ಗುನಾ (ಮಧ್ಯಪ್ರದೇಶ): ದಲಿತ ಸಮುದಾಯಕ್ಕೆ ಸೇರಿದ ವ್ಯಕ್ತಿವೋರ್ವನನ್ನು ಕ್ಷುಲ್ಲಕ ಕಾರಣಕ್ಕೆ ಥಳಿಸಿ ಕೊಲೆ ಮಾಡಿರುವ ಪ್ರಕರಣ ಮಧ್ಯಪ್ರದೇಶದ ಗುನಾ ಜಿಲ್ಲೆಯ ಕರೋಂಡ್ ಗ್ರಾಮದಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಕರೋಂಡ್ ಗ್ರಾಮದ ಲಾಲ್ಜಿ ಎಂದು ಗುರುತಿಸಲಾಗಿದೆ. ಅದೇ ಗ್ರಾಮದ ಯಶ್ ಯಾದವ್ ಮತ್ತು ಅಂಕೇಶ್ ಯಾದವ್ ಆರೋಪಿಗಳು.
ಶುಕ್ರವಾರ ಸಂಜೆ ಆರೋಪಿಗಳು ಸಿಗರೇಟ್ ಸೇದಲು ಬೆಂಕಿಪೊಟ್ಟಣ ನೀಡುವಂತೆ ಲಾಲ್ಜಿ ಬಳಿ ಕೇಳಿದ್ದಾರೆ. ನನ್ನ ಬಳಿ ಮ್ಯಾಚ್‌ಬಾಕ್ಸ್ ಇಲ್ಲ, ನಾನು ಸಿಗರೇಟ್ ಸೇದುವುದಿಲ್ಲ ಎಂದು ಲಾಲ್ಜಿ ಹೇಳಿದ್ದಾನೆ. ಇದೇ ವಿಚಾರಕ್ಕೆ ವಾಗ್ವಾದ ನಡೆದಿದ್ದು, ಮರದ ಹಲಗೆಯಿಂದ ಲಾಲ್ಜಿ ತಲೆಗೆ ಹೊಡೆದು ಆರೋಪಿಗಳು ಪರಾರಿಯಾಗಿದ್ದಾರೆ.
ವಿಷಯ ತಿಳಿದ ಸ್ಥಳೀಯರು ತಕ್ಷಣವೇ ಲಾಲ್ಜಿಯನ್ನು ಶಿವಪುರಿ ವೈದ್ಯಕೀಯ ಕಾಲೇಜಿಗೆ ಕರೆದೊಯ್ದಿದ್ದಾರೆ. ಆದರೆ ಗಂಭೀರವಾಗಿ ಗಾಯಗೊಂಡಿದ್ದ ಆತ ಮೃತಪಟ್ಟಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.