ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ನಡೆದಿದ್ದ 2012ರ 'ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣ'ದಲ್ಲಿ ನಿರ್ಭಯಾ ಪರ ವಕೀಲೆಯಾಗಿದ್ದ ಸೀಮಾ ಕುಶ್ವಾಹ ಇದೀಗ ಹಥ್ರಾಸ್ ಸಂತ್ರಸ್ತೆಯ ಪರವಾಗಿ ಹೋರಾಟ ಮಾಡಲು ಮುಂದಾಗಿದ್ದಾರೆ. ಇದಕ್ಕೆ ಸಂತ್ರಸ್ತೆಯ ಕುಟುಂಬಸ್ಥರೂ ಒಪ್ಪಿಗೆ ಸೂಚಿಸಿದ್ದಾರೆ.
ಈ ಬಗ್ಗೆ 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ವಕೀಲೆ ಸೀಮಾ ಕುಶ್ವಾಹ, 'ಹಥ್ರಾಸ್ನ ಪುತ್ರಿ'ಗೆ ನ್ಯಾಯ ದೊರಕಿಸಿಕೊಡಲು ನನ್ನ ಕೈಲಾದ ಪ್ರಯತ್ನ ಮಾಡುತ್ತೇನೆ. ನಿರ್ಭಯಾ ಪ್ರಕರಣದಲ್ಲಿ ದೆಹಲಿ ಪೊಲೀಸರು ಸ್ವಲ್ಪ ಸಹಕಾರ, ಬೆಂಬಲ ನೀಡಿದ್ದರು. ಆದರೆ ಉತ್ತರ ಪ್ರದೇಶ ಪೊಲೀಸರ ನಡೆ, ದರ್ಪ ವಾಸ್ತವತೆಯನ್ನು ತಳ್ಳಿಹಾಕುತ್ತಿದೆ. ಹೀಗಾಗಿ ಆರೋಪಿಗಳಿಗೆ ಸುಲಭವಾಗಿ ಶಿಕ್ಷೆ ಒದಗಿಸಲು ಅಸಾಧ್ಯ. ಆದರೆ ಆರೋಪಿಗಳಿಗೆ ಶಿಕ್ಷೆಯಾಗೇ ಆಗುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಘಟನೆ ಬಳಿಕ ಸಂತ್ರಸ್ತೆಯ ಕುಟುಂಬ ಬೆದರಿಕೆ, ಭಯದ ನಡುವೆ ಬದುಕುತ್ತಿದೆ. ಹಿಂದಿನಿಂದ ಈವರೆಗೂ ದಲಿತ ಸಮುದಾಯದ ಜನರು ಶಕ್ತಿಯುತ ಎನಿಸಿಕೊಂಡಿರುವ ಮೇಲ್ವರ್ಗದವರ ವಿರುದ್ಧ ಹೋರಾಡಲು ಧೈರ್ಯ ತೋರಿಸುತ್ತಿಲ್ಲ. ಈ ದಲಿತ ಕುಟುಂಬದವರು ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಇದರಿಂದಾಗಿ ಬೆದರಿಕೆಗಳು ಬರುತ್ತಿವೆ. ಇವರ ರಕ್ಷಣೆ ಹಾಗೂ ಭದ್ರತೆ ದೃಷ್ಟಿಯಿಂದ ಪ್ರಕರಣವನ್ನು ದೆಹಲಿ ಪೊಲೀಸರಿಗೆ ಹಸ್ತಾಂತರಿಸಲು ಹಾಗೂ ವಿಚಾರಣೆಯನ್ನು ದೆಹಲಿಯಲ್ಲಿ ನಡೆಸಲು ಶೀಘ್ರದಲ್ಲೇ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸುವುದಾಗಿ ಸೀಮಾ ತಿಳಿಸಿದ್ದಾರೆ.
ಸತ್ಯಾಂಶವನ್ನು ಮರೆಮಾಚುತ್ತಿರುವ ಯುಪಿ ಪೊಲೀಸರ ವಿರುದ್ಧ ಎಫ್ಐಆರ್ ದಾಖಲಾಗಬೇಕು. ವಿಶೇಷ ತನಿಖಾ ತಂಡ (ಎಸ್ಐಟಿ) ಕೂಡ ಸರಿಯಾದ ರೀತಿಯಲ್ಲಿ ತನಿಖೆ ನಡೆಸುತ್ತಿಲ್ಲ. ಸಿಬಿಐ ತನಿಖೆಯು ಪ್ರಕರಣದಲ್ಲಿ ನ್ಯಾಯ ಒದಗಿಸಿ, ಸತ್ಯವನ್ನು ಬೆಳಕಿಗೆ ತರಲಿದೆ ಎಂಬ ನಂಬಿಕೆ ಇದೆ ಎಂದರು.
ಸೆಪ್ಟೆಂಬರ್ 14ರಂದು ಉತ್ತರ ಪ್ರದೇಶದ ಹಥ್ರಾಸ್‌ನಲ್ಲಿ 19 ವರ್ಷದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಕಾಮುಕರು, ಆಕೆ ಮೇಲೆ ಬರ್ಬರವಾಗಿ ಹಲ್ಲೆ ನಡೆಸಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಸಂತ್ರಸ್ತೆ ದೆಹಲಿಯ ಸಫ್ತರ್ಜಂಗ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಳು. ಮೃತದೇಹವನ್ನು ಸಂತ್ರಸ್ತೆಯ ಕುಟುಂಬಕ್ಕೆ ಹಸ್ತಾಂತರಿಸದೇ ಇತ್ತೀಚೆಗೆ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು.
ದೆಹಲಿಯಲ್ಲಿ 2012ರ ಡಿಸೆಂಬರ್ನಲ್ಲಿ ನಡೆದಿದ್ದ ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳಿಗೆ ಮರಣ ದಂಡನೆ ವಿಧಿಸಲು ನಿರ್ಭಯಾ ಪರ ವಕೀಲೆ ಸೀಮಾ ಕುಶ್ವಾಹ ಸತತ 7 ವರ್ಷಗಳ ಕಾಲ ಬೆದರಿಕೆಗಳನ್ನು ಎದುರಿಸಿ ಧೈರ್ಯದಿಂದ ಹೋರಾಡಿದ್ದರು.