ಹಾಸನ: ಯುವತಿಯನ್ನ ಅಪಹರಿಸಿ ಬಲವಂತವಾಗಿ ತಾಳಿ ಕಟ್ಟಿದ ಆರೋಪಿ ಸೇರಿದಂತೆ ನಾಲ್ವರನ್ನು ಹಾಸನ ಗ್ರಾಮಾಂತರ ವೃತ್ತದ ಸಿಪಿಐ ತಂಡ ಮತ್ತು ದುದ್ದ ಠಾಣೆ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಹೆಡೆಮುರಿ ಕಟ್ಟಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ತಿಳಿಸಿದ್ದಾರೆ.
ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮನುಕುಮಾರ್, ವಿನಯ್, ಪ್ರವೀಣ್ ಕುಮಾರ್ ಮತ್ತು ಸಂದೀಪ್ ಬಂಧಿತ ಆರೋಪಿಗಳು. 2020 ಫೆಬ್ರುವರಿ 3 ರಂದು ದುದ್ದ ಪೊಲೀಸ್ ಠಾಣೆ ವ್ಯಾಪ್ತಿಯ ಗೌಡಗೆರೆ ಗ್ರಾಮದ ಯುವತಿವೋರ್ವಳು ಎಂದಿನಂತೆ ಹಾಸನ ನಗರಕ್ಕೆ ಟೈಲರಿಂಗ್ ಕಲಿಯಲು ಬಂದು ವಾಪಸ್ ಮನೆಗೆ ಬಾರದ ಕಾರಣ ಆಕೆಯ ಪೋಷಕರು ದುದ್ದ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ಬಗ್ಗೆ ದೂರು ನೀಡಿದ್ದರು. ಕಾಣೆಯಾಗಿದ್ದ ಯುವತಿಯನ್ನು ಕೆಲ ಯುವಕರು, ಅಪಹರಿಸಿ ಕಾರಿನಲ್ಲಿ ಆಕೆಗೆ ಬಲವಂತವಾಗಿ ತಾಳಿ ಕಟ್ಟುತ್ತಿದ್ದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದನ್ನು ತಿಳಿದ ಪೊಲೀಸರು ಆರೋಪಿಗಳ ಪತ್ತೆಗೆ ವಿಶೇಷ ತಂಡವನ್ನು ರಚಿಸಿದ್ದರು. ಇಂದು ರಾಮನಗರದಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಿ, ಬಂಧಿಸಲಾಗಿದೆ. ಆರೋಪಿಗಳ ವಿರುದ್ಧ ಅಪಹರಣ ಮತ್ತು ಬಲವಂತವಾಗಿ ತಾಳಿ ಕಟ್ಟಿದ ಬಗ್ಗೆ ದೂರು ದಾಖಲಾಗಿದೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.
ಇನ್ನು, ಯುವತಿಯನ್ನು ಬಲವಂತವಾಗಿ ಅಪಹರಿಸಿದ ನಾಲ್ವರಲ್ಲಿ ಮೂವರನ್ನು ಬಂಧಿಸಿದ್ದು, ಯುವತಿ ಕ್ಷೇಮವಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಅಪಹರಣ ಮಾಡಿ, ತಾಳಿ ಕಟ್ಟಿದ ವ್ಯಕ್ತಿ ಕುಡುಕುಂದಿ ಗ್ರಾಮದ ಮನುಕುಮಾರ್ ಹುಡುಗಿಯ ಸಂಬಂಧಿಯಾಗಿದ್ದು, ಈ ಹಿಂದೆಯೇ ಮದುವೆಯಾಗುವ ಬೇಡಿಕೆ ಇಟ್ಟಿದ್ದ ವೇಳೆ ಹುಡುಗಿಯ ಮನೆಯವರು ಇದಕ್ಕೆ ನಿರಾಕರಿಸಿದ್ದರು. ಉಳಿದ ಆರೋಪಿಗಳು ಮನು ಕುಮಾರ್ನ ಸ್ನೇಹಿತರಾಗಿದ್ದು, ತರಬೇನಹಳ್ಳಿಯ ವಿನಯ್ ಮತ್ತು ಕುಡುಕುಂದಿ ಗ್ರಾಮದ ಪ್ರವೀಣ್ ಕುಮಾರ್ ಮತ್ತು ಸಂದೀಪ್ ಎಂದು ತಿಳಿದು ಬಂದಿದೆ.
ಗ್ರಾಮಾಂತರ ವೃತ್ತ ಸಿಪಿಐ ಸತ್ಯನಾರಾಯಣ್ ನೇತೃತ್ವದ ತಂಡದ ಪಿಎಸ್ಐ ಎನ್.ಸಿ. ಮಧು, ಎ.ಎಸ್.ಐ. ದಾಸೇಗೌಡ, ದೇವರಾಜು, ಸಂತೋಷ್, ಕುಮಾರಿ, ಮುರುಳಿ, ರಘುನಾಥ್ ದಾಳಿ ನಡೆಸಿದ್ದರು. ಆರೋಪಿಗಳಾದ ಸಂದೀಪ್ ಮತ್ತು ಕಾರು ಚಾಲಕ ತಲೆಮರೆಸಿಕೊಂಡಿದ್ದಾರೆ.