ವಾಷಿಂಗ್ಟನ್: ಕೊರೊನಾ ವೈರಸ್ ಸಾಂಕ್ರಾಮಿಕ ರೋಗ ಚೀನಾದ ಆರ್ಥಿಕಾಭಿವೃದ್ಧಿಯನ್ನು ಸಂಪೂರ್ಣ ಬುಡಮೇಲು ಮಾಡಬಹುದು ಎಂದು ವಿಶ್ವ ಬ್ಯಾಂಕ್ ಗಂಭೀರ ಎಚ್ಚರಿಕೆ ಕೊಟ್ಟಿದೆ. ಈ ಮೂಲಕ ಪೂರ್ವ ಏಷ್ಯಾ ಭಾಗದಲ್ಲಿ ಸುಮಾರು 11 ಮಿಲಿಯನ್ (1 ಕೋಟಿಗೂ ಹೆಚ್ಚು) ಮಂದಿ ಬಡತನದ ಕೂಪಕ್ಕೆ ಬೀಳಲಿದ್ದಾರೆ ಎಂದು ಹೇಳಿದೆ.
ಈಗಾಗಲೇ ಜಗತ್ತಿನ ಆರ್ಥಿಕ ಬೆಳವಣಿಗೆಯನ್ನು ಕೊರೊನಾ ರೋಗ ಅಲ್ಲೋಲ ಕಲ್ಲೋಲ ಮಾಡುತ್ತಿದೆ. ಕೊರೊನಾ ರೋಗದ ಹರಡುವಿಕೆ ಪೂರ್ವ ಏಷ್ಯಾ ಭಾಗದ ದೇಶಗಳನ್ನು ತೀವ್ರವಾಗಿ ಕಾಡಲಿದೆ ಎನ್ನುವ ಭವಿಷ್ಯವನ್ನು ವಿಶ್ವಬ್ಯಾಂಕ್‌ನ ಮುಖ್ಯ ಆರ್ಥಿಕ ತಜ್ಞ ಆದಿತ್ಯ ಮಟ್ಟು ನುಡಿದಿದ್ದಾರೆ.
ಕೊರೊನಾ ಹೊರತಾದ ಅತ್ಯುತ್ತಮ ಪರಿಸ್ಥಿತಿಯಲ್ಲೂ ಈ ಪ್ರದೇಶ ಆರ್ಥಿಕ ಹೊಡೆತಕ್ಕೆ ಗುರಿಯಾಗಲಿರುವುದು ನಿಸ್ಸಂಶಯ. ಯಾಕೆಂದರೆ, 2019 ರಲ್ಲಿ ಚೀನಾದ ಆರ್ಥಿಕ ವೃದ್ಧಿ ಶೇ 2.3 ರ ಪ್ರಮಾಣದ ನಿಧಾನಗತಿಯಲ್ಲಿ ಸಾಗುತ್ತಿದೆ ಎಂದು ಅವರು ಹೇಳಿದ್ದಾರೆ.