ಬೆಂಗಳೂರು: ಕೆಪಿಎಲ್ ನಲ್ಲಿ ನಡೆದ ಮ್ಯಾಚ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ಪ್ರಕರಣ ಅಗೆದಷ್ಟು ಆಳವಾಗುತ್ತಿದ್ದು, ಪ್ರಕರಣ ಸಂಬಂಧ ಕೆಎಸ್ ಸಿಎ ಕಾರ್ಯದರ್ಶಿ ಸಂತೋಷ್ ಮೆನನ್ ರನ್ನು ವಿಚಾರಣೆ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ನ್ಯಾಯಾಲಯದಿಂದ ಶೋಧನಾ ವಾರೆಂಟ್ ಪಡೆದಿದ್ದ ಪೊಲೀಸರು ಇಂದು ಬೆಳಗ್ಗೆ ಮನೆ ಮೇಲೆ ದಾಳಿ ಮಾಡಿ ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿರುವ ಮೆನನ್ ಪ್ರತ್ಯೇಕವಾಗಿ ಕ್ರಿಕೆಟ್ ಕೋಚಿಂಗ್ ಸೆಂಟರ್ ಪ್ರಾರಂಭ ಮಾಡಿದ್ದರು. ಈ ಮೂಲಕ 16 ಹಾಗೂ 19 ವರ್ಷದೊಳಗಿನ ರಣಜಿ ಕ್ರಿಕೆಟ್ಗೆ ಆಟಗಾರರನ್ನು ಅಕ್ರಮವಾಗಿ ಆಯ್ಕೆ ಮಾಡುತ್ತಿದ್ದ ಆರೋಪ ಇವರ ಮೇಲಿತ್ತು. ವಿಚಾರಣೆ ಹಿನ್ನೆಲೆಯಲ್ಲಿ ಮೆನನ್ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ನಿನ್ನೆಯಷ್ಟೇ ಬಳ್ಳಾರಿ ಟರ್ಸ್ಕಸ್ ತಂಡದ ಮಾಲೀಕ ಅರವಿಂದ್ ರೆಡ್ಡಿಯನ್ನು ಸಿಸಿಬಿ ಕಚೇರಿಗೆ ಕರೆಯಿಸಿ ತೀವ್ರ ವಿಚಾರಣೆಗೆ ಒಳಪಡಿಸಿದ್ದರು.