ಮುಂಬೈ: ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಬಾಲಿವುಡ್ನ ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ವಿರುದ್ಧ ಪ್ರಕರಣ ದಾಖಲಿಸಿರುವ ನಟಿ ಪಾಯಲ್ ಘೋಷ್ ಅವರನ್ನು ಮುಂಬೈನ ವೆರ್ಸೋವ ಪೊಲೀಸರು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ.
ಅನುರಾಗ್ ಕಶ್ಯಪ್ ವಿರುದ್ಧ ಲೈಂಗಿಕ ಕಿರುಕುಳ (ಮೀಟೂ) ಆರೋಪ ಮಾಡಿದ್ದ ನಟಿ ಪಾಯಲ್ ಘೋಷ್, ವೆರ್ಸೋವ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಈ ಸಂಬಂಧ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದರು. ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಕಶ್ಯಪ್ ಅವರಿಗೆ ನೋಟಿಸ್ ನೀಡಿದ್ದರು. ಹೀಗಾಗಿ ಇಂದು ಬೆಳಗ್ಗೆ ಕಶ್ಯಪ್ ವಿಚಾರಣೆಗೆ ಹಾಜರಾಗಿದ್ದರು.
ಬಳಿಕ ಇಂದು ಮುಂಬೈನ ಅಂಧೇರಿಯ ಸರ್ಕಾರಿ ಆಸ್ಪತ್ರೆಗೆ ನಟಿಯನ್ನು ಕರೆದೊಯ್ದ ಪೊಲೀಸರು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ.
ಸೆ.19 ರಂದು ಪಾಯಲ್ ಘೋಷ್ ತನ್ನ ಟ್ವಿಟರ್ ಖಾತೆಯಲ್ಲಿ ಅನುರಾಗ್ ಕಶ್ಯಪ್ ತಮಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಬರೆದುಕೊಂಡಿದ್ದರು. ಬಳಿಕ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ 2014ರಲ್ಲಿ ಕೆಲಸಕ್ಕೆ ಸಂಬಂಧಿಸಿದಂತೆ ಕಶ್ಯಪ್ ಅವರ ಮನೆಗೆ ಹೋದಾಗ ಅವರು ನನ್ನ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದರು ಎಂದು ಪಾಯಲ್ ಹೇಳಿದ್ದರು.