ಗದಗ: ಎನ್.ಆರ್.ಇ.ಜಿ ಯೋಜನೆ ಅಡಿಯಲ್ಲಿ ಕೆಲಸ ಮಾಡಿದ್ದ ಕೂಲಿ ಹಣದ ಬಿಲ್ ಮಾಡಲು ಲಂಚದ ಬೇಡಿಕೆ ಇಟ್ಟಿದ್ದ ಎನ್ನಲಾದ ಪಿಡಿಓ ಎಸಿಬಿ ಬಲೆಗೆ ಬಿದ್ದಿರುವ ಘಟನೆ ಗದಗನಲ್ಲಿ ನಡೆದಿದೆ.
ಬಿದರಳ್ಳಿ ಗ್ರಾಮ ಪಂಚಾಯತ ಪಿ.ಡಿ.ಓ. ವೀರಣ್ಣ ವಡ್ಡರ ಎಸಿಬಿ ಬಲೆಗೆ ಬಿದ್ದ ಪಿಡಿಓ. ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಮುಂಡವಾಡ ಗ್ರಾಮದ ಚನ್ನವೀರಸ್ವಾಮಿ ಹಿರೇಮಠ ಅವರಿಂದ 10 ಸಾವಿರ ರೂ. ಲಂಚ ಸ್ವೀಕಾರ ಮಾಡುವಾಗ ಎಸಿಬಿ ಬಲೆಗೆ ಬಿದ್ದಿದ್ದಾನೆ.
ಬಿದರಳ್ಳಿ ಪಂಚಾಯತಿಯ 2019-20ನೇ ಸಾಲಿನ ಎನ್.ಆರ್.ಇ.ಜಿ ಕಾಮಗಾರಿಯಲ್ಲಿ ಮುಂಡವಾಡ ಗ್ರಾಮದ ಬಳಿಯ ಹಳ್ಳದ ಹೂಳು ತೆಗೆಯುವ ಕಾಮಗಾರಿಯ ಮಾಡಲಾಗಿತ್ತು. ಚನ್ನವೀರ ಸ್ವಾಮಿ ಹಿರೇಮಠ ಮತ್ತು ಅವರ ಮನೆಯ ನಾಲ್ಕು ಜನರು ಸೇರಿ 14 ದಿನ ಕೆಲಸ ಮಾಡಿದ್ದರು. ಜೊತೆಗೆ ಗ್ರಾಮದ ಹಲವಾರು ಜನ ಸಹ ಕೂಲಿ ಕೆಲಸ ಮಾಡಿದ್ದರು. ಹೂಳು ತೆಗೆಯುವ ಕೆಲಸವನ್ನು ಒಂದುವರೆ ತಿಂಗಳ ಹಿಂದೆ ಮುಗಿಸಲಾಗಿದ್ದರೂ, ಕೂಲಿ ಕಾರ್ಮಿಕರ ಬ್ಯಾಂಕ್ ಖಾತೆಗೆ ಕೂಲಿ ಹಣ ಜಮೆಯಾಗಿರಲಿಲ್ಲ. ಪಿ.ಡಿ.ಓ. ವೀರಣ್ಣ ವಡ್ಡರ ಬಿಲ್ ಮಾಡುವುದಾಗಿ ಹೇಳುತ್ತ ಸತಾಯಿಸಿದ್ದರು. ಜೊತೆಗೆ ಕಾಮಗಾರಿಯ ಬಿಲ್ ಮೊತ್ತ 5 ಲಕ್ಷ ರೂ. ಇದ್ದು, ಶೇ.5 ರಷ್ಟು ಲಂಚ ಕೊಟ್ಟರೆ ಬಿಲ್ ಮಂಜೂರು ಮಾಡುವುದಾಗಿ ಹೇಳಿದ್ದರಂತೆ.
ಎಲ್ಲ ಕೂಲಿ ಕಾರ್ಮಿಕರಿಂದ 10 ಸಾವಿರ ರೂ. ಸೇರಿಸಿ ಇಂದು ಪಿಡಿಓಗೆ ಕೊಡುವಾಗ ಎಸಿಬಿ ದಾಳಿಯಾಗಿದೆ. 10,000 ರೂ. ವಶಪಡಿಸಿಕೊಂಡು, ಪಿಡಿಓ ಅವರನ್ನು ವಶಕ್ಕೆ ಪಡೆಯಲಾಗಿದೆ. ಈ ಕುರಿತು ಗದಗ ಎಸಿಬಿ ಠಾಣೆಯಲ್ಲಿ ಪಿ.ಸಿ.ಆಕ್ಟ್ 1988 ರಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ.