ಶಿವಮೊಗ್ಗ: ನಗರದಲ್ಲಿ ನಿನ್ನೆ ರಾತ್ರಿ ಕ್ಷುಲ್ಲಕ ಕಾರಣಕ್ಕೆ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿಗಳನ್ನು ಘಟನೆ ನಡೆದ 8 ಗಂಟೆಯ ಒಳಗೆ ಬಂಧಿಸುವಲ್ಲಿ ದೊಡ್ಡಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ.
ನಿನ್ನೆ ರಾತ್ರಿ ಎನ್.ಟಿ. ರಸ್ತೆಯ ಸುಂದರ ಆಶ್ರಯ ಬಾರ್ ಒಳಗೆ ನಡೆದ ಸಣ್ಣ ಗಲಾಟೆಯಲ್ಲಿ ಜೀವನ್ ಹಾಗೂ ಕೇಶವ್ ಎಂಬುವರಿಗೆ ಚಾಕುವಿಂದ ಇರಿಯಲಾಗಿತ್ತು. ಇದರಲ್ಲಿ ಜೀವನ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದ. ಕೇಶವ್ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಮ್ಮದ್ ಸಮೀರ್ ಅಲಿಯಾಸ್ ಅಪ್ಪು(21), ಆದಿಲ್ ಪಾಷಾ(27), ಪ್ರತಾಪ್ ಅಲಿಯಾಸ್ ಅಣ್ಣಾ (24) ಹಾಗೂ ಸಕ್ಲೈನ್ ಮುಸ್ತಾಕ್ (21) ಎಂಬುವರನ್ನು ಬಂಧಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಐದು ಜನ ಆರೋಪಿಗಳು ಪರಾರಿಯಾಗಿದ್ದು, ಪೊಲೀಸರು ಬಲೆ ಬಿಸಿದ್ದಾರೆ.
ಪ್ರಕರಣದ ಹಿನ್ನೆಲೆ
ನಿನ್ನೆ ರಾತ್ರಿ ಜೀವನ್ ಹಾಗೂ ಆತನ ಸ್ನೇಹಿತರು ಪಾರ್ಟಿ ನಡೆಸಿದ್ದರು. ಅದೇ ರೀತಿ ಆರೋಪಿ ಮಹಮ್ಮದ್ ಸಮೀರ್ ಸಹ ತನ್ನ ಸ್ನೇಹಿತರೂಂದಿಗೆ ಪಾರ್ಟಿ ನಡೆಸಿದ್ದ. ಜೀವನ್ ಸಹೋದರ ಸಮೀರ್ಗೆ 'ಏನ್ ಭಾಯ್ ಹೇಗಿದ್ದಿಯಾ ಅಂತ ಕೇಳಿದ್ದಾನೆ'. ಇದಕ್ಕೆ ಬಾರ್ ಒಳಗೆ ಸಣ್ಣ ಕಿರಿಕ್ ನಡೆದು, ಅದು ಅಲ್ಲಿಗೆ ಮುಗಿದಿತ್ತು.
ಆದ್ರೆ ಬಾರ್ನಿಂದ ಹೊರ ಬಂದ ಸಮೀರ್ ಉಳಿದ ಸ್ನೇಹಿತರನ್ನು ಕರೆದುಕೊಂಡು ಬಂದಿದ್ದಾನೆ. ಅಷ್ಟರಲ್ಲಿ ಬಾರ್ ಹೊರಗೆ ನಿಂತಿದ್ದ ಜೀವನ್ ಹಾಗೂ ಕೇಶವ್ ಮೇಲೆ ಚಾಕುವಿನಿಂದ ಇರಿದು ಪರಾರಿಯಾಗಿದ್ದರು ಎಂದು ಎಸ್ಪಿ ಕೆ.ಎಂ.ಶಾಂತರಾಜು ತಿಳಿಸಿದ್ದಾರೆ.