ಸ್ಯಾನ್ ಫ್ರಾನ್ಸಿಸ್ಕೋ(ಅಮೆರಿಕ): ಸ್ಮಾರ್ಟ್‌ಫೋನ್ ಅಥವಾ ಲ್ಯಾಪ್‌ಟಾಪ್ ಕ್ಯಾಮರಾದ ಮೂಲಕ ವ್ಯಕ್ತಿಯೊಬ್ಬರ ಮುಖವನ್ನು ನೋಡಿ ರಕ್ತದೊತ್ತಡವನ್ನು ಲೆಕ್ಕಹಾಕಬಹುದಾದ ಸಾಧನವನ್ನು ಅನ್ನು ಅಭಿವೃದ್ಧಿಪಡಿಸಿರುವುದಾಗಿ Binah.ai ಅಪ್ಲಿಕೇಷನ್ ಘೋಷಿಸಿಕೊಂಡಿದೆ.
Binah.ai ಅಪ್ಲಿಕೇಷನ್ ಆರೋಗ್ಯಕ್ಕೆ ಸಂಬಂಧಿಸಿದ ಅಪ್ಲಿಕೇಷನ್ ಅಗಿದ್ದು, ಈ ಅಪ್ಲಿಕೇಷನ್ನಲ್ಲಿ ಕೆಲವೊಂದು ಸಾಧನಗಳಿದ್ದು, ಇದು ಆರೋಗ್ಯ ಸೇವೆಗಳನ್ನು ಆನ್ಲೈನ್ ಮೂಲಕ ಒದಗಿಸುತ್ತಿತ್ತು. ಪ್ರಸ್ತುತ ಈ ಆರೋಗ್ಯ ಸೇವೆಗಳ ಪಟ್ಟಿಗೆ ರಕ್ತದೊತ್ತಡ ಕಂಡುಹಿಡಿಯುವ ತಂತ್ರಜ್ಞಾನವುಳ್ಳ ಸಾಧನವೊಂದು ಸೇರ್ಪಡೆಯಾಗಿದೆ.
ಈಗ ಸದ್ಯಕ್ಕೆ Binah.ai ಆ್ಯಪ್ನೊಂದಿಗೆ ಪಾಲುದಾರ ವ್ಯವಹಾರ ಮಾಡುವವರು ಮಾತ್ರವೇ ಈ ಆ್ಯಪ್ ಅನ್ನು ಬಳಸಬಹುದಾಗಿದೆ. ಅಂದರೆ ನೀವು ಕೆಲವೊಂದು ನಿಯಮಗಳು ಅಥವಾ ಷರತ್ತುಗಳ ಆಧಾರದ ಮೇಲೆ ಹಣ ಪಾವತಿಸಿದರೆ ಮಾತ್ರ ಈ ಆ್ಯಪ್ ಅನ್ನು ಡೌನ್ಲೋಡ್ ಮಾಡಲು ಮತ್ತು ಬಳಸಿಕೊಳ್ಳಲು ಅವಕಾಶವಿರುತ್ತದೆ. ಡೌನ್ಲೋಡ್ ಮಾಡಿಕೊಂಡ ಬಳಿಕ ನಿಮಗೆ ಎಲ್ಲಾ ಸಲಹೆಗಳನ್ನು ನೀಡಲಾಗುತ್ತದೆ.
ಕೈಗಳಿಗೆ ಬೆಲ್ಟ್ ರೀತಿಯ ಪಟ್ಟಿ ಕಟ್ಟಿಕೊಳ್ಳದೇ ರಕ್ತದೊತ್ತಡವನ್ನು ಪತ್ತೆ ಹಚ್ಚುವುದು ಹೃದಯರೋಗ ತಜ್ಞರು ಮತ್ತು ಟೆಕ್ ಕಂಪನಿಗಳಿಗೆ ಸವಾಲಾಗಿದ್ದು, ಈ ಸವಾಲನ್ನು ಈ ಅಪ್ಲಿಕೇಷನ್ ಪೂರೈಸಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.
ಈ ಸಾಧನದಿಂದ ಕೈಗಳಿಗೆ ಬೆಲ್ಟ್ ರೀತಿಯ ಪಟ್ಟಿ ಕಟ್ಟಿಕೊಳ್ಳುವ ಅಗತ್ಯವಿಲ್ಲ ಎಂದು Binah.ai ಆ್ಯಪ್ನ ಸಿಇಒ ಮತ್ತು ಸಹ-ಸಂಸ್ಥಾಪಕ ಡೇವಿಡ್ ಮಾಮನ್ ಹೇಳಿದ್ದಾರೆ.
ಆ್ಯಪ್ ಹೇಗೆ ಕೆಲಸ ಮಾಡುತ್ತದೆ?: ಈ ಆ್ಯಪ್ನಲ್ಲಿ ಪಿಪಿಜಿ ಅಥವಾ ಫೋಟೋಪ್ಲೆಥಿಸ್ಮೋಗ್ರಫಿ (PPG- Photoplethysmography) ತಂತ್ರವನ್ನು ಅನುಸರಿಸಲಾಗಿದೆ. ಫೋಟೋಪ್ಲೆಥಿಸ್ಮೋಗ್ರಫಿ ಎಂದರೆ ಮುಖದ ಮೇಲೆ ಬೀಳುವ ಬೆಳಕಿನ ಕಿರಣಗಳ ಮೂಲಕ ರಕ್ತದ ಪರಿಚಲನೆಯಲ್ಲಿ ಆಗುವ ಬದಲಾವಣೆಯನ್ನು ಗ್ರಹಿಸುವುದಾಗಿದೆ.
ಅಂದರೆ ಸ್ಮಾರ್ಟ್‌ಫೋನ್ ಅಥವಾ ಲ್ಯಾಪ್‌ಟಾಪ್ ಕ್ಯಾಮರಾದ ಮೂಲಕ ವ್ಯಕ್ತಿಯ ಮುಖದ ಮೇಲೆ ರಕ್ತದ ಪರಿಚಲನೆ ಹೇಗಿದೆ ಎಂದು ತಿಳಿದುಕೊಂಡು, ಆತನ ರಕ್ತದೊತ್ತಡ ಹೇಗಿದೆ ಎಂದು ತಿಳಿದುಕೊಳ್ಳಬಹುದಾಗಿದೆ.
ಇದನ್ನೂ ಓದಿ: Eating Disorders : ನಿಮ್ಮಲ್ಲಿ ತಿನ್ನುವ ಅಭ್ಯಾಸ ಗೀಳಾಗಿದೆಯೇ?.. ಈ ಚಾಟ್ಬೋಟ್ ನಿಮ್ಮ ನೆರವಿಗೆ ಬರಲಿದೆ!