ಚಾಮರಾಜನಗರ: ಬಿಳಿಗಿರಿರಂಗನ ಬೆಟ್ಟದ ಕಾಡಿನಲ್ಲಿ ಸಿಲುಕಿ ಪೊಲೀಸರಿಂದ ಬಚಾವಾದ ಮೂವರು ಪ್ರವಾಸಿಗರ ವಿರುದ್ಧ ಅರಣ್ಯ ಇಲಾಖೆ ಪ್ರಕರಣ ದಾಖಲಿಸಲು ಮುಂದಾಗಿದೆ.
ಈ ಕುರಿತು ಬಿಆರ್ಟಿ ಡಿಸಿಎಫ್ ಸಂತೋಷ್ 'ಈಟಿವಿ ಭಾರತ'ಕ್ಕೆ ಮಾಹಿತಿ ನೀಡಿದ್ದು, ನಿಯಮ ಉಲ್ಲಂಘಿಸಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ಪ್ರವೇಶಿಸಿರುವ ಚಾಮರಾಜನಗರ ತಾಲೂಕಿನ ವೀರನಪುರ ಕರಿಕಲ್ಲು ಗಣಿ ಮಾಲೀಕ, ಉದ್ಯಮಿ ರೂಪೇಶ್ ಕುಮಾರ್ ರೆಡ್ಡಿ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ತಿಳಿಸಿದ್ದಾರೆ.
ಸೆ.15 ರಂದು ಯಳಂದೂರಿನ ಮಾರ್ಗವಾಗಿ ಬಿಳಿರಂಗಸ್ವಾಮಿ ಬೆಟ್ಟಕ್ಕೆ ಬಂದಿರುವ ಉದ್ಯಮಿ ರೂಪೇಶ್ ಕುಮಾರ್ ರೆಡ್ಡಿ ಅವರ ಕಾರು ಗುಂಬಳ್ಳಿ ಚೆಕ್ ಪೋಸ್ಟ್ ನಲ್ಲಿ ಸಂಜೆ 5.10ಕ್ಕೆ ಅರಣ್ಯ ಪ್ರದೇಶವನ್ನು ಪ್ರವೇಶಿಸಿದೆ. ನಂತರ ಕಾಡು ನೋಡಲು ಅವಕಾಶ ಕೇಳಿರುವ ಉದ್ಯಮಿ ಹಾಗೂ ಅವರ ಪುತ್ರ, ನಾಗವಳ್ಳಿ ಮಾರ್ಗವಾಗಿ ಚಾಮರಾಜನಗರದತ್ತ ಹೊರಟಿದ್ದರು. ಕೆ.ಗುಡಿ ಅರಣ್ಯವ್ಯಾಪ್ತಿಯ ಕನ್ನೇರಿ ಕಾಲೋನಿ ಬಳಿ ಬಂದಾಗ ವಾಹನವು ಅಪಘಾತಕ್ಕೆ ಒಳಗಾಗಿ ಮಧ್ಯರಾತ್ರಿ 2ರವರೆಗೂ ಅರಣ್ಯದಲ್ಲೇ ಕಾಲ ಕಳೆದಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ರಸ್ತೆ ಬದಿಯ ಹಳ್ಳದಲ್ಲಿ ಕಾರು ಸಿಲುಕಿ ಪ್ರಾಣಿಗಳ ಭಯದಿಂದ ಅವಿತು ಕುಳಿತಿದ್ದ ಉದ್ಯಮಿ ರೂಪೇಶ್, ಅವರ ಮಗ ತೇಜೇಶ್ವರ್ ಹಾಗೂ ಚಾಲಕ ಕೇಶವ್ ಎಂಬವರನ್ನು ಡಿಸಿಐಬಿ ಪೊಲೀಸರು ರಕ್ಷಿಸಿ ಚಾಮರಾಜನಗರದ ಹೋಟೆಲ್ ಗೆ ತಲುಪಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದ್ದರು.