ಹೈದರಾಬಾದ್: 'ಸತ್ಯಮೇವ ಜಯತೆ' ಎಂಬುದು ಭಾರತೀಯ ಸಂಸ್ಕೃತಿಯು ಪ್ರತಿಯೊಬ್ಬರೂ ರೂಢಿಸಿಕೊಳ್ಳಲು ಹೇಳುತ್ತದೆ. "ಸತ್ಯವು ಯಾವಾಗಲೂ ಮೇಲುಗೈ ಸಾಧಿಸುತ್ತದೆ" ಎಂಬುದು ಇದರ ಅರ್ಥವಾಗಿದೆ. ಇದನ್ನ ಗಮನದಲಿಟ್ಟುಕೊಂಡು ಪ್ರಜಾಪ್ರಭುತ್ವ ಮಾದರಿಯ ಸಂವಿಧಾನವನ್ನು ರೂಪಿಸುವಾಗ ಸಂವಿಧಾನದಲ್ಲಿ ಮಾತಿನ ಹಕ್ಕನ್ನು ಒಂದು ಪ್ರಮುಖ ಅಂಶವಾಗಿ ಅಳವಡಿಸಲಾಗಿದೆ.
ಪತ್ರಿಕೋದ್ಯಮವು ಸಂವಿಧಾನದ ನಾಲ್ಕನೇ ಅಂಗವಾಗಿದ್ದು, ಪ್ರಜಾಪ್ರಭುತ್ವ ರಾಷ್ಟ್ರವು ನಿಂತಿರುವ ಪ್ರಮುಖ ಸ್ತಂಭಗಳಲ್ಲಿ ಒಂದಾಗಿದೆ. ಇದು ಸತ್ಯವನ್ನು ಕಂಡು ಹಿಡಿಯುವುದು ಮತ್ತು ಪ್ರತಿಪಾದಿಸುವುದು ಮತ್ತು ಅದಕ್ಕಿಂತ ಹೆಚ್ಚು ಅಥವಾ ಕಡಿಮೆ ಇಲ್ಲ. ನಮ್ಮನ್ನಾಳುವ ರಾಜಕಾರಣಿಗಳ ಅನ್ಯಾಯ ಮತ್ತು ಅಕ್ರಮಗಳನ್ನು ಗೊಗೆಳೆಯುತ್ತದೆ ಎಂಬ ಕಾರಣಕ್ಕೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬುಡಮೇಲು ಮಾಡಿದರೆ ಇಡೀ ಪ್ರಜಾಪ್ರಭುತ್ವ ವ್ಯವಸ್ಥೆಯನ್ನ ಬುಡಮೇಲು ಮಾಡಿದಂತೆ ಆಗುತ್ತದೆ.
ವೈದ್ಯರು, ಆರೋಗ್ಯ ಸಿಬ್ಬಂದಿ, ಪೊಲೀಸ್ ಮತ್ತು ಪೌರ ಕಾರ್ಮಿಕರ ಜೊತೆ ಜೊತೆಗೆ ಪತ್ರಕರ್ತರು ಸಹ ಭುಜ ಕೊಟ್ಟು ಕೊರೊನಾ ಮಹಾಮಾರಿ ವಿರುದ್ಧದ ಹೋರಾಟದಲ್ಲಿ ಬಹುವಾಗಿ ತೊಡಗಿದ್ದಾರೆ. ಪತ್ರಕರ್ತರು ಸರ್ಕಾರ ಮತ್ತು ಆಢಳಿತ ವರ್ಗದ ಕನ್ನಡಿಯಂತೆ ಕೆಲಸ ಮಾಡುತ್ತಿದ್ದು, ಅಧಿಕಾರಿಗಳ ಕಾರ್ಯವೈಖರಿ, ಚಿಕಿತ್ಸೆ ನಡೆಸುತ್ತಿರುವ ವಿಧಾನ, ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡುವಲ್ಲಿ ಮಾಡುವ ನಿರ್ಲಕ್ಷ್ಯ, ಆರೋಗ್ಯ ಸಂನ್ಮೂಲ ಕೊರತೆ, ವೈದ್ಯರ ಧಣಿವರಿಯದ ಸೇವೆ ಬಗ್ಗೆ ಜನರಿಗೆ ತಿಳಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ, ಈ ರೀತಿ ಜನಪರ ಕೆಲಸ ಮಾಡುವ ಪತ್ರಕರ್ತರ ಮೇಲೆ ಸುಳ್ಳು ಕೇಸ್ ದಾಖಲಿಸುವ ಮೂಲಕ ಅವರ ಮೇಲೆ ನಡೆಸುವ ದೌರ್ಜನ್ಯವು ವಿಶ್ವದ ಬೃಹತ್ ಪ್ರಜಾಪ್ರಭುತ್ವದ ಆಶಯಗಳಿಗೆ ಕೊಡಲಿ ಪೆಟ್ಟಾಗಿದೆ.
ಆಲ್ ಇಂಡಿಯಾ ರೇಡಿಯೋದಲ್ಲಿ ಪ್ರಸಾರವಾಗುವ ಮನ್ ಕಿ ಬಾತ್ ಕಾರ್ಯಕ್ರಮದ ಮಾರ್ಚ್ ಕೊನೆಯ ವಾರದ ಸಂಚಿಕೆಯಲ್ಲಿ ಮಾತನಾಡಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೊರೊನಾ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ವೈದ್ಯರು, ನರ್ಸ್ ಮತ್ತು ಯೋಧರಿಂದ ನಾವು ಸ್ಫೂರ್ತಿ ಪಡೆಯಬೇಕು ಎಂದಿದ್ದರು. ಜೊತೆಗೆ, ಆರೋಗ್ಯ ಸಿಬ್ಬಂದಿ ಮೇಲಿನ ಹಲ್ಲೆ ಮತ್ತು ದೌರ್ಜನ್ಯವನ್ನು ಸಹಿಸಲು ಸಾಧ್ಯವೇ ಇಲ್ಲ ಎಂದಿದ್ದ ಕೇಂದ್ರ ಸರ್ಕಾರ ಅವರ ರಕ್ಷಣೆಗಾಗಿ ಸುಗ್ರೀವಾಜ್ಞೆತಯನ್ನ ಸಹ ಜಾರಿಗೆ ತಂದಿತು.
ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುವಾಗ ಸೋಂಕು ತಮಗೆ ತಾಕದಂತೆ ರಕ್ಷಣೆ ಪಡೆಯಲು ಅಗತ್ಯ ಇರುವ ಪರ್ಸನಲ್ ಪ್ರೊಟೆಕ್ಷನ್ ಕಿಟ್(ಪಿಪಿಇ) ಕೊರತೆ ಇದೆ ಎಂದು ದೇಶಾದ್ಯಂತ ಹಲವಾರು ವೈದ್ಯರು ಹೇಳುತ್ತಲೇ ಇದ್ದಾರೆ. ಇದಾದ ಬಳಿಕ ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶ ಮಾಡಿದರೂ ಪರಿಸ್ಥಿತಿ ಸುಧಾರಣೆ ಕಂಡಿಲ್ಲ. ರಾಷ್ಟ್ರದ ರಾಜಧಾನಿ ನವದೆಹಲಿ ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ ಎಂದು ಬೇರೆ ಹೇಳಬೇಕಾಗಿಲ್ಲ.
ದೆಹಲಿ ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆ ಬಗ್ಗೆ ಮಾಹಿತಿ ದಾಖಲಿಸಿದ ಮತ್ತು ಚಿತ್ರೀಕರಣ ಮಾಡಿದ ಕಾರಣಕ್ಕಾಗಿ ವೈದ್ಯರನ್ನು ಅಮಾನತುಗೊಳಿಸಿದ್ದಲ್ಲದೆ ಸರ್ಕಾರದಿಂದ ಎಫ್‌ಐಆರ್ ಕೂಡ ದಾಖಲಾಗಿದೆ. ಈ ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋರ್ಟ್, ದೆಹಲಿ ಸರ್ಕಾರವು ವೈದ್ಯರ ಮೇಲೆ ಪ್ರಕರಣ ದಾಖಲಿಸುವುದು ಸೇರಿದಂತೆ ವೈದ್ಯರಿಗೆ ಕಿರುಕುಳ ನೀಡುವ ಮುಂತಾದ ಹೇಯ ಕೃತ್ಯಗಳನ್ನು ನಿಲ್ಲಿಸಬೇಕು. ಕೊರೊನಾ ವಾರಿಯರ್ಸ್ ಮೇಲೆ ಸೇಡು ತೀರಿಸಿಕೊಳ್ಳುವ ಬದಲು ಆಸ್ಪತ್ರೆಗಳ ಪರಿಸ್ಥಿತಿ ಸುಧಾರಿಸುವತ್ತ ಗಮನ ಹರಿಸಬೇಕು ಎಂದು ಚಾಟಿ ಬೀಸಿದೆ. ಇದು ಕೇವಲ ಕೇವಲ ದೆಹಲಿಯ ಕಥೆಯಲ್ಲ, ದೇಶದ ವಿವಿಧೆಡೆ ಹಲವು ಸರ್ಕಾರಗಳು ಪತ್ರಕರ್ತರ ಧ್ವನಿ ಅಡಗಿಸಲು ಅವರ ಮೇಲೆ ದೌರ್ಜನ್ಯ ಎಸಗುತ್ತಿರುವ ಹಲವು ಪ್ರಕರಣಗಳು ಕಂಡುಬಂದಿವೆ.
ಕೊರೊನಾ ಸಾಂಕ್ರಾಮಿಕ ಮಹಾಮಾರಿ ವಿರಾಟ್ ರೂಪದಲ್ಲಿ ವಿಶ್ವಾದ್ಯಂತ ಹಬ್ಬಲು ಆರಂಭವಾದಾಗ, ಪ್ರಪಂಚದಾದ್ಯಂತದ ಸಾವಿರಾರು ಜನರ ಜೀವನದ ಮೇಲೆ ಪರಿಣಾಮ ಬೀರಲು ಪ್ರಾರಂಭಿಸಿದಾಗ, ಆ ಕುರಿತ ಮಾಹಿತಿಯನ್ನ ಹೆಕ್ಕಿ ತೆಗೆದು ಜಗತ್ತಿನ ಗಮನಕ್ಕೆ ತಂದಿದ್ದು ಪತ್ರಕರ್ತರು. ದೊಡ್ಡ ದೊಡ್ಡ ರಾಷ್ಟ್ರಗಳ ಬಣ್ಣ ಬಯಲು ಮಾಡಿದ್ದನ್ನ ಕಂಡು ಸರ್ಕಾರಗಳು ಅಕ್ಷರಶಃ ದಂಗಾದವು. ಹೀಗಾಗಿ, ಆಳುವ ಸರ್ಕಾರಗಳು ಸುಳ್ಳು ಆರೋಪಗಲ ಮೂಲಕ ಪತ್ರಕರ್ತರು ಮತ್ತು ಮಾಧ್ಯಮ ಸಂಸ್ಥೆಗಲ ಮೇಲೆ ನಿಂದನೆ ಹಾಕಲು ಶುರು ಮಾಡಿದವು. ಜನರ ಹೀನಾಯ ಪರಿಸ್ಥಿತಿಗಳನ್ನು ಬಹಿರಂಗಪಡಿಸಿದ ಮತ್ತು ಲಾಕ್‌ಡೌನ್ ನಿಯಮಗಳನ್ನು ಪಾಲಿಸದ ಅವ್ಯವಸ್ಥೆಯನ್ನು ಬಹಿರಂಗಪಡಿಸಿದ 'ಮಹಾ ಅಪರಾಧ'ಕ್ಕೆ 55 ಪತ್ರಕರ್ತರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಪ್ರಧಾನಿ ಮೋದಿ ಅವರು ದತ್ತು ಪಡೆದಿರುವ ವಾರಣಾಸಿ ಗ್ರಾಮದಲ್ಲಿ ಲಾಕ್ ಡೌನ್ ಮಾಡಿದಾಗ ಜನರು ಹಸಿವಿನಿಂದ ಬಳಲುತ್ತಿದ್ದಾರೆ ಎಂದು ಮಾಡಿದ ಸುದ್ದಿಯಿಂದ ಉತ್ತರ ಪ್ರದೇಶ ಸರ್ಕಾರ ಕೋಪಗೊಂಡಿದೆ. ಲಾಕ್‌ಡೌನ್ ಸಮಯದಲ್ಲಿ ಡೊಮರಿ ಗ್ರಾಮದ ಜನ ಅವರ ತೀವ್ರ ಸಂಕಷ್ಟದ ಅನುಭವಗಳು ಮತ್ತು ಅವರ ವೇದನೆ ಬಗ್ಗೆ ಸಾರಾಂಶದ ಲೇಖನಗಳನ್ನು ಬರೆದ ‘ಸ್ಕ್ರಾಲ್-ಇನ್ ಪೋರ್ಟಲ್’ ನ ಸುಪ್ರಿಯಾ ಶರ್ಮಾ ವಿರುದ್ಧ ಸರ್ಕಾರ ಹಲವು ಪ್ರಕರಣಗಳನ್ನ ದಾಖಲಿಸಿದೆ.
ಸಾರ್ವಜನಿಕ ವಿತರಣಾ ವ್ಯವಸ್ಥೆಯ ನಿಷ್ಕ್ರಿಯತೆ, ಅಧಿಕಾರಶಾಹಿಯ ಅಸಮರ್ಥತೆ ಮತ್ತು ಭ್ರಷ್ಟಾಚಾರವೇ ಆಹಾರದ ಕೊರತೆ ಮತ್ತು ಜನರ ದುಃಖಕ್ಕೆ ಕಾರಣವಾಗಿದೆ ಎಂಬುದರಲ್ಲಿ ಯಾವುದೇ ತಪ್ಪಿಲ್ಲ. ಈ ಬಗ್ಗೆ ಸುಪ್ರಿಯ ವಿಸ್ತೃತ ವರದಿ ಮಾಡಿದ್ದರು. ಈ ಕ್ಷೇತ್ರಗಳು ಆಡಳಿತ ಪರಿಸ್ಥಿತಿಗಳನ್ನು ಪರಿಶೀಲಿಸಲು ಮತ್ತು ಲೋಪದೋಷಗಳನ್ನು ಪರಿಹರಿಸಲು ಆಡಳಿತ ಕಾರ್ಯವಿಧಾನಕ್ಕೆ ಸೂಕ್ತ ವಲಯವಾಗಿದೆ. ಆದರೆ, ಮಾಯಾದೇವಿ ಎಂಬ ಮಹಿಳೆ ತನ್ನ ಬಗ್ಗೆ ಮಾಡಿದ ಸುದ್ದಿಯಲ್ಲಿ ತಪ್ಪಾಗಿ ಚಿತ್ರಿಸಲಾಗಿದೆ ಎಂದು ದೂರಿದ್ದು, ಅವರು ಆಯಾ ಪತ್ರಕರ್ತರ ವಿರುದ್ಧ ಎಸ್‌ಸಿ ಮತ್ತು ಎಸ್‌ಟಿ ದೌರ್ಜನ್ಯ ಕಾಯ್ದೆಯಡಿ ಐಪಿಸಿ ಸೆಕ್ಷನ್ 269 (ಮಾರಣಾಂತಿಕ ಸಾಂಕ್ರಾಮಿಕ ರೋಗದ ಅಜಾಗರೂಕತೆ) ಯೊಂದಿಗೆ ದೂರು ದಾಖಲಿಸಿದ್ದಾರೆ. ಮತ್ತು 501 (ಮಾನಹಾನಿಕರ ಪ್ರಕಟಣೆ) ಕೇಸ್ ಕೂಡ ದಾಖಲಿಸಿದ್ದಾರೆ.
2020 ರ ಮಾರ್ಚ್ 25 ರಂದು ಅಯೋಧ್ಯೆಯಲ್ಲಿ ಧಾರ್ಮಿಕ ಅಭಿಯಾನದಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ಆದಿತ್ಯನಾಥ್ ಲಾಕ್ ಡೌನ್ ನಿಯಮಗಳಿಗೆ ವಿರುದ್ಧವಾಗಿ ಹೋಗಿದ್ದಾರೆ ಎಂಬ ಸುದ್ದಿಯನ್ನು ಪ್ರಕಟಿಸಿದ್ದಕ್ಕಾಗಿ 'ದಿ ವೈರ್' ನ ಸಂಪಾದಕ ಸಿದ್ಧಾರ್ಥ್ ವರದರಾಜನ್ ಮೇಲೆ ಎರಡು ಎಫ್ಐಆರ್ ದಾಖಲಿಸಲಾಗಿದೆ. ಕರೋನಾ ಬಿಕ್ಕಟ್ಟು ಸಂದರ್ಭದಲ್ಲಿ ಕರೋನಾದ ಕೊಳಕು ಮನಸ್ಸಿನ ವಿರುದ್ಧ ಹೋರಾಡಬೇಕಿದೆ, ಇಂತಹ ಅಸಹಿಷ್ಣುತೆ ಮತ್ತು ಪತ್ರಕರ್ತರ ಮೇಲೆ ಸೇಡು ತೀರಿಸಿಕೊಳ್ಳುವ ಕಾರ್ಯವಿಧಾನಗಳನ್ನು ಹೊಂದಿರುವ ಸರ್ಕಾರಗಳು ಜನರಿಗೆ ಯಾವ ಸಂದೇಶವನ್ನು ನೀಡುತ್ತವೆ?
"ವೃತ್ತ ಪತ್ರಿಕೆಗಳು ಸತ್ಯವನ್ನು ವಾಸ್ತವದ ನೆಲೆಗಟ್ಟಿನಲ್ಲಿ ಪ್ರಕಟಿಸಲು ಅಥವಾ ಅದರ ಬಗ್ಗೆ ಮಾತನಾಡಲು ಮುಕ್ತವಾಗಿದ್ದಾಗ(ಆ ಸಮಯದಲ್ಲಿ ಸಂದರ್ಭಗಳನ್ನು ತಿರುಚಿದರೂ) ಅದು ನೈಜ ವಾಕ್ ಸ್ವಾತಂತ್ರ್ಯ ಆಗುತ್ತದೆಯಲ್ಲವೇ ಎಂದು ಮಹಾತ್ಮ ಗಾಂಧಿ ಹೇಳಿದರು. ಪತ್ರಕರ್ತರ ಮೇಲೆ ಕೇಸ್ ದಾಖಲಿಸುವ ಮತ್ತು ಪತ್ರಕರ್ತರನ್ನ ಚಿತ್ರಹಿಂಸೆಗೊಳಪಡಿಸುವ ಘೋರ, ಗಾಬರಿಯಾಗುವ ಕೆಟ್ಟ ಪ್ರವೃತ್ತಿ ವಿರುದ್ಧ ಸಂಪಾದಕರ ಸಂಘ ಕಾಳಜಿ ವಹಿಸಿದೆ.
ಅನೇಕ ಧೀಮಂತ ಚಿಂತಕರು ಮತ್ತು ವಿಶ್ಲೇಷಕರು ಈ ಬಗ್ಗೆ ಧನಾತ್ಮಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬರಗಾಲದ ಆಪತ್ತು ಮತ್ತು ಸಾಂಕ್ರಾಮಿಕ ರೋಗದ ಆತಂಕದ ಸಂದರ್ಭಗಳಲ್ಲಿ ಪತ್ರಕರ್ತರು ಮತ್ತು ವರದಿಗಾರರು ಬಾರಿ ಪ್ರಮುಖ ಪಾತ್ರವನ್ನು ವಹಿಸುತ್ತಾರೆ ಎಂದು ಅಮರ್ತ್ಯ ಸೇನ್ ಸೇರಿದಂತೆ ಹಲವು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಪತ್ರಕರ್ತ ಯೋಧರು ಸರ್ವಾಧಿಕಾರಿ ಸಮಾಜಗಳಿಗಿಂತ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವ ಸಾಧ್ಯತೆ ಹೆಚ್ಚು.
ಕನಿಷ್ಠ ಸಂಪನ್ಮೂಲಗಳನ್ನು ಗರಿಷ್ಠ ಲಾಭವಾಗಿ ಬಳಸಿಕೊಳ್ಳಲು ಬಯಸುವ ಯಾವುದೇ ಸರ್ಕಾರವು - ವಿಶೇಷವಾಗಿ ವಿಪತ್ತುಗಳ ಸಂದರ್ಭದಲ್ಲಿ - ಅದರ ಮಹತ್ವವನ್ನು ಗುರುತಿಸಬೇಕು. ಜೊತೆಗೆ, ಮಾಧ್ಯಮ ಮತ್ತು ಅದಕ್ಕೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಒದಗಿಸಬೇಕು. ಮುಖ್ಯವಾಗಿ ಪತ್ರಕರ್ತರ ಪ್ರಾಮಾಣಿಕತೆಯನ್ನು ಗೌರವಿಸಬೇಕು. “ದೇಶಾದ್ಯಂತ ನ್ಯಾಯಾಲಯಗಳು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಉಳಿಸಬೇಕು . ಈ ಹಕ್ಕಿನ ವಿರುದ್ಧ ಯಾವುದೇ ಸರ್ಕಾರವು ಕೆಲಸ ಮಾಡುವುದಿಲ್ಲ ಎಂದು ಖಚಿತಪಡಿಸುವುದು ನ್ಯಾಯಾಲಯಗಳ ಜವಾಬ್ದಾರಿಯಾಗಿದೆ. ”,ಎಂದು ಸುಮಾರು ಮೂರೂವರೆ ದಶಕಗಳ ಹಿಂದೆ ಸುಪ್ರೀಂ ಕೋರ್ಟ್ ಹೇಳಿದೆ.
“ಪ್ರತಿಯೊಬ್ಬ ನಾಗರಿಕನಿಗೂ ಸರ್ಕಾರಿ ಆಡಳಿತ ಯಂತ್ರದ ಬಗ್ಗೆ ಕಟು ಪರಿಭಾಷೆ ಬಳಸಿ ಟೀಕಿಸುವ ಹಕ್ಕಿದೆ. ಯಾವುದೇ ಹಿಂಸಾಚಾರ ಪ್ರಕರಣವನ್ನು ಪ್ರಚೋದಿಸಿದರೆ ಮಾತ್ರ, ಯಾರಾದರೂ ದೇಶದ್ರೋಹ ಕೆಲಸ ಮಾಡಿದರೆ ಮಾತ್ರ ಮೊಕದ್ದಮೆ ಹೂಡಬಹುದು ”, ಎಂದು ಬಾಂಬೆ ಹೈಕೋರ್ಟ್ ಸುಮಾರು ಐದು ವರ್ಷಗಳ ಹಿಂದೆ ತೀರ್ಪು ನೀಡಿತು. ಆದರೆ, ಆಗಲೂ ಸಹ ತಮ್ಮ ಬಗ್ಗೆ ಬರೆಯಲಾಗುತ್ತಿರುವ ಕಹಿ ಸತ್ಯಗಳನ್ನ ಅರಗಿಸಿಕೊಳ್ಳಲು ಸಾಧ್ಯವಾಗದ ಸರ್ಕಾರಗಳು ಪ್ರಜಾಪ್ರಭುತ್ವ ಮೌಲ್ಯಗಳನ್ನು ಅಪಹಾಸ್ಯ ಮಾಡಲು ಶ್ರಮಿಸುತ್ತಿದ್ದು, ಆ ಮೂಲಕ ನಾಗರಿಕರ ಹಕ್ಕುಗಳನ್ನು ಹತ್ತಿಕ್ಕುತ್ತವೆ. ಎಂಬುದನ್ನ ನೀವು ಒಪ್ಪುವುದಿಲ್ಲವೇ..?