ಬೀಜಿಂಗ್: ಚೀನಾದಲ್ಲಿ ತಮ್ಮದೇ ರಾಜಕೀಯ ತಂತ್ರಗಾರಿಕೆಯಿಂದ ಪ್ರಾಬಲ್ಯ ಸಾಧಿಸಿರುವ ಕ್ಸಿ ಜಿನ್‌ಪಿಂಗ್ ದಾಖಲೆಯ ಮೂರನೇ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಶನಿವಾರದಿಂದ ನಡೆದ ಕಮ್ಯುನಿಸ್ಟ್ ಪಕ್ಷದ ಸಭೆಯಲ್ಲಿ ಕ್ಸಿ ಜಿನ್ಪಿಂಗ್ರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಯನ್ನಾಗಿ ಕೂಡ ನೇಮಿಸಲಾಗಿದೆ.
69 ವರ್ಷದ ಕ್ಸಿ ಜಿನ್‌ಪಿಂಗ್ ಪಕ್ಷದ ಸಂಸ್ಥಾಪಕ ಮಾವೋ ಝೆಡಾಂಗ್ರ ನಂತರ ಅತ್ಯಂತ ಶಕ್ತಿಶಾಲಿ ನಾಯಕರಾಗಿ ಹೊರಹೊಮ್ಮಿದ್ದಾರೆ. ಪಕ್ಷದ ಯಾವುದೇ ನಾಯಕರ ಅಧಿಕೃತ ನಿವೃತ್ತಿ ವಯಸ್ಸು 68. ಕ್ಸಿ ಜಿನ್‌ಪಿಂಗ್ ಇದನ್ನು ದಾಟಿ 10 ವರ್ಷಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ್ದರೂ ಮೂರನೇ ಬಾರಿಗೆ ಡ್ರ್ಯಾಗನ್ ದೇಶದ ಅಧ್ಯಕ್ಷರಾಗಿ ಮುಂದುವರಿದಿದ್ದಾರೆ.
ಇದೇ ವೇಳೆ ಕಮ್ಯುನಿಸ್ಟ್ ಪಕ್ಷದ ಎರಡನೇ ಪ್ರಭಾವಿ ನಾಯಕ ಪ್ರೀಮಿಯರ್ ಲಿ ಕೆಕಿಯಾಂಗ್ ಸೇರಿದಂತೆ ಹಲವು ಹಿರಿಯ ನಾಯಕರು ಕೇಂದ್ರ ಸಮಿತಿಗೆ ಮರು ಆಯ್ಕೆಯಾಗಲು ವಿಫಲರಾಗಿ ನಿವೃತ್ತರಾದರು. ಸರ್ಕಾರದ ನೀತಿ ನಿಯಮ ರೂಪಿಸುವ ಕೇಂದ್ರ ಸಮಿತಿಗೆ 25 ಸದಸ್ಯರನ್ನು ಭಾನುವಾರ ಆಯ್ಕೆ ಮಾಡಲಾಯಿತು.
ನಿಷ್ಠೆಯಿಂದ ಕೆಲಸ ಮಾಡುವೆ: ತಮ್ಮ ಮೇಲೆ ನಂಬಿಕೆಯಿಟ್ಟು ಮೂರನೇ ಬಾರಿಗೆ ಆಯ್ಕೆ ಮಾಡಿದ್ದಕ್ಕೆ ಧನ್ಯವಾದ ಹೇಳಿರುವ ಕ್ಸಿ, ನಿಷ್ಠೆಯಿಂದ ಕೆಲಸ ಮಾಡುವುದಾಗಿ ಭರವಸೆ ನೀಡಿದ್ದಾರೆ.
ಸೆಣಸಾಡುವ ಧೈರ್ಯ, ಗೆಲ್ಲುವ ಛಲ, ನಡು ಬಗ್ಗಿಸಿ ದುಡಿಮೆ, ಮುನ್ನುಗ್ಗುವ ಸಂಕಲ್ಪ ತೊಡಬೇಕು ಎಂದ ಕ್ಸಿ, ಸಮಸ್ಯೆಗಳನ್ನು ಎದುರಿಸುವ ಛಾತಿ ನಮ್ಮಲ್ಲಿರಬೇಕು. ಸುಳಿಗಾಳಿ, ಚಂಡಮಾರುತವನ್ನೂ ನಾವು ಮೆಟ್ಟಿ ನಿಲ್ಲಬೇಕು ಎಂದು ಹೇಳಿದ್ದಾರೆ.
ರಾಷ್ಟ್ರೀಯ ಹಿತಾಸಕ್ತಿಯೇ ನಮ್ಮ ಮೊದಲ ಧ್ಯೇಯ. ನಮ್ಮ ಎದುರಾಳಿಗಳನ್ನು ಸಮರ್ಥವಾಗಿ ನಿಭಾಯಿಸಬೇಕು. ದೇಶ ಮುನ್ನೆಲೆಗೆ ಬರುವುದೇ ಮುಖ್ಯವಾಗಬೇಕು ಎಂದು ಕ್ಸಿ ಕಮ್ಯುನಿಸ್ಟ್ ಪಕ್ಷದ ಸಮಾರೋಪ ಸಮಾರಂಭದಲ್ಲಿ ಹೇಳಿಕೆ ನೀಡಿದ್ದಾರೆ.
ಓದಿ: ಚೀನಾದ ಮಾಜಿ ಅಧ್ಯಕ್ಷರನ್ನು ಸಭೆಯಿಂದ ಹೊರದಬ್ಬಿದ ಏಜೆಂಟ್‌ಗಳು.. ಮೌನ ವಹಿಸಿದ ಕ್ಸಿ ಜಿನ್‌ಪಿಂಗ್