ವಾಷಿಂಗ್ಟನ್ (ಯುಎಸ್ಎ): ಸಾಮಾನ್ಯವಾಗಿ ನಿದ್ರಾಹೀನತೆ ಯುವಕರು ಹೆಚ್ಚಾಗಿ ಅನುಭವಿಸೋ ಸಮಸ್ಯೆ. ಪ್ರತಿ ಮೂವರಿಗೆ ಒಬ್ಬರಲ್ಲಿ ದೀರ್ಘಕಾಲದ ನಿದ್ರಾಹೀನತೆ ಸಮಸ್ಯೆ ಕಂಡುಬರುತ್ತದೆ. ಈ ನಿದ್ರಾಹೀನತೆಗೆ ಬಾಲ್ಯದ ನಿದ್ರಾ ಪ್ರಕ್ರಿಯೆಯೇ ಕಾರಣ ಎಂದು ಅಧ್ಯಯನವೊಂದು ತಿಳಿಸಿವೆ.
ಆಫೀಸ್ನಲ್ಲಿ ಕಂಪ್ಯೂಟರ್ ಮುಂದೆ ಕುಳಿತು ಕೆಲಸ. ಉಳಿದ ಟೈಂನಲ್ಲಿ ಕೈಯಲ್ಲಿ ಮೊಬೈಲ್. ಈ ನಡುವೆ, ಸ್ಟ್ರೆಸ್, ಫ್ರಸ್ಟ್ರೇಷನ್ ಎಲ್ಲ ಸೇರಿ ಸಾವಿರ ಟೆನ್ಶ್ಯನ್ ನಡುವೆ ವಯಸ್ಕರಿಗೆ ಸರಿಯಾಗಿ ನಿದ್ರೆಯೇ ಇರಲ್ಲ.
ಅಮೆರಿಕದ ಅಧ್ಯಯನ ಸಂಸ್ಥೆಯೊಂದು ನಿದ್ರಾಹೀನತೆಗೆ ಮುಖ್ಯ ಕಾರಣ ಏನು ಎಂಬುದನ್ನು ತಿಳಿಸಿದೆ. ಒಂದು ವೇಳೆ ಮಕ್ಕಳ ನಿದ್ರೆಯ ಸಮಯ, ಪ್ರಕ್ರಿಯೆ ಬಗ್ಗೆ ಹೆತ್ತವರು ಕಾಳಜಿ ತೋರದಿದ್ದರೆ, ಮಧ್ಯ ವಯಸ್ಸಿನಲ್ಲಿ ಅವರಿಗೆ ನಿದ್ರಾಹೀನತೆ ಸಮಸ್ಯೆ ಎದುರಾಗುವ ಸಾಧ್ಯೆತೆಗಳಿವೆಯಂತೆ. ಇದರಿಂದಾಗಿ ಮಾನಸಿಕ ಆರೋಗ್ಯವೂ ಕುಂದುತ್ತದೆ ಎಂದು ಅಧ್ಯಯನ ಹೇಳಿದೆ.
ಬಾಲ್ಯದ ಕೆಲ ನಡಾವಳಿಕೆಯ ಸಮಸ್ಯೆಗಳು ಮತ್ತು 42 ವರ್ಷ ವಯಸ್ಸಿನ ವಯಸ್ಕರಲ್ಲಿ ನಿದ್ರಾಹೀನತೆಯ ನಡುವಿನ ಸಂಪರ್ಕವನ್ನು ಕಂಡುಹಿಡಿಯಲು ಯುಕೆಯಲ್ಲಿ ಈ ಅಧ್ಯಯನ ನಡೆಸಲಾಗಿದೆ. ಜಾಮಾ ನೆಟ್‌ವರ್ಕ್ ಓಪನ್ ಜರ್ನಲ್‌ನಲ್ಲಿ ಅಧ್ಯಯನದ ಮಾಹಿತಿಯನ್ನು ಪ್ರಕಟಿಸಲಾಗಿದೆ.
5ರಿಂದ 10 ವರ್ಷ ವಯಸ್ಸಿನ ಮಕ್ಕಳಲ್ಲಿ ನಿದ್ರೆಯಲ್ಲಾಗುವ ವ್ಯತ್ಯಾಸಗಳು ಹಾಗೂ ವರ್ತನೆಯಲ್ಲಿನ ಸಮಸ್ಯೆಗಳಿಂದ ಪ್ರೌಢಾವಸ್ಥೆಯಲ್ಲಿ ನಿದ್ರಾಹೀನತೆಯ ಸಮಸ್ಯೆ ಬರುತ್ತದೆ ಎಂದು ಆಸ್ಟ್ರೇಲಿಯಾದ ಪ್ರಮುಖ ಸಂಶೋಧನಾ ಕೇಂದ್ರವಾದ ಅಡಿಲೇಡ್ ಇನ್ಸ್ಟಿಟ್ಯೂಟ್ ಫಾರ್ ಸ್ಲೀಪ್ ಹೆಲ್ತ್ (ಎಐಎಸ್ಹೆಚ್)ನಲ್ಲಿ ಉಸಿರಾಟ ಮತ್ತು ಸ್ಲೀಪ್ ಮೆಡಿಸಿನ್ ಪ್ರಾಧ್ಯಾಪಕರಾಗಿರುವ ರಾಬರ್ಟ್ ಆಡಮ್ಸ್ ಈ ಬಗ್ಗೆ ಹೇಳಿದ್ದಾರೆ.
ಪೋಷಕರು ಮಕ್ಕಳನ್ನು ಬೆದರಿಸುವುದು, ಪ್ರತಿ ವಿಚಾರದಲ್ಲೂ ಹಸ್ತಕ್ಷೇಪ ಮಾಡುವುದು ವಯಸ್ಸಾದ ಮೇಲಾಗುವ ನಿದ್ರಾಹೀನತೆಯ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ರಾಬರ್ಟ್ ಆಡಮ್ಸ್ ಹೇಳಿದ್ದಾರೆ.