ಬೆಂಗಳೂರು: ಆನ್‌ಲೈನ್‌ನಲ್ಲಿ ಕೆಲಸಕ್ಕಾಗಿ ಉದ್ಯೋಗಾಂಕ್ಷಿಯಿಂದ ಅರ್ಜಿ ಸ್ವೀಕರಿಸಿದ್ದ ಕಂಪನಿಯೊಂದು ಹೆಚ್ಚಿನ ಹಣ ಸಂಪಾದನೆ ಮಾಡುವ ಆಮಿಷ ತೋರಿಸಿ 50 ಲಕ್ಷ ರೂ. ವಂಚಿಸಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ.
ಉಮೇಶ್, ಅಲಿಸಾ, ಗ್ಲಾನ್‌ಡಾನ್, ಜೇಮ್ಸ್, ನೆಹರು ಸಿಂಗ್, ಕುಮಾರ್ ಎಂಬುವವರ ವಿರುದ್ಧ ವರ್ತೂರು ನಿವಾಸಿ ಲಾಲ್ ವಾಸ್ವಾನ್ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿರುವ ವೈಟ್ ಫೀಲ್ಡ್ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.
ಓದಿ-ಲವರ್ಗೆ ನರ್ಸ್ಗಳ ಸ್ನಾನದ ವಿಡಿಯೋ ಕಳುಹಿಸುತ್ತಿದ್ದ ನರ್ಸ್: ಪ್ರಿಯತಮ ಏನು ಮಾಡುತ್ತಿದ್ದ ಗೊತ್ತಾ!
ಪ್ರಕರಣದ ಹಿನ್ನೆಲೆ
ಆನ್‌ಲೈನ್‌ನಲ್ಲಿ ಉದ್ಯೋಗ ಹುಡುಕುತ್ತಿದ್ದ ಲಾಲ್ ವಾಸ್ವಾನ್‌ಗೆ ನೆಹರು ಸಿಂಗ್ ಎಂಬುವರ ಪರಿಚಯವಾಗಿದೆ. ಆಗ 1000 ರೂ. ಪಾವತಿಸಿ ನೆಹರು ಸಿಂಗ್ ಕಂಪನಿಗೆ ಸೇರಿದ್ದರು. ನಂತರ ಲಾಲ್ಗೆ ಹೆಚ್ಚಿನ ಹಣ ಸಂಪಾದನೆ ಮಾಡಿಸುವುದಾಗಿ ನಂಬಿಸಿ ವಿವಿಧ ಕಂಪನಿಗಳಲ್ಲಿ ಹಣ ಹೂಡಿಕೆ ಮಾಡಿಸಿದ್ದರು. ಮೊದಲು ಎರಡು ಬಾರಿ ಲಾಲ್ ವಾಸ್ವಾನ್ ಲಾಭ ಪಡೆದಿದ್ದ. ಬಳಿಕ ಸುಮಾರು 50 ಲಕ್ಷ ರೂ. ಹೂಡಿಕೆ ಮಾಡಿಸಿದ ವಂಚಕರು ತಮ್ಮ ಖಾತೆಗೆ ಹಣ ವರ್ಗಾವಣೆ ಮಾಡಿಸಿಕೊಂಡು ನಾಪತ್ತೆಯಾಗಿದ್ದರು. ಕೊನೆಗೆ ಲಾಲ್ಗೆ ಅಸಲು ಹಣ ಯಾವುದನ್ನೂ ನೀಡದೇ ವಂಚನೆ ಮಾಡಿದ್ದಾರೆ.
ಸದ್ಯ ಹಣ ಕಳೆದುಕೊಂಡ ವಾಸ್ವಾನ್ ವೈಟ್‌ಫೀಲ್ಡ್ ಸೈಬರ್ ಠಾಣೆಗೆ ದೂರು ನೀಡಿದ್ದಾರೆ. ಐಟಿ ಕಾಯ್ದೆಯಡಿ ವಂಚನೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.