ಉತ್ತರ ಪ್ರದೇಶ: ಕಾರು-ಬೈಕ್-ಸೈಕಲ್ ನಡುವೆ ಡಿಕ್ಕಿ ಸಂಭವಿಸಿ ಐವರು ಸಾವನ್ನಪ್ಪಿರುವ ಘಟನೆ ಉತ್ತರಪ್ರದೇಶದ ದಿಯೋರಿಯಾದಲ್ಲಿ ನಡೆದಿದೆ.
ದಿಯೋರಿಯಾದ ಸಲೆಂಪುರ್-ಲಾರ್ ರಸ್ತೆಯಲ್ಲಿ ತಡರಾತ್ರಿ ಅಪಘಾತ ನಡೆದಿದ್ದು, ಮತ್ತೋರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾನೆ.
ಪೊಲೀಸರು ಘಟನಾ ಸ್ಥಳಕ್ಕೆ ತಲುಪಿದಾಗ ಆರು ಜನರು ಗಂಭೀರ ಗಾಯಗಳೊಂದಿಗೆ ರಸ್ತೆ ಬದಿ ಬಿದ್ದಿದ್ದರು. ವಾಹನಗಳು ನುಜ್ಜುಗುಜ್ಜಾಗಿದ್ದವು. ಎಲ್ಲರನ್ನೂ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಇವರದಲ್ಲಿ ಐವರು ಅಷ್ಟರಲ್ಲೇ ಮೃತಪಟ್ಟಿದ್ದರು. ತೀವ್ರವಾಗಿ ಗಾಯಗೊಂಡಿರುವ ವ್ಯಕ್ತಿಗೆ ಸದ್ಯ ಚಿಕಿತ್ಸೆ ನೀಡಲಾಗುತ್ತಿದೆ ಎಂದು ದಿಯೋರಿಯಾ ಪೊಲೀಸ್ ಠಾಣಾಧಿಕಾರಿ ಟಿ.ಜೆ.ಸಿಂಗ್ ತಿಳಿಸಿದ್ದಾರೆ.
ಮೃತರ ಪೈಕಿ ರಾಜನ್ ಸಿಂಗ್, ಪ್ರಮೋದ್ ಯಾದವ್ ಹಾಗೂ ಪ್ರಿನ್ಸ್ ತಿವಾರಿ ಎಂಬ ಮೂವರನ್ನು ಮಾತ್ರ ಗುರುತಿಸಲಾಗಿದೆ. ಮತ್ತಿಬ್ಬರ ಬಗ್ಗೆ ಮಾಹಿತಿಯಿಲ್ಲ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ ಎಂದು ಸಿಂಗ್ ಹೇಳಿದ್ದಾರೆ.