ಬೆಂಗಳೂರು: ಸ್ಯಾಂಡಲ್‌ವುಡ್ ಡ್ರಗ್ ಮಾಫಿಯಾದ ತನಿಖೆಗೆ ಇಳಿದಿರುವ ಸಿಸಿಬಿ ಪೊಲೀಸರು ಪ್ರಕರಣವನ್ನು ಇಂಚಿಂಚು ಶೋಧಿಸಿ ಮಾಹಿತಿ ಕಲೆಹಾಕ್ತಿದ್ದಾರೆ. ಸದ್ಯದ ಮಟ್ಟಿಗೆ ಸ್ಯಾಂಡಲ್‌ವುಡ್ ಡ್ರಗ್ ಮಾಫಿಯಾದಲ್ಲಿ ಘಾಟಾನುಘಟಿಗಳ ಹೆಸರು, ಪೊಲೀಸ್ ಅಧಿಕಾರಿಗಳ ಹೆಸರುಗಳು ಹಾಗೂ ಖಾಸಗಿ ಚಾನೆಲ್‌ಗಳ ನಿರೂಪಕರ ಹೆಸರುಗಳು ಕೂಡ ಇದೆ ಎಂದು ಉನ್ನತ ಪೊಲೀಸ್ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಪೇಜ್ ತ್ರಿ ಪಾರ್ಟಿ ನಡೆಸ್ತಿದ್ದ ದಂಧೆಯ ಕಿಂಗ್ ಪಿನ್
ವೀರೇನ್ ಖನ್ನಾ ಸಿಸಿಬಿ ತನಿಖೆ ವೇಳೆ ಸಂಪರ್ಕದಲ್ಲಿದ್ದ ಪೊಲೀಸ್ ಅಧಿಕಾರಿಗಳ ಹೆಸರು ರಿವೀಲ್ ಮಾಡಿದ್ದಾನೆ. ಐಶಾರಾಮಿ ಹೋಟೆಲ್, ಪ್ರತಿಷ್ಠಿತ ಅಪಾರ್ಟ್ಮೆಂಟ್ ಕ್ಲಬ್ ಮತ್ತು ಪಬ್‌ಗಳಲ್ಲಿ ಪೇಜ್ ತ್ರಿ ಪಾರ್ಟಿಗಳನ್ನು ವೀರೇನ್ ಖನ್ನಾ ಆಯೋಜಿಸುತ್ತಿದ್ದ. ಈ ಪಾರ್ಟಿಗಳಲ್ಲಿ ಪೊಲೀಸ್ ಅಧಿಕಾರಿಗಳು, ನಿರೂಪಕರು, ರಾಜಕಾರಣಿಗಳ ಮಕ್ಕಳು, ಸ್ಟಾರ್ ನಟ-ನಟಿಯರು ಭಾಗವಹಿಸಿರುವ ಪಟ್ಟಿ ನೀಡಿದ್ದು, ಸದ್ಯ ವೀರೇನ್ ಖನ್ನಾ ಸಂಪರ್ಕದಲ್ಲಿದ್ದ ಪೊಲೀಸರಿಗೆ ಸಿಸಿಬಿ ನೋಟಿಸ್ ನೀಡುವ ಸಾಧ್ಯತೆ ಇದೆ.
ಇನ್ನು, ಪೊಲೀಸರನ್ನ ತನಿಖೆಗೆ ಒಳಪಡಿಸುವ ಕುರಿತು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ನೇತೃತ್ವದಲ್ಲಿ ಸಮಾಲೋಚನೆ ನಡೆಯುತ್ತಿದ್ದು, ಆರೋಪಿತ ಪೊಲೀಸ್ ಅಧಿಕಾರಿಗಳಿಗೆ ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದಲ್ಲಿ ವಿಚಾರಣೆ ನಡೆಸುವ ಸಾಧ್ಯತೆ ಇದೆ. ಸದ್ಯ ಡ್ರಗ್ ಮಾಫಿಯಾದ ಬೇರು ಬಹಳಷ್ಟು ಆಳದಲ್ಲಿದ್ದು, ಸಿಸಿಬಿ ತನಿಖೆ ಮುಂದುವರಿಸಿದೆ.