ಮೈಸೂರು: ಗಂಡನಿಗೆ ಅಪಾಯವಾಗುತ್ತದೆ ಎಂದು ಗೃಹಿಣಿಯೊಬ್ಬಳನ್ನು ಬೆದರಿಸಿದ ಅರ್ಚಕನೊಬ್ಬ ಆಕೆಯ ಮಾಂಗಲ್ಯ ಸರವನ್ನು ಕದ್ದು ಪರಾರಿಯಾಗಿರುವ ಘಟನೆ ಮೈಸೂರಿನ ರಾಮಕೃಷ್ಣ ನಗರದಲ್ಲಿ ನಡೆದಿದೆ.
ನಂಜನಗೂಡಿನ ನಿವಾಸಿ ಇಂದಿರಾ ಮೋಸ ಹೋದ ಗೃಹಿಣಿಯಾಗಿದ್ದು, ಈಕೆ ರಾಯಚೂರಿನ ಖಾಸಗಿ ಶಾಲೆಯ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ತಮ್ಮ ಮಕ್ಕಳ ಅನಾರೋಗ್ಯದ ಕಾರಣ ಮೈಸೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ಬಂದ ಸಂದರ್ಭದಲ್ಲಿ ಆಸ್ಪತ್ರೆಯ ಸಿಬ್ಬಂದಿಯೊಬ್ಬರು ರಾಮಕೃಷ್ಣ ನಗರದಲ್ಲಿರುವ ಗಣೇಶ ದೇವಸ್ಥಾನದಲ್ಲಿ ಪೂಜೆ ಮಾಡಿಸಿ ಎಂದು ಹೇಳಿದ್ದಾರೆ. ದೇವಸ್ಥಾನದ ಅರ್ಚಕ ಫಣೀಶ್ ನಿಮ್ಮ ಗಂಡನಿಗೆ ಅಪಾಯವಿದೆ ಅದಕ್ಕೆ ಹೋಮ ಮಾಡಿಸಬೇಕು ಎಂದು ಆಕೆಯ 60 ಗ್ರಾಂ ತೂಕದ ಮಾಂಗಲ್ಯ ಸರ ಪಡೆದುಕೊಂಡಿದ್ದಾನೆ.
ಹೋಮ ಮಾಡುವಾಗ ಸರವನ್ನು ಡಬ್ಬಿಯಲ್ಲಿ ಹಾಕುವ ನೆಪದಲ್ಲಿ ನಕಲಿ ಸರ ಡಬ್ಬಿಗೆ ಹಾಕಿ ಪೂಜೆ ಮಾಡಿ ವಾಪಸ್ ಮಾಡಿದ್ದಾನೆ. ನಂತರ ಗೃಹಿಣಿ ಮನೆಗೆ ಹೋಗಿ ಆ ಡಬ್ಬಿಯನ್ನು ನೋಡಿದಾಗ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಇನ್ನೂ ಈ ಸಂಬಂಧ ಕುವೆಂಪು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.