ನವದೆಹಲಿ : ರೇಬೀಸ್ ಎಂಬುದು ಒಂದು ಮಾರಣಾಂತಿಕ ರೋಗ. ನಮ್ಮ ದೇಶದಲ್ಲಿ ಪ್ರತಿವರ್ಷ ಸುಮಾರು 15-20 ಲಕ್ಷ ಜನ ರೇಬೀಸ್‌ನಿಂದ ಬಳಲುತ್ತಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಹೆಚ್‌ಒ) ಪ್ರಕಾರ ಭಾರತದಲ್ಲಿ ಪ್ರತಿವರ್ಷ ಸುಮಾರು 20 ಸಾವಿರ ಮಂದಿ ರೇಬೀಸ್‌ನಿಂದ ಸಾಯುತ್ತಾರೆ.
ಆದ್ದರಿಂದ ರೇಬೀಸ್ ತಡೆಯುವುದು ಅತ್ಯಂತ ಮುಖ್ಯ. ರೋಗ ತಡೆಯುವುದು ಹೇಗೆ ಎಂಬುದರ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷದ ಸೆಪ್ಟೆಂಬರ್ 28 ರಂದು ವಿಶ್ವ ರೇಬೀಸ್ ದಿನವನ್ನು ಆಚರಣೆ ಮಾಡಲಾಗುತ್ತದೆ.
"ರೇಬಿಸ್ : ಸತ್ಯಗಳು, ಭಯಪಡಬೇಡಿ" ಈ ವರ್ಷದಲ್ಲಿ ಆಚರಣೆ ಮಾಡುತ್ತಿರುವ ವಿಶ್ವ ರೇಬೀಸ್ ದಿನದ ಘೋಷ ವಾಕ್ಯವಾಗಿದೆ. ವಿಶ್ವದಲ್ಲಿ ವರ್ಷಕ್ಕೆ 50 ಸಾವಿರ ಮಂದಿ ರೇಬೀಸ್‌ನಿಂದ ಮೃತಪಡುತ್ತಾರೆ. ಇದರಿಂದಾಗಿ ಈ ರೋಗದ ಬಗ್ಗೆ ಅತ್ಯಂತ ಗಂಭೀರವಾಗಿ ಯೋಚನೆ ಮಾಡುವ ಅವಶ್ಯಕತೆಯಿದೆ.
ರೇಬೀಸ್ ದಿನದ ಇತಿಹಾಸ
ವಿಶ್ವ ರೇಬೀಸ್ ದಿನವನ್ನು ಮೊದಲ ಬಾರಿಗೆ 28 ಸೆಪ್ಟೆಂಬರ್ 2007ರಂದು ಆಚರಿಸಲಾಯಿತು. ಗ್ಲೋಬಲ್ ಅಲೈಯನ್ಸ್ ಫಾರ್ ರೇಬೀಸ್ ಕಂಟ್ರೋಲ್ ಮತ್ತು ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ಮತ್ತು ವಿಶ್ವ ಆರೋಗ್ಯ ಸಂಘಟನೆ ಜೊತೆಗೂಡಿ ಮೊದಲ ಬಾರಿಗೆ ರೇಬೀಸ್ ದಿನ ಆಚರಣೆ ಮಾಡಿದವು.
ರೇಬೀಸ್ ರೋಗಕ್ಕೆ ಸಂಬಂಧಿಸಿದ ಅನೇಕ ಸಂಸ್ಥೆಗಳು, ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳು ಒಟ್ಟಾಗಿ 2030ರ ವೇಳೆಗೆ ಈ ರೋಗವನ್ನು ತೊಡೆದು ಹಾಕುವ ಗುರಿಯನ್ನು ಹೊಂದಿದ್ದು, ಈ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ.
ರೇಬೀಸ್ ಎಂದರೆ..
ರೇಬೀಸ್ ಪ್ರಾಣಿಗಳಿಂದ ಮನುಷ್ಯರಿಗೆ ಹರಡಬಹುದಾದ ರೋಗವಾಗಿದೆ. ರೇಬೀಸ್ ವೈರಸ್ ರ್ಯಾಬ್ಡೋ ವಿರಿಡೇ ವರ್ಗಕ್ಕೆ ಸೇರಿದೆ. ರೇಪಿಡ್ ಎಂದರೆ ಲ್ಯಾಟಿನ್ನಲ್ಲಿ ಹುಚ್ಚು ಎಂಬ ಅರ್ಥವಿದೆ. ಇದೇ ಕಾರಣದಿಂದಾಗಿ ಈ ರೋಗಕ್ಕೆ ರೇಬೀಸ್ ಎಂಬ ಹೆಸರು ಬಂದಿದೆ.
ಸೋಂಕಿತ ಪ್ರಾಣಿಗಳಲ್ಲಿ ಬೇರೆ ಪ್ರಾಣಿಗಳಿಗೆ ಕಚ್ಚಿದಾಗ ಅಥವಾ ಸೋಂಕಿತ ಪ್ರಾಣಿಗಳ ಜೊಲ್ಲು ಬೇರೊಂದು ಪ್ರಾಣಿಗೆ ಯಾವುದಾದರೂ ರೀತಿ ರವಾನೆಯಾದಾಗ ಈ ಕಾಯಿಲೆ ಹರಡುತ್ತದೆ. ಮನುಷ್ಯನಿಗೆ ಸಾಮಾನ್ಯವಾಗಿ ನಾಯಿಯಿಂದ ಈ ಸೋಂಕು ಹರಡುತ್ತದೆ.
ನಾಯಿಗಳು ಮಾತ್ರ ಅಲ್ಲ..
ನಾಯಿಗಳು ರೇಬೀಸ್ ಅನ್ನು ಹರಡುತ್ತವೆ ಎಂಬುದು ಸಾಮಾನ್ಯವಾಗಿ ಮೇಲ್ನೋಟಕ್ಕೆ ಗೊತ್ತಾಗುತ್ತದೆ. ವಿಶ್ವದಲ್ಲಿ ಕಾಣಿಸಿಕೊಳ್ಳುವ ರೇಬೀಸ್ನ ಶೇ.95ರಷ್ಟು ರೋಗ ನಾಯಿಗಳಿಂದಲೇ ಹರಡುತ್ತದೆ. ಆದರೆ, ಈ ವೈರಸ್ ಬಾವಲಿಗಳು, ರಕೂನ್ (ಅಳಿಲು ಜಾತಿಯ ಸಸ್ತನಿ), ಸ್ಕಂಕ್ಸ್ (ಸಸ್ತನಿಯ ಪ್ರಬೇಧ), ನರಿಗಳು, ಕೊಯೊಟ್ಸ್ (ನರಿ ಜಾತಿಯ ಪ್ರಾಣಿ)ಗಳಲ್ಲೂ ಕಂಡು ಬರುತ್ತದೆ.
ಈ ಪ್ರಾಣಿಗಳು ವೈರಸ್ ಅನ್ನು ಹೊಂದಿದ್ದರೆ, ಆ ಪ್ರಾಣಿಗಳಿಂದ ಬೇರೆ ಪ್ರಾಣಿಗಳಿಗೂ ಹರಡುತ್ತದೆ. ಮೊದಲು ಹೇಳಿದಂತೆ ಭೂಮಿಯ ಮೇಲೆ 95ರಷ್ಟು ರೇಬೀಸ್ ರೋಗ ಹರಡುತ್ತದೆ. ಆದರೆ, ಈ ಪ್ರಾಣಿಗಳು ರೇಬೀಸ್ ರೋಗದ ಬಲಿಪಶುಗಳೇ ವಿನಃ, ರೇಬೀಸ್ ರೋಗವನ್ನು ಹುಟ್ಟು ಹಾಕುವ ಪ್ರಾಣಿಗಳಲ್ಲ ಎಂದು ಗಮನಿಸಬೇಕಿದೆ.
ಸೋಂಕಿತ ಪ್ರಾಣಿ ಕಚ್ಚಿದ ನಂತರ, ಆ ಭಾಗವನ್ನು ಸಾಬೂನಿನಿಂದ ತೊಳೆದರೆ ಬಹುಪಾಲು ಪ್ರಾಣಾಪಾಯದಿಂದ ಪಾರಾಗಬಹುದಾಗಿದೆ. ನಂತರ ವ್ಯಾಕ್ಸಿನೇಷನ್ ಅತ್ಯಂತ ಮುಖ್ಯವಾಗಿರುತ್ತದೆ. ನಾಯಿಗಳನ್ನು ಸಾಕುವವರೂ ತಮ್ಮ ನಾಯಿಗಳಿಗೆ ರೇಬೀಸ್ ಲಸಿಕೆ ಹಾಕಿಸಿದರೆ ರೋಗದಿಂದ ಪಾರಾಗಬಹುದು.
ರೇಬೀಸ್ ಲಕ್ಷಣಗಳು..
ಸೋಂಕಿತ ಪ್ರಾಣಿ ಕಚ್ಚಿದರೆ ಆತನಿಗೆ ಜ್ವರ ಬರಬಹುದು. ಒಂದರಿಂದ ಮೂರು ತಿಂಗಳವರೆಗೆ ಈ ವೈರಸ್ ದೇಹದಲ್ಲಿ ಸುಪ್ತವಾಗಿರುತ್ತದೆ. ಸೋಂಕಿತ ಪ್ರಾಣಿ ಕಚ್ಚಿದ ಸ್ಥಳದಲ್ಲಿ ನೋವು ಇರುವ ಸಾಧ್ಯತೆ ಇರುತ್ತದೆ. ಮೆದುಳಿಗೆ ಈ ವೈರಸ್ ಹಬ್ಬಿದರೆ ತಕ್ಷಣ ದೇಹದಲ್ಲಿ ಗಂಭೀರ ಲಕ್ಷಣಗಳು ಗೋಚರಿಸಿ, ವ್ಯಕ್ತಿ ಮಾನಸಿಕವಾಗಿ ದುರ್ಬಲನಾಗುತ್ತಾನೆ. ಅರ್ಥಾತ್ ಹುಚ್ಚು ಹಿಡಿದ ರೀತಿ ವರ್ತಿಸುತ್ತಾನೆ. ಇನ್ನೂ ಹಲವು ಲಕ್ಷಣಗಳೆಂದರೆ..
- ಗಾಬರಿಪಡುವಿಕೆ
- ಅತಿಯಾಗಿ ಜೊಲ್ಲು ಸುರಿಸುವುದು
- ಆತುರತೆ
- ನೀರನ್ನು ನುಂಗಲು ತೊಂದರೆ ಅಥವಾ ನೀರಿನ ಭಯ
- ಜ್ವರ
- ಹೆಚ್ಚು ಚಿಂತಿಸುವುದು
- ಗೊಂದಲ
- ವಾಂತಿ ಮತ್ತು ವಾಕರಿಕೆ
- ತಲೆನೋವು
- ದುಃಸ್ವಪ್ನಗಳು
- ನಿದ್ರಾಹೀನತೆ
- ಭಾಗಶಃ ಪಾರ್ಶ್ವವಾಯು
ತೆಗೆದುಕೊಳ್ಳಬೇಕಾದ ಕ್ರಮಗಳು
- ಕಚ್ಚಿದ ಜಾಗವನ್ನು ಶುದ್ಧ ನೀರು, ಸಾಬೂನಿನಿಂದ ಸ್ವಚ್ಛಗೊಳಿಸಬೇಕು
- ವೈದ್ಯರಿಂದ ಚುಚ್ಚುಮದ್ದು ಪಡೆಯಬೇಕು.
- ಕಚ್ಚಿದ ಪ್ರಾಣಿಗೆ ಸೋಂಕಿದೆಯೇ ಎಂಬ ಬಗ್ಗೆ ಖಚಿತಪಡಿಸಿಕೊಳ್ಳಬೇಕು
- ರೇಬೀಸ್ ಭಯದಿಂದ ವಿನಾಕಾರಣ ಚುಚ್ಚುಮದ್ದು ತೆಗೆದುಕೊಳ್ಳಬಾರದು
ಈ ಎಲ್ಲಾ ಕ್ರಮಗಳಿಂದ ರೇಬೀಸ್ ರೋಗವನ್ನು ತಡೆಯಬಹುದಾಗಿದೆ.