ಮುಂಬೈ: ನಟ ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಸಂಬಂಧಿಸಿದ ಡ್ರಗ್ಸ್ ಪ್ರಕರಣದಲ್ಲಿ ಬಾಲಿವುಡ್ ನಟಿ ಸಾರಾ ಅಲಿ ಖಾನ್ಗೆ ಮಾದಕ ವಸ್ತು ನಿಯಂತ್ರಣ ಬ್ಯೂರೋ (ಎನ್‌ಸಿಬಿ) ನೋಟಿಸ್ ನೀಡಿದ್ದು, ಇಂದು ವಿಚಾರಣೆಗೆ ಸಾರಾ ಹಾಜರಾಗಿದ್ದಾರೆ.
ಜೂನ್ 14ರಂದು ಮೃತಪಟ್ಟ ಸುಶಾಂತ್ ಸಿಂಗ್ ಸಾವಿನ ಪ್ರಕರಣವನ್ನು ವಿವಿಧ ಆಯಾಮಗಳಲ್ಲಿ ಭೇದಿಸಲಾಗುತ್ತಿದ್ದು, ಡ್ರಗ್ಸ್ ಲಿಂಕ್ ಕುರಿತ ತನಿಖೆ ನಡೆಸಲಾಗುತ್ತಿದೆ. ಈ ಸಂಬಂಧ ಅರೆಸ್ಟ್ ಆಗಿರುವ ನಟಿ ರಿಯಾ ಚಕ್ರವರ್ತಿ ಎನ್‌ಸಿಬಿ ವಿಚಾರಣೆ ವೇಳೆ ಸಾರಾ ಅಲಿ ಖಾನ್, ನಟಿ ರಕುಲ್ ಪ್ರೀತ್ ಸಿಂಗ್ ಮತ್ತು ಫ್ಯಾಷನ್ ಡಿಸೈನರ್ ಸಿಮೋನೆ ಖಂಬಟ್ಟಾ ಸೇರಿದಂತೆ ಕೆಲವು ಖ್ಯಾತ ನಟ-ನಟಿಯರು, ನಿರ್ಮಾಪಕರು ಮತ್ತು ನಿರ್ದೇಶಕರ ಹೆಸರನ್ನು ಹೇಳಿದ್ದಾರೆ. ಈ ಹಿಟ್ ಲಿಸ್ಟ್ನಲ್ಲಿ 20ಕ್ಕೂ ಹೆಚ್ಚು ಬಾಲಿವುಡ್ ತಾರೆಗಳಿದ್ದಾರೆ ಎಂದು ಹೇಳಲಾಗಿದೆ.
ಬಾಲಿವುಡ್ ಸೆಲೆಬ್ರಿಟಿಗಳಾದ ದೀಪಿಕಾ ಪಡುಕೋಣೆ, ಶ್ರದ್ಧಾ ಕಪೂರ್, ಸಾರಾ ಅಲಿ ಖಾನ್, ರಕುಲ್ ಪ್ರೀತ್ ಸಿಂಗ್ ಮತ್ತು ಫ್ಯಾಷನ್ ಡಿಸೈನರ್ ಸಿಮೋನೆ ಖಂಬಟ್ಟಾರಿಗೆ ಬುಧವಾರ ಎನ್‌ಸಿಬಿ ಸಮನ್ಸ್ ಜಾರಿಗೊಳಿಸಿತ್ತು. ಈ ಹಿನ್ನೆಲೆ ಗೋವಾದಲ್ಲಿದ್ದ ಸಾರಾ, ತನ್ನ ತಾಯಿ ಹಾಗೂ ಸಹೋದರನೊಂದಿಗೆ ನಿನ್ನೆ ಮುಂಬೈಗೆ ಬಂದಿದ್ದರು.
ಸುಶಾಂತ್ ಸಿಂಗ್ ಜೊತೆಗಿನ 'ಕೇದಾರನಾಥ್' ಸಿನಿಮಾ ಮೂಲಕ ಬಾಲಿವುಡ್ಗೆ ಪದಾರ್ಪಣೆ ಮಾಡಿದ ಸಾರಾ ಅಲಿ ಖಾನ್ (25), ನಟ ಸೈಫ್ ಅಲಿ ಖಾನ್ ಮತ್ತು ಅವರ ಮೊದಲ ಪತ್ನಿ, ನಟಿ ಅಮೃತ ಸಿಂಗ್ ಅವರ ಪುತ್ರಿಯಾಗಿದ್ದಾರೆ. ಅಲ್ಲದೆ ದಿವಂಗತ ಕ್ರಿಕೆಟ್ ದಂತಕಥೆ ಪಟೌಡಿ ಮತ್ತು ನಟಿ ಶರ್ಮಿಳಾ ಟ್ಯಾಗೋರ್ ಅವರ ಮೊಮ್ಮಗಳೂ ಹೌದು.