ಹುಬ್ಬಳ್ಳಿ: ಬಾರ್ ಪರಿಶೀಲನೆಗೆ ಆಗಮಿಸಿದ ಅಬಕಾರಿ ಇಲಾಖೆ ಅಧಿಕಾರಿಗಳಿಂದ ಬಾರ್ ಮಾಲೀಕನ ಮೇಲೆ ಹಲ್ಲೆ ನಡೆದಿತ್ತು ಅನ್ನುವ ಆರೋಪಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ.
ಹುಬ್ಬಳ್ಳಿಯ ಕಾರವಾರ ರಸ್ತೆಯಲ್ಲಿರುವ ಪ್ರಿನ್ಸ್ ಗೇಟ್ ಬಾರ್ ಆ್ಯಂಡ್ ರೆಸ್ಟೋರೆಂಟ್ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಬಾರ್ ಮಾಲೀಕ ಶ್ರೀನಿವಾಸ ಜಿತೂರಿ, ಅಬಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ ಎಂದು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಅಬಕಾರಿ ಅಧಿಕಾರಿಗಳು ದೂರು ಸಲ್ಲಿಸುವ ಮೂಲಕ ಪ್ರಕರಣಕ್ಕೆ ಹೊಸ ಟ್ವಿಸ್ಟ್ ನೀಡಿದ್ದಾರೆ.
ಬೆಳಗಾವಿ ದಕ್ಷಿಣ ವಲಯದ ಅಬಕಾರಿ ಅಧಿಕಾರಿ ಮಂಜುನಾಥ ಮಲ್ಲಿಕೇರಿ ಎಂಬುವವರು ತಮ್ಮ ಮೇಲಧಿಕಾರಿಗಳ ಆದೇಶದ ಮೇರೆಗೆ ಹುಬ್ಬಳ್ಳಿ ಶಹರದಲ್ಲಿ ಇರುವ ಕೆಲವೊಂದು ಸಂಶಯಾತ್ಮಕ ಅಬಕಾರಿ ಸನ್ನದುಗಳನ್ನು ತಪಾಸಣೆ ಮಾಡಲು ಫೆ.06ರಂದು ಬೆಳಗಾವಿ ವಿಭಾಗದಿಂದ ಹುಬ್ಬಳ್ಳಿ ಶಹರಕ್ಕೆ ತಮ್ಮ ಸಿಬ್ಬಂದಿಯೊಂದಿಗೆ ಬಂದಿದ್ದರು. ಆ ಸಂದರ್ಭದಲ್ಲಿ ಶ್ರೀನಿವಾಸ ಜಿತೂರಿ ಮಾಲೀಕತ್ವದ ಹಳೇಹುಬ್ಬಳ್ಳಿ ಕಾರವಾರ ರಸ್ತೆಯಲ್ಲಿರುವ ಮೆ: ಗೋಲ್ಡನ್ ವೈನ್ಸ್ ಸಿ.ಎಲ್-2 ಸನ್ನದು ಮಳಿಗೆಗೆ ತೆರಳಿ ಅಲ್ಲಿ ತಪಾಸಣೆ ಮಾಡಿಕೊಂಡು, ಅಲ್ಲಿಂದ ಅದೇ ರಸ್ತೆಯಲ್ಲಿರುವ ವಿಜಯಲಕ್ಷ್ಮಿ ಮಗಜಿಕೊಂಡಿ ಮಾಲೀಕತ್ವದ ಶೀತಲ ಬಾರ್ನಲ್ಲಿ ತಪಾಸಣೆ ನಡೆಸುತ್ತಿದ್ದಾಗ ಶ್ರೀನಿವಾಸ ಜಿತೂರಿ, ಶೀತಲ ಬಾರ್ ಒಳಗೆ ಬಂದು ಅಬಕಾರಿ ಅಧಿಕಾರಿಗಳ ತಂಡಕ್ಕೆ, ಅವಾಚ್ಯ ಶಬ್ದದಿಂದ ನಿಂದಿಸಿ, ಜೀವ ಬೆದರಿಕೆ ಹಾಕಿದ್ದಾರೆ ಎಂದು ಅಬಕಾರಿ ಪೊಲೀಸರು ಆರೋಪಿಸಿದ್ದಾರೆ.
ಇದನ್ನುಓದಿ:ಬಾರ್ ಮಾಲೀಕನ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳಿಂದ ಹಲ್ಲೆ ಆರೋಪ
ಅಧಿಕಾರಿಗಳು ಸರ್ಕಾರಿ ಕರ್ತವ್ಯದ ಮೇಲೆ ಬಂದಿರುವುದಾಗಿ ತಿಳಿಸಿದರೂ ಕೂಡ ಕೇಳದೇ ಮೈ ಮೇಲೆ ಏರಿ ಹೋಗಿ ಅಡ್ಡಗಟ್ಟಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಅವರ ಮೇಲೆ ಹಲ್ಲೆ ಮಾಡಿದ್ದೂ ಅಲ್ಲದೇ ಬಿಡಿಸಲು ಬಂದ ಸಿಬ್ಬಂದಿ ಮತ್ತು ಸಾರ್ವಜನಿಕರನ್ನೂ ತಳ್ಳಿಹಾಕಿದ್ದಾರೆ ಎಂದು ಅಧಿಕಾರಿಗಳು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನ ಮೇಲೆ, ಪೊಲೀಸ್ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.