ಮಂಡ್ಯ : ಅಕ್ರಮ ಗಣಿಗಾರಿಕೆ ಪರಿಶೀಲನೆ ವೇಳೆ ತಹಶೀಲ್ದಾರ್ ಕರ್ತವ್ಯಕ್ಕೆ ವ್ಯಕ್ತಿಯೊಬ್ಬ ಅಡ್ಡಿಪಡಿಸಿದ ಘಟನೆ ತಾಲೂಕಿನ ಬೇಬಿಬೆಟ್ಟದ ಬಳಿ ಇಂದು ಮಧ್ಯಾಹ್ನ ನಡೆದಿದೆ. ತಾಲೂಕಿನ ಕಣಿವೆಕೊಪ್ಪಲು ಗ್ರಾಮದ ಕ್ರಷರ್ ಮಾಲೀಕ ಸನ್ಮತಿ ಜಯರಾಮ್ ಕ್ರಷರ್ ಅವರ ಮಗ ಜಯಂತ್ ವಿರುದ್ಧ ತಹಶೀಲ್ದಾರ್ ಅವರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದ ಮೇಲೆ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪ್ರಕರಣದ ಹಿನ್ನೆಲೆ : ತಾಲೂಕಿನ ಬೇಬಿಬೆಟ್ಟದಲ್ಲಿ ನಡೆಯುತ್ತಿರುವ ಮಾಲೀಕ ಸನ್ಮತಿ ಜಯರಾಮ್ ಮಾಲೀಕತ್ವದ ಕಲ್ಲುಗಣಿಗಾರಿಕೆ ಹಾಗೂ ಸ್ಫೋನ್ ಕ್ರಷರ್‌ಗಳ ಪರಿಶೀಲನೆಗಾಗಿ ತಹಶೀಲ್ದಾರ್ ಪ್ರಮೋದ್ ಎಲ್ ಪಾಟೀಲ್ ತೆರಳಿದ್ದರು. ಈ ವೇಳೆ ಕ್ರಷರ್‌ಗೆ ಲಾರಿಗಳ ಮೂಲಕ ಕಚ್ಚಾವಸ್ತು ಪೂರೈಕೆ ಆಗುತ್ತಿರುವುದು ಪತ್ತೆಯಾಗಿತ್ತು.
ಓದಿ-'ಶೋಶನ್ ಬೈಕ್ ಆವಿಷ್ಕಾರ'.. ಲಾಸ್ಟ್ ಬೆಂಚ್ ಸ್ಟುಡೆಂಟ್ ಸಾಧನೆಗೆ ಜನ ಫಿದಾ..
ಸದ್ಯ ಅಕ್ರಮವಾಗಿ ಕಲ್ಲು ಸಾಗಾಣಿಕೆ ಮಾಡುತ್ತಿದ್ದ ಎರಡು ಟಿಪ್ಪರ್‌ಗಳನ್ನು ವಶಕ್ಕೆ ಪಡೆಯಲಾಗಿದ್ದು, ಪಾಂಡವಪುರ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಜಯಂತ್ ವಿರುದ್ಧ ಪ್ರಕರಣ ದಾಖಲಾಗಿದೆ. ಕಳೆದ ಶನಿವಾರ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಸಚಿವ ಸಿ ಸಿ ಪಾಟೀಲ್, ಜಿಲ್ಲಾ ಉಸ್ತುವಾರಿ ಸಚಿವ ಕೆ ಸಿ ನಾರಾಯಣಗೌಡ, ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿ ಕಾರಿ ಸೇರಿದಂತೆ ಗಣಿ ಇಲಾಖೆಯ ಎಲ್ಲಾ ಅಧಿಕಾರಿಗಳು ಬೇಬಿಬೆಟ್ಟಕ್ಕೆ ಭೇಟಿಕೊಟ್ಟು ಪರಿಶೀಲಿಸಿ ಅಕ್ರಮ ಕಲ್ಲು ಗಣಿಗಾರಿಕೆ ತಡೆಯುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಈ ಹಿನ್ನೆಲೆ ತಹಶೀಲ್ದಾರ್ ಪ್ರಮೋದ್ ಎಲ್.ಪಾಟೀಲ್ ಅವರು ಅಕ್ರಮ ಕಲ್ಲುಗಣಿಗಾರಿಕೆಯ ಬಗ್ಗೆ ಪರಿಶೀಲಿಸಲು ಬೇಬಿಬೆಟ್ಟದ ಗಣಿಗಾರಿಕೆ ಪ್ರದೇಶಕ್ಕೆ ತೆರಳಿದ್ದರು.