ನವದೆಹಲಿ: 2023 ರ ಅಂತ್ಯದ ವೇಳೆಗೆ ಸುಮಾರು 31 ಮಿಲಿಯನ್ (3 ಕೋಟಿ 10 ಲಕ್ಷ) ಭಾರತೀಯ ಬಳಕೆದಾರರು 5ಜಿ ಫೋನ್ಗಳನ್ನು ಬಳಸಲಾರಂಭಿಸುವ ನಿರೀಕ್ಷೆಯಿದೆ ಎಂದು ಹೊಸ ವರದಿಯೊಂದು ಮಂಗಳವಾರ ತಿಳಿಸಿದೆ. ದೇಶದಲ್ಲಿ 5ಜಿ ವಲಯದ ವಿಸ್ತರಣೆಗೆ ಬಹುದೊಡ್ಡ ಅವಕಾಶವಿರುವುದನ್ನು ಇದು ತೋರಿಸಿದೆ.
ಎರಿಕ್ಸನ್ ಕನ್ಸ್ಯೂಮರ್ ಲ್ಯಾಬ್ ವರದಿಯ ಪ್ರಕಾರ, ಭಾರತದಲ್ಲಿ 4ಜಿಗೆ ಹೋಲಿಸಿದರೆ 5 ಜಿಯು ಗ್ರಾಹಕರ ನೆಟ್ವರ್ಕ್ ಸಂತೃಪ್ತಿಯನ್ನು ಶೇಕಡಾ 30 ರಷ್ಟು ಹೆಚ್ಚಿಸಿದೆ. ಭಾರತದಲ್ಲಿ 5ಜಿ ಬಳಕೆದಾರರು ದಿನನಿತ್ಯ ಎಚ್ಡಿ ವೀಡಿಯೊ ಸ್ಟ್ರೀಮಿಂಗ್, ವೀಡಿಯೊ ಕರೆಗಳು, ಮೊಬೈಲ್ ಗೇಮಿಂಗ್ ಮತ್ತು ವರ್ಧಿತ ರಿಯಾಲಿಟಿಯಂತಹ ಅಪ್ಲಿಕೇಶನ್ಗಳನ್ನು ಹೆಚ್ಚಾಗಿ ಬಳಸುವುದು ಕಂಡು ಬಂದಿದೆ.
ಭಾರತಕ್ಕೂ ಮೊದಲು 5ಜಿ ನೆಟ್ವರ್ಕ್ ಅಳವಡಿಸಿಕೊಂಡ ಯುಎಸ್, ಯುಕೆ, ದಕ್ಷಿಣ ಕೊರಿಯಾ, ಚೀನಾ ಮತ್ತು ಇತರ ಅನೇಕ ದೇಶಗಳ ಬಳಕೆದಾರರಿಗೆ ಹೋಲಿಸಿದರೆ ಭಾರತೀಯ ಬಳಕೆದಾರರು ಅವರಿಗಿಂತ ವಾರಕ್ಕೆ ಸರಾಸರಿ ಎರಡು ಗಂಟೆ ಹೆಚ್ಚು ಕಾಲ ಈ ಸೇವೆಗಳನ್ನು ಬಳಸುತ್ತಾರೆ ಎಂದು ವರದಿ ತಿಳಿಸಿದೆ.
"ನಮ್ಮ ಜಾಗತಿಕ ಸಮೀಕ್ಷೆಯ ಸಂಶೋಧನೆಗಳು 5ಜಿ ಅಳವಡಿಕೆ ಮತ್ತು ಬಳಕೆಯಲ್ಲಿ ಭಾರತದ ಸಾಮರ್ಥ್ಯವನ್ನು ಎತ್ತಿ ತೋರಿಸಿವೆ. ದೇಶದ ಜನಸಂಖ್ಯೆಯ ಗಣನೀಯ ಭಾಗವು 5 ಜಿಗೆ ಸಿದ್ಧವಾಗಿರುವುದರಿಂದ, ಭಾರತೀಯ ಮಾರುಕಟ್ಟೆಯಲ್ಲಿ ನಾವೀನ್ಯತೆ ಮತ್ತು ಬೆಳವಣಿಗೆಗೆ ಅವಕಾಶಗಳು ಅಪಾರವಾಗಿವೆ "ಎಂದು ಎರಿಕ್ಸನ್ ಕನ್ಸ್ಯೂಮರ್ ಲ್ಯಾಬ್ನ ಮುಖ್ಯಸ್ಥ ಜಸ್ಮೀತ್ ಸಿಂಗ್ ಸೇಥಿ ಹೇಳಿದರು.
ಈ ವರ್ಷದ ಆರಂಭದಲ್ಲಿ 28 ವಿವಿಧ ದೇಶಗಳ 1.5 ಬಿಲಿಯನ್ ಗ್ರಾಹಕರ ಅಭಿಪ್ರಾಯಗಳನ್ನು ಆಧರಿಸಿ ಎರಿಕ್ಸನ್ ಕನ್ಸ್ಯೂಮರ್ ಲ್ಯಾಬ್ ವರದಿಯನ್ನು ತಯಾರಿಸಲಾಗಿದೆ. ಭಾರತದ 50 ಮಿಲಿಯನ್ 5ಜಿ ಬಳಕೆದಾರರು ಮತ್ತು ಶ್ರೇಣಿ 1-3 ನಗರಗಳಲ್ಲಿ 250 ಮಿಲಿಯನ್ ಗ್ರಾಹಕರ ಅಭಿಪ್ರಾಯಗಳನ್ನು ಸಮೀಕ್ಷೆಗೆ ಬಳಸಲಾಗಿದೆ.
ಇದಲ್ಲದೆ ಪ್ರತಿ ಐವರು ಬಳಕೆದಾರರಲ್ಲಿ ಒಬ್ಬರು ಹೊಸ ಸೇವೆಗಳು ಮತ್ತು ವಿಭಿನ್ನ 5 ಜಿ ಸಂಪರ್ಕಕ್ಕಾಗಿ ಶೇಕಡಾ 14 ರಷ್ಟು ಹೆಚ್ಚುವರಿ ಮೊತ್ತ ಪಾವತಿಸಲು ಸಿದ್ಧರಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. 3 ಡಿ / ಎಆರ್ ಬುಕ್ಸ್ ಡಿಜಿಟಲ್ ಲೈಬ್ರರಿ, 5 ಜಿ ಕ್ರಿಯೇಟರ್ ಪ್ಯಾಕೇಜ್, 5 ಜಿ ಆಪ್ಟಿಮೈಸ್ಡ್ ಮೊಬೈಲ್ ಗೇಮಿಂಗ್, ಇಮ್ಮರ್ಸಿವ್ ರಿಪ್ಲೇಗಳು, ವರ್ಧಿತ ಈವೆಂಟ್ ಎಕ್ಸ್ಪೀರಿಯನ್ಸ್ ಮುಂತಾದುವು ಈ ಹೊಸ ಸೇವೆಗಳಲ್ಲಿ ಸೇರಿವೆ.
ಇದನ್ನೂ ಓದಿ: ವಿಶ್ವದ 2ನೇ ಅತಿದೊಡ್ಡ ಮೊಬೈಲ್ ತಯಾರಿಕಾ ದೇಶ ಯಾವುದು ಹೇಳಿ? ಶೇ 22ರಷ್ಟು ಸಾಧನ ರಫ್ತು