ಬೆಂಗಳೂರು: ಸಿದ್ಲಗಟ್ಟ ಪಾಲಿಕೆ ಸದಸ್ಯನ ಕೊಲೆ ಪ್ರಕರಣದ ಆರೋಪಿಗಳಾದ ಇಬ್ಬರು ರೌಡಿ ಶೀಟರ್ಗಳ ಮೇಲೆ ಸಿಸಿಬಿ ಪೊಲೀಸರು ಶೂಟೌಟ್ ಮಾಡಿ ಬಂಧಿಸಿದ್ದಾರೆ.
ಹಂದಿ ಅಲಿಯಾಸ್ ಮಹೇಶ್ ಮತ್ತು ಸತೀಶ್ ಅಲಿಯಾಸ್ ಸೆಡ್ಕಾ ಗುಂಡೇಟು ತಿಂದ ರೌಡಿಗಳು. ನಗರದ ಬಿಟಿಎಂ ಲೇಔಟ್ ಬಳಿಯ ರಂಕಾ ಕಾಲನಿಯಲ್ಲಿ ತಲೆಮರೆಸಿಕೊಂಡಿರುವ ಮಾಹಿತಿ ಮೇರೆಗೆ ಸಿಸಿಬಿ ಇನ್ಸ್ಪೆಕ್ಟರ್ ಗಳಾದ ಕೇಶವ ಮೂರ್ತಿ ಮತ್ತು ಪುನೀತ್ ಕುಮಾರ್ ಆರೋಪಿಗಳನ್ನ ಹಿಡಿಯಲು ತೆರಳಿದ್ದಾರೆ. ಈ ವೇಳೆ, ಆರೋಪಿಗಳು ಪೇದೆ ಹನುಮೇಶ್ ಮೇಲೆ ಚಾಕುವಿನಿಂದ ಹಲ್ಲೆಗೆ ಯತ್ನ ಮಾಡಿದ್ದಾರೆ. ತಕ್ಷಣ ಎಚ್ಚೆತ್ತ ಪೊಲೀಸರು ಶರಣಾಗುವಂತೆ ಸೂಚಿಸಿದ್ರು ಮತ್ತೆ ಹಲ್ಲೆಗೆ ಮುಂದಾದಾಗ ಆರೋಪಿಗಳ ಕಾಲಿಗೆ ಗುಂಡು ಹಾರಿಸಿದ್ದಾರೆ.
ಇನ್ನು ಪ್ರಮುಖವಾಗಿ ಈ ಆರೋಪಿಗಳು 2016 ರಲ್ಲಿ ಸಿದ್ಲಗಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ಪಾಲಿಕೆ ಸದಸ್ಯನ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾಗಿದ್ದರು. ನಂತರ ತಲೆಮರೆಸಿಕೊಂಡು ಮತ್ತೆ 2019ರಲ್ಲಿ ಕೊಲೆ ಪ್ರಕರಣವೊಂದರಲ್ಲಿ ಭಾಗಿಯಾಗಿದ್ರು. ಇವರ ಮೇಲೆ ಈಗಾಗಲೇ ನ್ಯಾಯಾಲಯದ ವಾರಂಟ್ ಕೂಡ ಜಾರಿಯಲ್ಲಿದೆ. ಸದ್ಯ ಆರೋಪಿಗಳು ಸಿಸಿಬಿ ಖೆಡ್ಡಾಕ್ಕೆ ಬಿದ್ದಿದ್ದು, ಆತ್ಮರಕ್ಷಣೆ ಹಿನ್ನೆಲೆ ಪೊಲೀಸರು ಆರೋಪಿಗಳ ಮೇಲೆ ಫೈರಿಂಗ್ ಮಾಡಿ ಸ್ಥಳೀಯ ಆಸ್ಪತ್ರೆ ಗೆ ದಾಖಲಿಸಿದ್ದಾರೆ. ಈ ಸಂಬಂಧ ಮೈಕೋ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ ಮುಂದಿನ ತನಿಖೆ ಮುಂದುವರೆಸಲಿದ್ದಾರೆ.