ರಾಮನಗರ: ಮೋಜು ಮಸ್ತಿಗಾಗಿ ನಕಲಿ ಎಟಿಎಂ ಕಾರ್ಡ್ ಸೃಷ್ಟಿಸಿ ಹಣ ಡ್ರಾ ಮಾಡುತ್ತಿದ್ದ ಇಬ್ಬರು ವಿದೇಶಿಗರು ಸೇರಿ ಮೂವರನ್ನು ಸೈಬರ್ ಠಾಣಾ ಪೊಲೀಸರು ಬಂಧಿಸಿದ್ದಾರೆ.
ನೈಜೀರಿಯಾ ಮೂಲದ ಅಲೂಕ ಸಾಂಡ್ರಾ ಒರೆಯಾ (25), ಹೆನ್ರಿ ಅಕ್ಯುಟಿಮೆನ್ (25) ಹಾಗೂ ಮಹಾರಾಷ್ಟ್ರ ಮೂಲದ ವಿಜಯ್ ಥಾಮಸ್ಸ್ ಬಂಧಿತರು. ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶದಲ್ಲಿ ವಾಸವಾಗಿದ್ದವರು ಎಂದು ತಿಳಿದು ಬಂದಿದೆ. ಆರೋಪಿಗಳಿಂದ ನೈಜೀರಿಯಾ ಪಾಸ್‌ಪೋರ್ಟ್ ಸೇರಿದಂತೆ ಕೃತ್ಯಕ್ಕೆ ಬಳಸಲಾಗುತ್ತಿದ್ದ ವಸ್ತುಗಳನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ಮಾರ್ಚ್ 2ರಂದು ಕನಕಪುರ ತಾಲೂಕಿನ ಬೂದಗುಪ್ಪೆ ರಸ್ತೆಯ ಇಂಡಿಯಾ ಎಟಿಎಂನಲ್ಲಿ ಗೀತಾ ಶಿವಲಿಂಗಯ್ಯ ಎಂಬುವವರು ಹಣ ಡ್ರಾ ಮಾಡಿಕೊಂಡು ಹೋಗಿದ್ದರು. ಇದಾದ ಬಳಿಕ ರಾತ್ರಿ ತಮ್ಮ ಖಾತೆಯಿಂದ 49 ಸಾವಿರ ಹಣ ಡ್ರಾ ಆಗಿರುವುದು ಅವರ ಮೊಬೈಲ್‌ಗೆ ಸಂದೇಶ ಬಂದಿದೆ. ಇದನ್ನು ಗಮನಿಸಿದ ಗೀತಾ ಅವರು, ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಆರೋಪಿಗಳ ಪತ್ತೆಗಾಗಿ ಸೈಬರ್ ಪೊಲೀಸರು ಮೂರು ತಂಡಗಳನ್ನು ರಚಿಸಲಾಗಿತ್ತು. ಆರೋಪಿಗಳ ಚಲನವಲನಗಳನ್ನು ಗಮನಿಸಿದ ಪೊಲೀಸರು, ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಇನ್ನು ಈ ಹಿಂದೆ ಎಟಿಎಂ ಸ್ಕಿಮ್ಲಿಂಗ್‌ನಲ್ಲಿ ಬಂಧಿತರಾಗಿದ್ದ ನೈಜೀರಿಯಾ ಮೂಲದ ಆರೋಪಿಗಳನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಲು ಹಣದ ಅವಶ್ಯಕತೆ ಇದ್ದ ಕಾರಣಕ್ಕೆ ಆರೋಪಿಗಳು ಈ ಕೃತ್ಯಕ್ಕೆ ಇಳಿದಿದ್ದಾಗಿ ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾರೆ.
ಜನ ಕಡಿಮೆ ಇರುವ ಪ್ರದೇಶಗಳನ್ನೇ ಟಾರ್ಗೆಟ್ ಮಾಡಿಕೊಳ್ಳುತ್ತಿದ್ದೆವು, ಎಟಿಎಂಗಳಿಗೆ ಸ್ಕಿಮ್ಮಿಂಗ್ ಮಿಷನ್ ಕ್ಯಾಮೆರಾಗಳನ್ನು ಅಳವಡಿಸಿ, ಆ ಮೂಲಕ ಗ್ರಾಹಕರ ಡೆಬಿಟ್ ಕಾರ್ಡಿನ ಪಿನ್ ನಂಬರ್‌ಗಳನ್ನು ಪಡೆದುಕೊಳ್ಳುತ್ತಿದ್ದರು. ಸಂಗ್ರಹಿಸಿದ ಮಾಹಿತಿಯನ್ನು ನಕಲಿ ಎಟಿಎಂ ಕಾರ್ಡ್ ಬಳಕೆ ಮಾಡಿಕೊಂಡು, ಬೇರೆ ಎಟಿಎಂಗಳಲ್ಲಿ ಹಣ ಡ್ರಾ ಮಾಡಿಕೊಳ್ಳುತ್ತಿದ್ದರು. ಬಂಧಿತ ಆರೋಪಿಗಳ ಮೇಲೆ ಜಿಲ್ಲೆಯಲ್ಲಿ 44 ಪ್ರಕರಣ, ಬೆಂಗಳೂರು ನಗರದಲ್ಲಿ 6 ಪ್ರಕರಣ, ಚಿತ್ರದುರ್ಗ ಜಿಲ್ಲೆಯಲ್ಲಿ 04 ಪ್ರಕರಣಗಳು ಸೇರಿದಂತೆ 54 ಪ್ರಕರಣ ದಾಖಲಾಗಿವೆ.
ಬಂಧಿತರಿಂದ 67,150 ರೂ. ಹಣ ಸೇರಿದಂತೆ ಒಂದು ಬೈಕ್, 9 ಮೊಬೈಲ್, 4 ಲ್ಯಾಪ್ ಟಾಪ್ ಸೇರಿದಂತೆ 22 ವಸ್ತುಗಳನ್ನ ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನೂಪ್ ಎ. ಶೆಟ್ಟಿ ತಿಳಿಸಿದರು.