ಸೀತಾಮರ್ಹಿ (ಬಿಹಾರ): ಶ್ರೀರಾಮ ಹಾಗೂ ಸೀತಾದೇವಿ ಬಗ್ಗೆ ವಿವಾದಾತ್ಮಕ ಹೇಳಿಕೆ ಸಂಬಂಧ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ವಿರುದ್ಧ ಬಿಹಾರದಲ್ಲಿ ಪ್ರಕರಣ ದಾಖಲಾಗಿದೆ.
ಬಿಹಾರದ ವಕೀಲ ಠಾಕೂರ್ ಚಂದನ್ ಸಿಂಗ್ ಎಂಬವರು, ರಾಮ-ಸೀತೆ ಬಗೆಗಿನ ಹೇಳಿಕೆಗಳಿಂದ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ ಎಂದು ಆರೋಪಿಸಿ ಸೀತಾಮರ್ಹಿ ಸಿವಿಲ್ ನ್ಯಾಯಾಲಯಕ್ಕೆ ದೂರು ನೀಡಿದ್ದಾರೆ. ಈ ಸಂಬಂಧ ಐಪಿಸಿ ಸೆಕ್ಷನ್ 295 ಎ ಮತ್ತು 120 ಬಿ ಅಡಿಯಲ್ಲಿ ಕೇಸ್ ದಾಖಲಿಸಿಕೊಳ್ಳಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚಂದನ್ ಸಿಂಗ್, ಬಂಗಾಳದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ಮುಸ್ಲಿಮರ ಮನವೊಲಿಸಲು ಹಿಂದೂ ಜನರ ಭಾವನೆಗಳಿಗೆ ಧಕ್ಕೆಯುಂಟಾಗುವ ಅಂತಹ ಹೇಳಿಕೆಗಳನ್ನು ನೀಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಸೀತೆಯನ್ನು ಹತ್ರಾಸ್ ಪ್ರಕರಣಕ್ಕೆ ಹೋಲಿಸಿದ ಟಿಎಂಸಿ ಸಂಸದನ ವಿರುದ್ಧ ಪ್ರಕರಣ
ಕೆಲದಿನಗಳ ಕಲ್ಯಾಣ್ ಬ್ಯಾನರ್ಜಿ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದರು. ಹಿಂದೆ ಸೀತೆಯ ಅಪಹರಣವನ್ನು ಉತ್ತರ ಪ್ರದೇಶದ ಹಥ್ರಾಸ್ ಪ್ರಕರಣಕ್ಕೆ ಹೋಲಿಕೆ ಮಾಡಿದ್ದ ಅವರು, ಅದೃಷ್ಟವಶಾತ್ ಸೀತೆಯನ್ನು ರಾವಣ ಅಪಹರಿಸಿದ್ದನು. ರಾಮನು ಭಕ್ತರು ಎನಿಸಿಕೊಳ್ಳುವ ಬಿಜೆಪಿ ಬೆಂಬಲಿಗರಿಂದ (ಕೇಸರಿ ಭಕ್ತರು) ಅಪಹರಣಕ್ಕೊಳಗಾಗಿದ್ದರೆ ಹಥ್ರಾಸ್ ಅತ್ಯಾಚಾರ ಸಂತ್ರಸ್ತೆಯ ಪರಿಸ್ಥಿತಿ ಸೀತೆಯದ್ದಾಗಿರುತ್ತಿತ್ತು ಎಂದು ಹೇಳಿದ್ದರು.
ಇದೇ ವಿಚಾರಕ್ಕೆ ಈಗಾಗಲೇ ಬಂಗಾಳದ ಹೌರಾ ಜಿಲ್ಲೆಯ ಗೋಲಾಬರಿ ಪೊಲೀಸ್ ಠಾಣೆಯಲ್ಲಿ ಕಲ್ಯಾಣ್ ಬ್ಯಾನರ್ಜಿ ವಿರುದ್ಧ ದೂರು ದಾಖಲಾಗಿದೆ.