ಬೆಂಗಳೂರು: ಮಹಿಳೆಯ ಖಾಸಗಿ ಕ್ಷಣದ ಫೋಟೊಗಳನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿರುವ ಪ್ರಕರಣ ನಗರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಸದ್ಯ ಸಂತ್ರಸ್ತೆ ಬಸವನಗುಡಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸಂತ್ರಸ್ತೆ ಮದುವೆಯಾಗಿದ್ದು, ಪತಿ ಜೊತೆ ಜರ್ಮನಿಯಲ್ಲಿದ್ದರು. ಇದೇ ವೇಳೆ ಫೇಸ್ಬುಕ್ ನಲ್ಲಿ ಹರಿಯಾಣ ಮೂಲದ ನಿತೇಶ್ ಫೇಸ್ಬುಕ್ ಮುಖಾಂತರ ಪರಿಚಯವಾಗಿದ್ದ. ಇಬ್ಬರ ನಡುವೆ ಸ್ನೇಹ ಬೆಳೆದು ಬೆಂಗಳೂರಿಗೆ ಬಂದಾಗ ಇಬ್ಬರು ಒಟ್ಟೊಟ್ಟಿಗೆ ಹೋಟೆಲ್ಗಳಿಗೆ ತಿರುಗಾಡಿದ್ದರು. ಈ ವೇಳೆ ಸಂತ್ರಸ್ತೆ ಜೊತೆ ನಿತೇಶ್ ಸಲುಗೆಯಿಂದ ಆಕೆಗೆ ಗೊತ್ತಾಗದ ಹಾಗೆ ಫೋಟೊ, ವಿಡಿಯೋ ಸೆರೆಹಿಡಿದಿದ್ದ. ಈ ವಿಚಾರ ಮಹಿಳೆಗೆ ಗೊತ್ತಾಗಿ ಆತನಿಂದ ದೂರ ಉಳಿದಿದ್ದಳು.
ಕಳೆದ ತಿಂಗಳು ಮಹಿಳೆಯು ಎನ್. ಆರ್. ಕಾಲೋನಿಯಲ್ಲಿರುವ ತನ್ನ ತಂದೆ ಮನೆಯಲ್ಲಿರುವಾಗ ನಿತೇಶ್ ಸಂತ್ರಸ್ತೆಯ ತಂದೆಗೆ ಕರೆ ಮಾಡಿ ಅವಹೇಳನಕಾರಿಯಾಗಿ ಮಾತಾಡಿದ್ದ. ಆಕೆ ತನ್ನ ಜೊತೆ ಸಂಬಂಧ ಮುಂದುವರೆಸಬೇಕು. ಇಲ್ಲದಿದ್ದರೆ ಖಾಸಗಿ ಫೋಟೊಗಳನ್ನು ವೈರಲ್ ಮಾಡುವುದಾಗಿ ಫೋನ್ ಮಾಡಿ ಬೆದರಿಕೆ ಹಾಕಿದ್ದ. ಹಾಗೆ ಆಕೆಯ ತಂದೆಯ ವಾಟ್ಸಪ್ ನಂಬರ್ಗೆ ಫೋಟೊ ಕಳುಹಿಸಿದ್ದ. ಈಗಲೂ ಆಕೆ ಒಪ್ಪದಿದ್ದರೆ ಖಾಸಗಿ ಕ್ಷಣದ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಬೆದರಿಸಿದ್ದಾನೆ.
ಸದ್ಯ ಈ ವಿಚಾರವಾಗಿ ಹೆದರಿರುವ ಸಂತ್ರಸ್ತೆ ತನ್ನ ತಂದೆ ಜೊತೆ ತೆರಳಿ ಬಸವನಗುಡಿ ಠಾಣೆಯಲ್ಲಿ ದೂರು ನೀಡಿದ್ದಾಳೆ.