ಅಥಣಿ: ತಾಲೂಕಿನ ಗುಂಡೇವಾಡಿ ಗ್ರಾಮದಲ್ಲಿ ಸಂಶಯಾಸ್ಪದ ರೀತಿಯಲ್ಲಿ ಮಹಿಳೆಯೊಬ್ಬರ ಶವ ಬಾವಿಯಲ್ಲಿ ಪತ್ತೆಯಾಗಿದೆ. ಜಯಾ ಸದಾಶಿವ ಪಾಟೀಲ (28) ಮೃತ ಮಹಿಳೆ. .
ಪತಿ ಮತ್ತು ಆತನ ಮನೆಯವರ ಕಿರುಕುಳಕ್ಕೆ ಬೇಸತ್ತು ಈಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಶಂಕೆ ವ್ಯಕ್ತವಾಗಿದೆ. ತಾಲೂಕಿನ ಯಕ್ಕಂಚಿ ಗ್ರಾಮದ ಜಯಾಳನ್ನು 9 ವರ್ಷಗಳ ಹಿಂದೆ ಗುಂಡೇವಾಡಿ ಗ್ರಾಮದ ಸದಾಶಿವ ಎಂಬವರಿಗೆ ವಿವಾಹ ಮಾಡಿ ಕೊಡಲಾಗಿತ್ತು. ನಾಲ್ವರು ಮಕ್ಕಳನ್ನು ಹೊಂದಿರುವ ಈ ದಂಪತಿ ಇತ್ತೀಚೆಗೆ ಹೆಚ್ಚು ಜಗಳವಾಡುತ್ತಿದ್ದರು.
ಈ ಮಹಿಳೆಗೆ ಸರಿಯಾಗಿ ಕೆಲಸ ಬರುತ್ತಿಲ್ಲ ಎಂದು ಆರೋಪಿಸಿ ಗಂಡ ಸದಾಶಿವ ಸೇರಿದಂತೆ ಮಾವ, ಅತ್ತೆ ಹೊಡೆಯುತ್ತಿದ್ದರು. ಹೀಗಾಗಿ ಕಿರುಕುಳ ತಾಳಲಾರದೆ ಸೋಮವಾರ ಮಧ್ಯಾಹ್ನ ತಮ್ಮ ತೋಟದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಮಾತು ಕೇಳಿ ಬರುತ್ತಿದೆ.
ಘಟನೆಯ ಬಳಿಕ ಗಂಡ ಸದಾಶಿವ, ಮಾವ ರಾಮಗೊಂಡ, ಅತ್ತೆ ರಾಜಶ್ರೀ, ಮೈದುನ ಚಿದಾನಂದ ಮನೆಯಿಂದ ಪರಾರಿಯಾಗಿದ್ದಾರೆ. ಇದರಿಂದ ಸಂಶಯಗೊಂಡ ಮೃತ ಮಹಿಳೆಯ ಸಹೋದರ ಮಹಾಂತೇಶ ಪಾಟೀಲ ಸೂಕ್ತ ತನಿಖೆ ನಡೆಸುವಂತೆ ಅಥಣಿ ಠಾಣೆಯಲ್ಲಿ ದೂರು ನೀಡಿದ್ದಾರೆ. ಸ್ಥಳಕ್ಕೆ ಡಿವೈಎಸ್ಪಿ ಎಸ್.ವಿ.ಗಿರೀಶ್ ಭೇಟಿ ನೀಡಿ ತನಿಖೆ ನಡೆಸಿದ್ದಾರೆ.