ನ್ಯೂಯಾರ್ಕ್: 13 ವರ್ಷದೊಳಗಿನ ಮಕ್ಕಳಿಗಾಗಿ ಅಭಿವೃದ್ಧಿ ಪಡಿಸಿದ್ದ 'ಕಿಡ್ಸ್ ಇನ್ಸ್ಟಾಗ್ರಾಮ್' ಅನ್ನು ಸಾಮಾಜಿಕ ಜಾಲತಾಣ ಸಂಸ್ಥೆ ಫೇಸ್‌ಬುಕ್ ತಡೆ ಹಿಡಿದಿದೆ. ಬಳಕೆದಾರರ ದುರ್ಬಳಕೆಯ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಮಕ್ಕಳ ಆವೃತ್ತಿಯನ್ನು ಎಫ್‌ಬಿ ಸ್ಥಗಿತಗೊಳಿಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಇನ್ಸ್ಟಾಗ್ರಾಮ್ ಮುಖ್ಯಸ್ಥ ಆಡಮ್ ಮೊಸ್ಸೆರಿ, ಮಕ್ಕಳಿಗಾಗಿ ಇನ್ಸ್ಟಾಗ್ರಾಮ್ ಆವೃತ್ತಿಯನ್ನು ಸುರಕ್ಷಿತವಾಗಿ ವಿನ್ಯಾಸಗೊಳಿಸಿರುವುದು ಒಳ್ಳೆಯದು ಎಂದು ದೃಢವಾಗಿ ನಂಬುತ್ತೇನೆ. ಆದರೆ ನಾವು ಪೋಷಕರು ಮತ್ತು ಸಂಶೋಧಕರು ಹಾಗೂ ಸುರಕ್ಷತೆ ಬಗ್ಗೆ ತಜ್ಞರೊಂದಿಗೆ ಮಾತನಾಡಲು ಸಮಯವನ್ನು ತೆಗೆದುಕೊಳ್ಳುತ್ತೇವೆ. ಇದರಲ್ಲಿ ಹೇಗೆ ಮುಂದುವರೆಯಬೇಕು ಎಂಬುದರ ಕುರಿತು ಹೆಚ್ಚಿನ ಒಮ್ಮತವನ್ನು ಪಡೆಯಲು ಬಯಸುತ್ತೇವೆ ಎಂದು ಹೇಳಿದ್ದಾರೆ.
ಮಕ್ಕಳ ಆವೃತ್ತಿಯ ಇನ್ಸ್ಟಾಗ್ರಾಮ್ ಅನ್ನು ಕೆಲವು ಹದಿಹರೆಯದ ಬಾಲಕಿಯರು ಬಳಸುವುದರಿಂದ ಮಾನಸಿಕ ಆರೋಗ್ಯ ಸಮಸ್ಯೆಗೆ ಒಳಗಾಗುತ್ತಿರುವುದನ್ನು ದಿ ವಾಲ್ ಸ್ಟ್ರೀಟ್ ಜರ್ನಲ್‌ನ ತನಿಖಾ ಸರಣಿಯಿಂದ ಬಹಿರಂಗವಾಗಿತ್ತು. ಇದು ಆತಂಕಕ್ಕೂ ಕಾರಣವಾಗಿ ಆ್ಯಪ್‌ಗೆ ವ್ಯಾಪಕ ವಿರೋಧವೂ ವ್ಯಕ್ತವಾಗಿತ್ತು.
ಕಳೆದ ಮಾರ್ಚ್‌ನಲ್ಲಿ ಫೇಸ್‌ಬುಕ್ ತನ್ನ ಅಂಗ ಸಂಸ್ಥೆಯಾದ ಇನ್ಸ್ಟಾಗ್ರಾಮ್‌ನ ಕಿಡ್ಸ್ ಆವೃತ್ತಿ ಅಭಿವೃದ್ಧಿ ಪಡಿಸಿರುವುದಾಗಿ ಘೋಷಿಸಿತ್ತು. ಜೊತೆಗೆ ಇದು ಪೋಷಕ ನಿಯಂತ್ರಿತ ಅನುಭವವನ್ನು ಅನ್ವೇಷಿಸುತ್ತಿದೆ ಎಂದು ಹೇಳಿತ್ತು. ಎರಡು ತಿಂಗಳ ನಂತರ 44 ಅಟಾರ್ನಿ ಜನರಲ್‌ಗಳ ತಂಡವೊಂದು ಫೇಸ್‌ಬುಕ್ ಸಿಇಒ ಮಾರ್ಕ್ ಜುಕರ್‌ಬರ್ಗ್‌ಗೆ ಪತ್ರ ಬರೆದು, ಮಕ್ಕಳ ಯೋಗಕ್ಷೇಮವನ್ನು ಉಲ್ಲೇಖಿಸಿ ಈ ಯೋಜನೆಯನ್ನು ಕೈಬಿಡುವಂತೆ ಒತ್ತಾಯಿಸಿತು.
ಸೈಬರ್ ಬೆದರಿಕೆಗಳ ಹೆಚ್ಚಳ, ಆನ್‌ಲೈನ್‌ನಲ್ಲಿ ಈ ಆ್ಯಪ್ ದುರ್ಬಳಕೆ ಹೆಚ್ಚಾಗುಳ ಸಾಧ್ಯತೆ ಇದೆ. 2017 ರಲ್ಲಿ ಮೆಸೆಂಜರ್ ಕಿಡ್ಸ್ ಆ್ಯಪ್ ಪ್ರಾರಂಭಿಸಿದಾಗಲೂ ಫೇಸ್‌ಬುಕ್ ಇಂತಹದ್ದೇ ಟೀಕೆಗಳಿಗೆ ಗುರಿಯಾಗಿತ್ತು. ಇದು ಪೋಷಕರಿಂದ ಅನುಮೋದಿಸಲ್ಪಟ್ಟ, ಮಕ್ಕಳು ಕುಟುಂಬ ಸದಸ್ಯರು ಹಾಗೂ ಸ್ನೇಹಿತರೊಂದಿಗೆ ಚಾಟ್ ಮಾಡಲು ಒಂದು ಮಾರ್ಗವಾಗಿದೆ.
ಇದನ್ನೂ ಓದಿ: ಇನ್ಸ್ಟಾಗ್ರಾಮ್ನಲ್ಲಿ ಪರಿಚಯವಾದ ಅಪ್ರಾಪ್ತೆ ಮೇಲೆ ಅತ್ಯಾಚಾರ: ಆರೋಪಿ ವಿದೇಶಕ್ಕೆ ಪರಾರಿ