ಬೆಂಗಳೂರು: ಬಿಜೆಪಿ ಮುಖಂಡರ ಹೆಸರಲ್ಲಿ ವಂಚನೆ ಮಾಡುತ್ತಿದ್ದ ಆರೋಪಿ ಯುವರಾಜ್ ಅಲಿಯಾಸ್ ಸೇವಾಲಾಲ್ ಸ್ವಾಮಿಯ ಆಸ್ತಿಗೆ ಸಂಬಂಧಿಸಿದ ಪ್ರಕರಣವನ್ನು ಸಿಬಿಐ, ಜಾರಿ ನಿರ್ದೇಶನಾಲಯಕ್ಕೆ ಹಸ್ತಾಂತರಿಸಿದೆ.
ಸೇವಾಲಾಲ್ ಸ್ವಾಮಿ ಬಿಜೆಪಿ ನಾಯಕರ ಫೋಟೋ ಹಾಗೂ ಹೆಸರು ಹೇಳಿಕೊಂಡು ಬಹಳಷ್ಟು ಮಂದಿಯ ಬಳಿ ಹಣ, ಒಡವೆ, ಆಸ್ತಿ ಪೀಕಿದ್ದ ಎನ್ನಲಾಗಿತ್ತು. ಈ ಹಿನ್ನೆಲೆ ಸಿಸಿಬಿ ಪೊಲೀಸರು ಯುವರಾಜ್ ಮನೆ ಮೇಲೆ ದಾಳಿ ನಡೆಸಿ, ನಗದು ಮತ್ತು ಅಪಾರ ಪ್ರಮಾಣದ ಚೆಕ್ಗಳ ಪರಿಶೀಲನೆ ಮಾಡಿದ್ದರು. ಕೋಟಿ ಕೋಟಿ ಆಸ್ತಿಗಳನ್ನು ಹೆಂಡತಿ-ಮಕ್ಕಳ ಹೆಸರಲ್ಲಿ ಬೇರೆ ಬೇರೆ ಜಿಲ್ಲೆಗಳಲ್ಲಿ ಮಾಡಿದ್ದು, ಇದೆಲ್ಲವು ಅಕ್ರಮವಾಗಿದೆ ಎಂದು ದಾಳಿ ವೇಳೆ ತಿಳಿದುಬಂದಿದೆ. ಈ ಹಿನ್ನೆಲೆ ಪ್ರಕರಣದ ತನಿಖೆಯನ್ನು ಇಡಿಗೆ ಹಸ್ತಾಂತರಿಸಲಾಗಿದೆ.
ಇನ್ನು ತನಿಖೆ ವೇಳೆ ಯುವರಾಜ್ ಸುಳ್ಳು ಮಾಹಿತಿ ನೀಡಿದ್ದು ಹಾಗೂ ಸತ್ಯಾಸತ್ಯತೆ ಮರೆಮಾಚಿರುವ ವಿಚಾರ ಸಹ ಬಯಲಿಗೆ ಬಂದಿದೆ. ಹಾಗಾಗಿ ಸ್ವಾಮಿಯ ಬ್ಯಾಂಕ್ ಅಕೌಂಟ್ ಲಾಕರ್ ಅನ್ನು ಸಿಸಿಬಿ ಅಧಿಕಾರಿಗಳು ಓಪನ್ ಮಾಡಿ, ಹಲವು ಆಸ್ತಿ ಪತ್ರಗಳನ್ನು ವಶಕ್ಕೆ ಪಡೆದುಕೊಂಡಿದ್ದರು. ಜೊತೆಗೆ ಆರೋಪಿ ತನ್ನ ಪತ್ನಿ ಪ್ರೇಮಾ ಮತ್ತು ಮಗಳು ವೈಷ್ಣವಿ ಹೆಸರಲ್ಲಿ ಅಕ್ರಮ ಆಸ್ತಿ ಮಾಡಿ ಇಟ್ಟಿರುವುದು ತಿಳಿದು ಬಂದ ಹಿನ್ನೆಲೆ ತನಿಖೆ ಮುಂದುವರೆಸಲಾಗಿದೆ.
ಇದನ್ನೂ ಓದಿ: ಬಿಜೆಪಿ ನಾಯಕರ ಹೆಸರಲ್ಲಿ ವಂಚನೆ: ಯುವರಾಜ್ ಬ್ಯಾಂಕ್ ಲಾಕರ್ ತೆರೆದ ಸಿಸಿಬಿ