪ್ರಾಯವಾಗಿದೆ.
ಕಚೇರಿ ವಾತಾವರಣ ಮತ್ತು ಮನೆಯಿಂದ ಕೆಲಸ ಮಾಡುವುದನ್ನು ಸಂಯೋಜಿಸುವ ಕೆಲಸದ ವಿಧಾನವೇ ಹೈಬ್ರಿಡ್ ಕೆಲಸದ ಶೈಲಿಯಾಗಿದೆ. ಹೈಬ್ರಿಡ್ ಕೆಲಸವು ಅಗತ್ಯಕ್ಕೆ ತಕ್ಕಂತೆ ಬಿಡುವು ಪಡೆಯಲು ಅವಕಾಶ ನೀಡುತ್ತದೆ ಮತ್ತು ವಿಭಿನ್ನ ರೀತಿಯ ಕೆಲಸಗಳನ್ನು ಮಾಡಲು ಅವಕಾಶ ನೀಡುತ್ತದೆ. ಇದು ಉದ್ಯೋಗಿಗಳಿಗೆ ಅವರು ಹೇಗೆ ಮತ್ತು ಎಲ್ಲಿ ಕೆಲಸ ಮಾಡುತ್ತಾರೆ ಎಂಬುದನ್ನು ಆಯ್ಕೆ ಮಾಡಲು ಅನುವು ಮಾಡಿಕೊಡುತ್ತದೆ.
ಹೈಬ್ರಿಡ್ ಕೆಲಸದ ಮಾದರಿಯನ್ನು ಬಳಸುವ ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ಉತ್ತಮ ಕೆಲಸ-ಜೀವನ ಸಮತೋಲನವನ್ನು ನೀಡಬಹುದು. ಇದು ಕೆಲಸದಲ್ಲಿ ಉತ್ಪಾದಕತೆ ಮತ್ತು ಉದ್ಯೋಗಿಗಳ ತೊಡಗಿಸಿಕೊಳ್ಳುವಿಕೆಯನ್ನು ಹೆಚ್ಚಿಸುತ್ತದೆ ಮತ್ತು ಇದರ ಪರಿಣಾಮವಾಗಿ ವ್ಯವಹಾರಗಳು ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ.
ಹೈಬ್ರಿಡ್ ವರ್ಕ್ ಮಾಡೆಲ್ ಎಂಬುದು ಕೆಲಸದ ಒಂದು ವಿಧಾನವಾಗಿದ್ದು, ಇದು ದೂರದಿಂದ ಕೆಲಸ ಮಾಡುವ ಉದ್ಯೋಗಿಗಳನ್ನು ಮತ್ತು ಕಂಪನಿಯ ಕಚೇರಿಗಳಲ್ಲಿ ಅಥವಾ ಸೈಟ್ಗಳಲ್ಲಿ ಕೆಲಸ ಮಾಡುವವರನ್ನು ಒಳಗೊಂಡಿದೆ. ದೂರದ ಉದ್ಯೋಗಿಗಳು ತಾವು ಕೆಲಸ ಮಾಡಲು ಬಯಸುವ ಸ್ಥಳವನ್ನು ಆಯ್ಕೆ ಮಾಡಬಹುದು (ಉದಾಹರಣೆಗೆ ಗೃಹ ಕಚೇರಿ), ಆದರೆ ಆನ್-ಸೈಟ್ ಉದ್ಯೋಗಿಗಳು ಕಚೇರಿ ಕಟ್ಟಡ, ಗೋದಾಮು, ಕಾರ್ಖಾನೆ ಅಥವಾ ಚಿಲ್ಲರೆ ಮಳಿಗೆಯಂತಹ ಕೇಂದ್ರ ಸ್ಥಳದಿಂದ ಕೆಲಸ ಮಾಡುತ್ತಾರೆ.
ಇದನ್ನೂ ಓದಿ : 2024ಕ್ಕೆ ಜಿಮೇಲ್ನ ಬೇಸಿಕ್ HTML ಆವೃತ್ತಿ ಸ್ಥಗಿತ