ಬೆಂಗಳೂರು: ವ್ಯಕ್ತಿಯನ್ನು ಹತ್ಯೆ ಮಾಡಿ ಮೃತ ದೇಹವನ್ನು ದುಷ್ಕರ್ಮಿಗಳು ಆತನ ಏರಿಯಾದಲ್ಲೇ ಬಿಸಾಡಿದ್ದಾರೆ. ಮೃತನ ಜೇಬಿನಲ್ಲಿ ಕಾಂಡೋಮ್ ಪ್ಯಾಕೇಟ್ ಪತ್ತೆಯಾಗಿದ್ದು, ಅನೈತಿಕ ಸಂಬಂಧವೇ ಕೊಲೆಗೆ ಕಾರಣ ಇರಬಹುದು ಎಂಬ ಗುಮಾನಿ ಎದ್ದಿದೆ.
ಜಯನಗರದ ನಿವಾಸಿ ಶ್ರೀನಿವಾಸ ಮೃತರು. ನಗರದ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಯಲಚೇನಹಳ್ಳಿ, ಜಯನಗರ ಹಾಗೂ ಕುಮಾರಸ್ವಾಮಿ ಲೇಔಟ್ನಲ್ಲಿ ಹೇರ್ ಕಟಿಂಗ್ ಶಾಪ್ ಇಟ್ಟುಕೊಂಡು ಜೀವನ ನಡೆಸ್ತಿದ್ದ. ಸೋಮವಾರ ರಾತ್ರಿ 9.30 ರವರೆಗೆ ಶ್ರೀನಿವಾಸ್ ಅಂಗಡಿಯಲ್ಲಿದ್ದ. ನಂತರ ಅಂಗಡಿ ಬಾಗಿಲು ಮುಚ್ಚಿಕೊಂಡು ಹೋದ ಬಳಿಕ ಕೊಲೆಯಾಗಿದೆ. ಶ್ರೀನಿವಾಸ್ಗೆ ವಿವಾಹವಾಗಿದ್ದು, ಕೆಲ ವರ್ಷಗಳಿಂದ ಪತ್ನಿಯಿಂದ ದೂರವಿದ್ದ ಎನ್ನಲಾಗಿದೆ.
ಇಂದು ಮುಂಜಾನೆ ಮೃತದೇಹ ಪರಿಶೀಲನೆ ನಡೆಸಿದಾಗ ಆತನ ಜೇಬಿನಲ್ಲಿ ಕಾಂಡೋಮ್ ಪ್ಯಾಕೇಟ್ ಪತ್ತೆಯಾಗಿದೆ. ಇದು ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಪೊಲೀಸರಿಗೆ ಹಲವು ಆಯಾಮಗಳು ಸಿಕ್ಕಂತಾಗಿದೆ. ಎಸಿಪಿ ಮಹದೇವ್ ನೇತೃತ್ವದ ತಂಡ ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ. ಕೊಲೆಗೆ ಅನೈತಿಕ ಸಂಬಂಧ ಕಾರಣನಾ? ಅಥವಾ ಹಣಕಾಸಿನ ವ್ಯವಹಾರಕ್ಕೆ ಕೊಲೆ ಮಾಡಿದ್ದಾರಾ? ಎಂಬ ಪ್ರಶ್ನೆ ಪೊಲೀಸರಿಗೂ ಕಾಡ್ತಿದ್ದು, ಅದೇ ಆಯಾಮದಲ್ಲಿ ತನಿಖೆ ಮುಂದುವರೆಸಿದ್ದಾರೆ.
ದುಷ್ಕರ್ಮಿಗಳು ಶ್ರೀನಿವಾಸ್ ಅವರನ್ನು ಬೇರೆಡೆ ಕೊಲೆ ಮಾಡಿ ಮುಂಜಾನೆ ಕುಮಾರಸ್ವಾಮಿ ಲೇಔಟ್ನ ಔಟರ್ರಿಂಗ್ ರಸ್ತೆಯ ಆತನ ಅಂಗಡಿ ಮುಂಭಾಗಕ್ಕೆ ಎಸೆದು ಹೋಗಿದ್ದಾರೆ. ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.