ಬೆಂಗಳೂರು: ವೈವಾಹಿಕ ಜಾಲತಾಣವಾದ ಶಾದಿ ಡಾಟ್ ಕಾಂನಲ್ಲಿ ಪರಿಚಯವಾದ ಯುವಕನೊಬ್ಬ ಮದುವೆಯಾಗುವುದಾಗಿ ನಂಬಿಸಿ ಮಹಿಳೆಯಿಂದ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವಿಚ್ಚೇದಿತ ಮಹಿಳೆ ಕಳೆದ ಎರಡು ವರ್ಷಗಳಿಂದ ಸಂಗಾತಿಗಾಗಿ ಹುಡುಕುತ್ತಿದ್ದರು. ಹೀಗಿರುವಾಗ ಶಾದಿ ಡಾಟ್ಕಾಂನಲ್ಲಿ ಕಾರ್ತಿಕ್ ಎಂಬಾತನ ಪರಿಚಯವಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುವುದಾಗಿ ಹೇಳಿ ಮಹಿಳೆಗೆ ಆರೋಪಿ ಹತ್ತಿರವಾಗಿದ್ದ. ಬಳಿಕ ಮದುವೆಯಾಗುತ್ತೇನೆ ಎಂದು ನಂಬಿಸಿದ್ದಾನೆ. ಅಪಾರ್ಟ್ಮೆಂಟ್ ಖರೀದಿಸೋಣ ಎಂದು 70 ಲಕ್ಷ ರೂಪಾಯಿ ಹಣ ಪಡೆದು ಅರೆಹಳ್ಳಿಯ ಬಳಿ ಪ್ಲ್ಯಾಟ್ ಖರೀದಿಸಿದ್ದ.
ಕೆಲ ದಿನಗಳ ಬಳಿಕ ನಿನ್ನ ನಡತೆ ಸರಿಯಿಲ್ಲ ಎಂದು ಕಾರ್ತಿಕ್ ಮಹಿಳೆಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಮದುವೆಯಾಗುವುದಿಲ್ಲ ಎಂದು ಹೇಳಿದ್ದನಂತೆ. ವಿಚ್ಛೇದಿತ ಮಹಿಳೆಯ 13 ವರ್ಷದ ಮಗಳನ್ನು ಸಾಯಿಸುವುದಾಗಿ ಬೆದರಿಕೆ ಹಾಕಿ 28 ಲಕ್ಷ ರೂಪಾಯಿ ಪಡೆದು ವಂಚಿಸಿದ್ದಾನೆ. ಇದೇ ರೀತಿ ಹಲವು ಮಹಿಳೆಯರಿಗೆ ಮಾಡಿದ್ದಾನೆ ಎಂದು ಆರೋಪಿಸಿ ಮಹಿಳೆ ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿದ್ದಾರೆ.