ಕಡಬ: ಜಿಲೆಟಿನ್ ಕಡ್ಡಿ ಹಾಗೂ ಮದ್ಯವನ್ನು ಅಕ್ರಮವಾಗಿ ಸಂಗ್ರಹಿಸಿದ್ದ ಹೋಟೆಲ್‌ವೊಂದರ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಅಕ್ರಮ ವಸ್ತುಗಳನ್ನು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 75ರ ಎಂಜಿರ ಸಮೀಪದ ಲಾವತ್ತಡ್ಕ ಎಂಬಲ್ಲಿ ನಡೆದಿದೆ.
ಬಂಧಿತ ಆರೋಪಿಯನ್ನು ಲಾವತ್ತಡ್ಕದ ಜನನಿ ಹೋಟೆಲ್ ಮಾಲೀಕ ಸತೀಶ್ ಎಂದು ಗುರುತಿಸಲಾಗಿದೆ. ಆರೋಪಿಯು ರಾಷ್ಟ್ರೀಯ ಹೆದ್ದಾರಿ 75ರ ಲಾವತ್ತಡ್ಕದಲ್ಲಿ ಗುಂಡ್ಯ ಹೊಳೆಯ ಬದಿಯಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಿಸಿ ಹೋಟೆಲ್ ನಡೆಸುತ್ತಿದ್ದು, ಇಲ್ಲಿ ಅಕ್ರಮ ಮದ್ಯ ಮಾರಾಟ, ಟ್ಯಾಂಕರ್‌ಗಳಿಂದ ಡೀಸೆಲ್, ಪೆಟ್ರೋಲ್ ಕಳವು ಮಾಡಿ ಮಾರಾಟ ಮಾಡುತ್ತಿದ್ದ ಹಾಗೂ ಜಿಲೆಟಿನ್ ಕಡ್ಡಿಗಳನ್ನೂ ಮಾರಾಟ ಮಾಡುತ್ತಿದ್ದ. ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಕಡಬ ಪೊಲೀಸರು ಭಾನುವಾರದಂದು ದಾಳಿ ನಡೆಸಿ ಅಕ್ರಮ ಸ್ವತ್ತುಗಳನ್ನು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.
ಹೋಟೆಲ್‌ನಲ್ಲಿ ಅಕ್ರಮ ಚಟುವಟಿಕೆಗಳ ಜೊತೆಗೆ ವೇಶ್ಯಾವಾಟಿಕೆಗೂ ಪ್ರೇರಣೆ ನಡೆಯುತ್ತಿತ್ತೆಂಬ ಆರೋಪವಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಈ ತನಕ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ ಸಾರ್ವಜನಿಕರು ರಾಜ್ಯದ ಗೃಹ ಇಲಾಖೆಗೆ ದೂರು ನೀಡಿದ್ದರು. ಇದೇ ದೂರಿನನ್ವಯ ಕಡಬ ಪೊಲೀಸರು ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ ಬೇರೆ ಸರ್ವೇ ನಂಬರ್ ಬಳಸಿ ಹೋಟೆಲ್ಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದುಕೊಂಡಿದ್ದ ಪ್ರಕರಣವನ್ನು ಪತ್ತೆ ಹಚ್ಚಿದ್ದ ಮೆಸ್ಕಾಂನ ವಿಜಿಲೆನ್ಸ್ ತಂಡವು ಕಳೆದ ಫೆಬ್ರವರಿಯಲ್ಲಿ ಈತನಿಗೆ ದಂಡವನ್ನೂ ವಿಧಿಸಿತ್ತು.