ಕೊರೊನಾ ವೈರಸ್ ಹರಡದಂತೆ ದೇಶಾದ್ಯಂತ ಲಾಕ್ಡೌನ್ ವಿಧಿಸಲಾಗಿರುವುದರಿಂದ ಕುಂಟುಂಬದ ಎಲ್ಲ ಸದಸ್ಯರೂ ತಮ್ಮ ತಮ್ಮ ಮನೆಗಳಲ್ಲೇ ದಿನದ ಪೂರ್ಣ ಕಾಲ ಕಳೆಯುವಂತಾಗಿದೆ. ಬಹುಶಃ ಎಷ್ಟೋ ವರ್ಷಗಳ ನಂತರ ಕುಟುಂಬದವರೆಲ್ಲ ಒಟ್ಟಾಗಿ ಕಾಲ ಕಳೆಯುವ ಸುಸಂದರ್ಭ ಒದಗಿ ಬಂದಿದೆ ಎನ್ನಬಹುದು. ತಿಳುವಳಿಕೆ ಇದ್ದ ಪುರುಷರು ತಮ್ಮ ಮಡದಿ, ಮಕ್ಕಳೊಂದಿಗೆ ಚೆನ್ನಾಗಿ ಬೆರೆತು ಸಿಕ್ಕ ಸಮಯದ ಸಂಪೂರ್ಣ ಉಪಯೋಗ ಪಡೆದುಕೊಳ್ಳುತ್ತಿದ್ದಾರೆ. ಆದರೆ ಎಲ್ಲ ಮನೆಗಳಲ್ಲಿ ಇಂಥ ವಾತಾವರಣ ಇಲ್ಲ ಎಂಬುದು ಸತ್ಯ. ಲಾಕ್ಡೌನ್ನ ಈ ಅವಧಿಯಲ್ಲಿ ಅದೆಷ್ಟೋ ಮನೆಗಳಲ್ಲಿನ ಮಹಿಳೆಯರು ಅನುಭವಿಸುತ್ತಿರುವ ಕೌಟುಂಬಿಕ ದೌರ್ಜನ್ಯ ಪ್ರಕರಣಗಳು ಆಗಾಗ ಬೆಳಕಿಗೆ ಬರುತ್ತಿವೆ.
ಫ್ರಾನ್ಸ್ ದೇಶದಲ್ಲಿ ಶೇ.30 ರಷ್ಟು ಹೆಚ್ಚಾದ ಕೌಟುಂಬಿಕ ದೌರ್ಜನ್ಯ ಪ್ರಕರಣಗಳು
ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ಅಂಕಿ-ಅಂಶಗಳ ಪ್ರಕಾರ, ಫ್ರಾನ್ಸ್ ದೇಶದಲ್ಲಿ ಮಾ.17 ರಂದು ಲಾಕ್ಡೌನ್ ಘೋಷಣೆಯಾದ ನಂತರ ಕೌಟುಂಬಿಕ ದೌರ್ಜನ್ಯ ಪ್ರಕರಣಗಳ ಸಂಖ್ಯೆಯಲ್ಲಿ ಶೇ.30 ರಷ್ಟು ಹೆಚ್ಚಳವಾಗಿದೆಯಂತೆ. ಸ್ಪೇನ್ನ ಪರಿಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ. ಈ ದೇಶದಲ್ಲಿ ಲಾಕ್ಡೌನ್ ವಿಧಿಸಿದ ನಂತರ ಮೊದಲ ಎರಡು ವಾರಗಳಲ್ಲಿ, ತುರ್ತು ಸಹಾಯವಾಣಿಗೆ ಬರುವ ಕರೆಗಳ ಸಂಖ್ಯೆ ಶೇ.18 ರಷ್ಟು ಹೆಚ್ಚಾಗಿತ್ತು. ಹಾಗೆಯೇ ಸಿಂಗಾಪುರದಲ್ಲಿ ನೆರವಿನ ಮೊರೆ ಶೇ.30 ರಷ್ಟು ಹೆಚ್ಚಾಗಿತ್ತು.
ಭಾರತದಲ್ಲಿ ಮಹಿಳಾ ದೌರ್ಜನ್ಯದ ಕರಾಳರೂಪ ತೆರೆದಿಡುವ ಅಂಕಿ ಸಂಖ್ಯೆಗಳು
- ರಾಷ್ಟ್ರೀಯ ಆರೋಗ್ಯ ಮತ್ತು ಕುಟುಂಬ ಸಮೀಕ್ಷೆಯ ಪ್ರಕಾರ- ಭಾರತದ ಶೇ.30 ರಷ್ಟು ಮಹಿಳೆಯರು ತಮ್ಮ ಬಾಲ್ಯದಿಂದಲೇ ದೈಹಿಕ ಹಿಂಸೆ ಅನುಭವಿಸುತ್ತಿದ್ದಾರೆ. ಮದುವೆಯಾದ ಮೂವರಲ್ಲಿ ಓರ್ವ ಹೆಣ್ಣು ಮಗಳು ತನ್ನ ಸಂಗಾತಿಯಿಂದ ಒಂದಿಲ್ಲೊಂದು ರೀತಿಯ ದೈಹಿಕ, ಮಾನಸಿಕ ಅಥವಾ ಲೈಂಗಿಕ ದೌರ್ಜನ್ಯಕ್ಕೆ ಗುರಿಯಾಗುತ್ತಿದ್ದಾಳೆ.
- ಶೇ.30 ರಷ್ಟು ಹೆಣ್ಣು ಮಕ್ಕಳು ತನ್ನ ಆಪ್ತ ಸಂಗಾತಿಯಿಂದಲೇ ದೈಹಿಕ, ಮಾನಸಿಕ ಅಥವಾ ಲೈಂಗಿಕ ದೌರ್ಜನ್ಯಕ್ಕೆ ಗುರಿಯಾಗುತ್ತಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಅಂಕಿ ಅಂಶಗಳು ಹೇಳುತ್ತವೆ.
- ದೌರ್ಜನ್ಯಕ್ಕೆ ಒಳಗಾದವರಲ್ಲಿ ಕೇವಲ ಶೇ.14 ರಷ್ಟು ಜನ ಮಾತ್ರ ದೂರು ನೀಡಲು ಮುಂದೆ ಬಂದಿದ್ದಾರೆ ಎಂದು ರಾಷ್ಟ್ರೀಯ ಆರೋಗ್ಯ ಮತ್ತು ಕುಟುಂಬ ಸಮೀಕ್ಷೆಯಲ್ಲಿ ಹೇಳಲಾಗಿದೆ.
ಲಾಕ್ಡೌನ್ನಲ್ಲಿ ವಿಶ್ವಾದ್ಯಂತ ಕೌಟುಂಬಿಕ ದೌರ್ಜನ್ಯ ಪ್ರಕರಣ ಹೆಚ್ಚಳ
ಕುಟುಂಬದ ಎಲ್ಲ ಸದಸ್ಯರು ಲಾಕ್ಡೌನ್ ಕಾರಣದಿಂದ ಮನೆಯಲ್ಲಿರುವಾಗ ಯಾವುದೋ ಚಿಕ್ಕ ಪುಟ್ಟ ಕಾರಣಕ್ಕೆ ಆರಂಭವಾದ ಜಗಳ ವಿಕೋಪಕ್ಕೆ ಹೋಗುತ್ತವೆ. ನಿರುದ್ಯೋಗ, ಅಭದ್ರತೆ, ಸಂಪರ್ಕ ಕೊರತೆ ಮತ್ತು ಮಕ್ಕಳ ಭವಿಷ್ಯದ ಚಿಂತೆಯ ಕಾರಣಗಳಿಂದ ಅತಿ ಹೆಚ್ಚು ಜಗಳಗಳು ನಡೆಯುತ್ತಿದ್ದು, ಈ ಜಗಳಗಳು ಮಾನಸಿಕ ಹಾಗೂ ದೈಹಿಕ ಹಿಂಸೆಯಲ್ಲಿ ಕೊನೆಯಾಗುತ್ತಿವೆ. ಆಗಾಗ ಜಗಳವಾಡುವ ದಂಪತಿಗಳ ಕುಟುಂಬಗಳಲ್ಲಿ ಜಗಳಗಳು ಮತ್ತೂ ಹೆಚ್ಚಾಗಿವೆ.
ಮಾ.19 ರಂದು ಫ್ರಾನ್ಸ್ನ ವೆಲೆನ್ಸಿಯಾದಲ್ಲಿ ವ್ಯಕ್ತಿಯೊಬ್ಬ ತನ್ನ ಮಕ್ಕಳೆದುರಿಗೇ ಪತ್ನಿಯನ್ನು ಕೊಲೆಗೈದ ಘಟನೆ ಜರುಗಿದೆ. ಲಾಕ್ಡೌನ್ ಅವಧಿಯಲ್ಲಿ ಮಹಿಳೆಯರ ಮೇಲೆ ಹೆಚ್ಚಾಗುತ್ತಿರುವ ದೌರ್ಜನ್ಯಕ್ಕೆ ಈ ಘಟನೆ ಮೊದಲ ಸಾಕ್ಷಿಯಾಗಿತ್ತು.
ದೌರ್ಜನ್ಯ ತಡೆಗಟ್ಟಲಾಗದಿರುವುದಕ್ಕೆ ಕಾರಣಗಳು:
- ದೌರ್ಜನ್ಯ ತಡೆ ಸಹಾಯವಾಣಿಗಳು ಕೆಲಸ ಮಾಡದಿರುವುದು
- ಆಶ್ರಯ ಕೇಂದ್ರಗಳು ಬಂದ್ ಆಗಿರುವುದು ಅಥವಾ ಹೊಸ ಸದಸ್ಯರನ್ನು ಒಳಗೆ ತೆಗೆದುಕೊಳ್ಳದಿರುವುದು
- ಪೊಲೀಸ್ ಹಾಗೂ ಇತರ ರಕ್ಷಣಾ ಇಲಾಖೆಗಳು ಕೋವಿಡ್-19 ಹೋರಾಟದಲ್ಲಿ ತೊಡಗಿಸಿಕೊಂಡಿರುವುದರಿಂದ ಕೌಟುಂಬಿಕ ದೌರ್ಜನ್ಯ ದೂರುಗಳ ಕಡೆಗೆ ಗಮನಹರಿಸುವುದು ಕಷ್ಟಕರವಾಗಿರುವುದು.
- ಯಾವ ರೀತಿ ಸಹಾಯ ಪಡೆಯುವುದು ಅಥವಾ ಎಲ್ಲಿಗೆ ಸಂಪರ್ಕಿಸುವುದು ಎಂಬುದು ಸಂತ್ರಸ್ತರಿಗೆ ತಿಳಿಯದಿರುವುದು
- ದೌರ್ಜನ್ಯವೆಸಗುವ ಕುಟುಂಬ ಸದಸ್ಯ ಮನೆಯಲ್ಲೇ ಇರುವುದರಿಂದ ಸಹಾಯವಾಣಿಗೆ ಕರೆ ಮಾಡುವುದೂ ಸಾಧ್ಯವಾಗದಿರುವುದು
ದೌರ್ಜನ್ಯ ತಡೆಗೆ ಜಾಗತಿಕ ಹೋರಾಟ
"ಕೊರೊನಾ ಹೋರಾಟದಲ್ಲಿ ನಿರತ ರಾಷ್ಟ್ರಗಳು ತಮ್ಮ ದೇಶದ ಮಹಿಳೆಯರ ಸುರಕ್ಷತೆಗೆ ಮೊದಲ ಆದ್ಯತೆ ನೀಡಲಿ." ಎಂದು ವಿಶ್ವಸಂಸ್ಥೆಯ ಮುಖ್ಯಸ್ಥ ಅಂಟೋನಿಯೊ ಗುಟೆರಸ್ ಏಪ್ರಿಲ್ 12, 2020 ರಂದು ಬಹಿರಂಗ ಕರೆ ನೀಡಿದ್ದರು. ಮಹಿಳೆಯರ ಮೇಲೆ ದೌರ್ಜನ್ಯವೆಸಗುವವರನ್ನು ಶಿಕ್ಷೆಗೊಳಪಡಿಸಿ ಜೈಲಿಗಟ್ಟುವಂತೆ ಅವರು ಸೂಚಿಸಿದ್ದರು.
ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ವಿವಿಧ ರಾಷ್ಟ್ರಗಳು ಕೈಗೊಂಡ ಕ್ರಮಗಳು ಹೀಗಿವೆ:
ಸ್ಪೇನ್: ಸಂತ್ರಸ್ತರಿಗೆ ಆಶ್ರಯ ನೀಡಲು ಹೊಟೇಲ್ ಕೋಣೆಗಳನ್ನು ಬಳಸಲು ಸ್ಪೇನ್ ಮುಂದಾಗಿದೆ. ದೌರ್ಜನ್ಯದ ವಿರುದ್ಧ ದೂರು ನೀಡಲು ಲಾಕ್ಡೌನ್ ಉಲ್ಲಂಘಿಸಿ ಮನೆಯಿಂದ ಹೊರಬರುವ ಮಹಿಳೆಯರಿಗೆ ಯಾವುದೇ ರೀತಿಯ ದಂಡ ಅಥವಾ ಶಿಕ್ಷೆ ನೀಡದಿರಲು ಇಲ್ಲಿನ ಸರ್ಕಾರ ತೀರ್ಮಾನಿಸಿದೆ.
ಫ್ರಾನ್ಸ್: ಇಲ್ಲಿಯೂ ಸಂತ್ರಸ್ತ ಮಹಿಳೆಯರಿಗಾಗಿ ಹೊಟೇಲ್ ಕೋಣೆಗಳನ್ನು ಕಾಯ್ದಿರಿಸಲಾಗಿದೆ. ಶ್ರವಣ ದೋಷವುಳ್ಳವರಿಗಾಗಿ ಎಸ್ಸೆಮ್ಮೆಸ್ ಮೂಲಕ ದೂರು ದಾಖಲಿಸುವ ವ್ಯವಸ್ಥೆ ಆರಂಭಿಸಲಾಗಿದೆ. ಶಾಪಿಂಗ್ ಕೇಂದ್ರಗಳ ಬಳಿ ಸಹಾಯ ಕೇಂದ್ರಗಳನ್ನು ಆರಂಭಿಸಲಾಗಿದೆ.
ಕೆನಡಾ: ಕೌಟುಂಬಿಕ ಹಾಗೂ ಲಿಂಗಾಧಾರಿತ ದೌರ್ಜನ್ಯಕ್ಕೊಳಗಾಗುವ ಸಂತ್ರಸ್ತರಿಗೆ ನೆರವಾಗಲು 50 ಮಿಲಿಯನ್ ಡಾಲರ್ ಹಣ ಮೀಸಲಿಡಲಾಗಿದೆ ಹಾಗೂ ಆಶ್ರಯ ಕೇಂದ್ರಗಳನ್ನು ನಿರಂತರವಾಗಿ ತೆರೆದಿರುವಂತೆ ಸೂಚಿಸಲಾಗಿದೆ.
ಗ್ರೀಸ್: ಲಾಕ್ಡೌನ್ನಿಂದ ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಪೊಲೀಸರು ಅಭಿಯಾನ ಆರಂಭಿಸಿದ್ದಾರೆ.
ಭಾರತದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಪರಿಹಾರಾತ್ಮಕ ಕ್ರಮಗಳು
ಇಂಟರನ್ಯಾಷನಲ್ ಫೌಂಡೇಶನ್ ಫಾರ್ ಕ್ರೈಂ ಪ್ರಿವೆನ್ಷನ್ ಆ್ಯಂಡ್ ವಿಕ್ಟಿಮ್ ಕೇರ್ (PCVC) ಹೆಸರಿನ ಸಂಸ್ಥೆಯು ಭಾರತದಲ್ಲಿ ಕೆಲಸ ಮಾಡುತ್ತಿದೆ. ಈ ಸಂಸ್ಥೆಯು 24 ಗಂಟೆ ಕಾರ್ಯನಿರ್ಹಿಸುವ ಧ್ವನಿ ಹೆಸರಿನ ಸಹಾಯವಾಣಿಯನ್ನು ನಡೆಸುತ್ತಿದೆ. ಜೊತೆಗೆ ನೇರವಾಗಿ ವಾಟ್ಸಾಪ್, ವೆಬ್ಸೈಟ್ ಹಾಗೂ ಇಮೇಲ್ ಐಡಿಗಳ ಮೂಲಕವೂ ದೂರು ಸ್ವೀಕರಿಸುವ ವ್ಯವಸ್ಥೆ ಮಾಡಲಾಗಿದೆ. ಆದರೆ ಲಾಕ್ಡೌನ್ ಆದ ನಂತರ ಪ್ರತಿದಿನ ಬರುತ್ತಿದ್ದ ದೂರು ಕರೆಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಸಂಸ್ಥೆ ಹೇಳಿದೆ. ಈ ಮುನ್ನ ದಿನಕ್ಕೆ 10 - 15 ಕರೆಗಳು ಬರುತ್ತಿದ್ದವು. ಆದರೆ ಈಗ ಕರೆಗಳ ಸಂಖ್ಯೆ 4 ಕ್ಕೆ ಕುಸಿದಿದೆ. ಅಂದರೆ ಲಾಕ್ಡೌನ್ನಲ್ಲಿ ಮಹಿಳೆಯರು ಅನುಭವಿಸುತ್ತಿರುವ ಸಂಕಷ್ಟದ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬಹುದು.
ದೇಶಾದ್ಯಂತ ಲಾಕ್ಡೌನ್ ವಿಧಿಸಿದ ನಂತರ ಮೊದಲ ವಾರದಲ್ಲಿ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ 214 ದೂರು ಬಂದಿದ್ದವು. ಇದರಲ್ಲಿ 58 ಕೌಟುಂಬಿಕ ದೌರ್ಜನ್ಯಕ್ಕೆ ಸಂಬಂಧಿಸಿದವಾಗಿದ್ದವು. ಲಾಕ್ಡೌನ್ ಇಲ್ಲದಾಗ ಬರುತ್ತಿರುವುದಕ್ಕಿಂತಲೂ ಈಗ ದೂರಿನ ಸಂಖ್ಯೆ ಕಡಿಮೆ ಆಗಿದೆ ಅಥವಾ ಹೆಚ್ಚೂ ಕಡಿಮೆ ಅಷ್ಟೇ ಇದೆ ಎನ್ನಲಾಗಿದೆ.
2005ರ ಮಹಿಳಾ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯಡಿ ಸಹಾಯ ಪಡೆಯಬಹುದು ಎಂಬುದರ ಅರಿವು ಕೂಡ ಶೇ.88.5 ರಷ್ಟು ಸಂತ್ರಸ್ತ ಮಹಿಳೆಯರಿಗಿಲ್ಲ ಎಂದು ನ್ಯಾಷನಲ್ ಲಾ ಯೂನಿವರ್ಸಿಟಿಯ ಸಮೀಕ್ಷೆಯಲ್ಲಿ ಬೆಳಕಿಗೆ ಬಂದಿದೆ.
ತಕ್ಷಣ ಆಗಬೇಕಾಗಿರುವುದು
- ಕೌಟುಂಬಿಕ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗಾಗಿ ವೈದ್ಯಕೀಯ ಕೇಂದ್ರಗಳ ಸ್ಥಾಪನೆ
- ಕೌಟುಂಬಿಕ ದೌರ್ಜನ್ಯ ಪರಿಹಾರಕ್ಕಾಗಿಯೇ ವಿಶಿಷ್ಟ ಸಹಾಯವಾಣಿ
- ದೌರ್ಜನ್ಯ ನಡೆದಾಗ ಸಹಾಯ ಪಡೆಯುವುದು ಹೇಗೆ ಎಂಬುದನ್ನು ಸೋಶಿಯಲ್ ಮೀಡಿಯಾ ಮೂಲಕ ಜಾಗೃತಿ ಮೂಡಿಸುವುದು
- ಮಹಿಳೆಯರ ಸುರಕ್ಷತಾ ವಿಷಯವನ್ನು ಅಗತ್ಯ ವಸ್ತುಗಳ ಪಟ್ಟಿಗೆ ಸೇರಿಸುವುದು