ತೆಲಂಗಾಣ: ಕೋತಿಯೊಂದಕ್ಕೆ ನೇಣು ಬಿಗಿದು ಅಮಾನವೀಯವಾಗಿ ಕೊಂದು ದುಷ್ಕರ್ಮಿಗಳು ಅಟ್ಟಹಾಸ ಮೆರೆದಿರುವ ಘಟನೆ ತೆಲಂಗಾಣದ ಖಮ್ಮಂ ಜಿಲ್ಲೆಯಲ್ಲಿ ನಡೆದಿದೆ.
ಘಟನೆ ಸಂಬಂಧ ಮೂವರು ಆರೋಪಿಗಳನ್ನು ತೆಲಂಗಾಣದ ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದು 25 ಸಾವಿರ ರೂ. ದಂಡ ವಿಧಿಸಿದ್ದಾರೆ. ಖಮ್ಮಂ ಜಿಲ್ಲೆಯ ಸತುಪಲ್ಲಿ ನಿವಾಸಿಗಳಾದ ವೆಂಕಟೇಶ್ವರರಾವ್, ಗೌಡೆಲ್ಲಿ ಗಣಪತಿ, ರಾಜಶೇಖರ್ ಪ್ರಕರಣದ ಆರೋಪಿಗಳು.
ನಿತ್ಯ ಮಂಗಗಳ ಗುಂಪೊಂದು ತೋಟಕ್ಕೆ ನುಗ್ಗಿ ಮಾವಿನ ಬೆಳೆ ನಾಶ ಮಾಡುತ್ತಿತ್ತು. ಇದರಲ್ಲಿ ಒಂದು ಕೋತಿ ವೆಂಕಟೇಶ್ವರರಾವ್ ಮನೆ ಬಳಿ ಇದ್ದ ನೀರಿನ ತೊಟ್ಟಿಯಲ್ಲಿ ನೀರು ಕುಡಿಯಲು ಹೋಗಿ ಬಿದ್ದಿದೆ. ಈ ಕೋತಿಯನ್ನು ಹಿಡಿದ ಆತ ಇತರರೊಂದಿಗೆ ಸೇರಿ ತೋಟದ ಬಳಿ ಅದನ್ನು ತೆಗೆದೊಕೊಂಡು ಹೋಗಿ, ಬೇರೆ ಕೋತಿಗಳನ್ನು ಹೆದರಿಸಲು ಕೃತ್ಯ ಎಸಗಿರುವುದಾಗಿ ತಿಳಿದು ಬಂದಿದೆ.
ಕೃತ್ಯದ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ. ಈ ಸಂಬಂಧ ಮೂವರು ಯುವಕರನ್ನು ಬಂಧಿಸಿ, ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಸತುಪಲ್ಲಿ ಅರಣ್ಯಾಧಿಕಾರಿ (ಎಫ್‌ಆರ್‌ಒ) ತಿಳಿಸಿದ್ದಾರೆ.